Advertisement

ನಿರಾಶ್ರಿತ ಕುಟುಂಬಗಳಿಗೆ ಗಂಜಿ ಕೇಂದ್ರ

11:27 AM Jul 18, 2018 | |

ಉಳ್ಳಾಲ : ಒಂದೆಡೆ ಶಾಶ್ವತ ಕಾಮಗಾರಿ, ಇನ್ನೊಂದೆಡೆ ಕಡಲ್ಕೊರೆತ. 35 ವರ್ಷಗಳಿಂದ ಇರುವ ಈ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಉಳ್ಳಾಲ ಕೋಟೆಪುರದಿಂದ ಮೊಗವೀರಪಟ್ಣವರೆಗಿನ ಶೇ. 75 ಪ್ರತಿಶತ ಪ್ರದೇಶ ಕಡಲ್ಕೊರೆತ ಸಮಸ್ಯೆಯಿಂದ ಮುಕ್ತವಾದರೆ, ಕೈಕೋ ಮತ್ತು ಕಿಲೇರಿಯಾನಗರದಿಂದ ಸೋಮೇಶ್ವರ ಉಚ್ಚಿಲದವರೆಗಿನ ಜನರು ತೊಂದರೆ ಅನುಭವಿಸುತ್ತಿದ್ದಾರೆ.

Advertisement

ಮೂರು ದಿನಗಳಿಂದ ಕೈಕೋ ಮತ್ತು ಕಿಲೇರಿಯಾ ನಗರದ ಜನರು ತತ್ತರಿಸಿದ್ದು, ಸಮುದ್ರ ತೀರದಲ್ಲಿ ಮಂಗಳವಾರವೂ ಕಡಲ್ಕೊರೆತದ ಸಮಸ್ಯೆ ಮುಂದುವರೆದಿದೆ. ಎಡಿಬಿಯಿಂದ 237 ಕೋಟಿ ರೂ ವೆಚ್ಚದಲ್ಲಿ ಶಾಶ್ವತ ಕಾಮಗಾರಿಯ ಪೈಲೆಟ್‌ ಯೋಜನೆ ಕೇವಲ 2.5 ಕಿ.ಮೀ. ವ್ಯಾಪ್ತಿಯನ್ನು ಮಾತ್ರ ಸೇರಿಸಲಾಗಿದೆ. ಇನ್ನೊಂದೆಡೆ ಶಾಶ್ವತ ಕಾಮಗಾರಿ ಯ ಪರಿಣಾಮದಿಂದ ಕೈಕೋ ಕಿಲೇರಿಯಾ ನಗರ, ಸಿಗ್ರೌಂಡ್‌ ಪ್ರದೇಶದಲ್ಲಿ ಸಮುದ್ರಕೊರೆತ ಹಿಂದಿಗಿಂತಲೂ ಹೆಚ್ಚಾಗಿದೆ. ಉಳ್ಳಾಲದ ಕಾಮಗಾರಿ ಪ್ರಾರಂಭದ ಹಂತದಿಂದ ಸೋಮೇಶ್ವರ ಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತ ಪ್ರಾರಂಭಗೊಂಡು ಮನೆಗಳು ಸಮುದ್ರ ಪಾಲಾಗುವಂತಾಗಿದೆ.

ಮೊಗವೀರಪಟ್ಣದಲ್ಲೂ ಸಮಸ್ಯೆ
ಕಡಲ್ಕೊರೆತ ಶಾಶ್ವತ ಕಾಮಗಾರಿಯಲ್ಲಿ ಸಮುದ್ರ ಮಧ್ಯದಲ್ಲಿ ಹಾಕಲಾಗಿರುವ ಎರಡು ರೀಫ್‌ಗಳಿಂದ ಮೊಗವೀರಪಟ್ಣದ ಮಧ್ಯಭಾಗದ ಜನರು ತೊಂದರೆ ಅನುಭವಿಸುತ್ತಿದ್ದಾರೆ. 360ಮೀ. ಉದ್ದದ ಎರಡು ರೀಫ್‌ಗಳನ್ನು ಸುಮಾರು 600ರಿಂದ 700ಮೀಟರ್‌ಗಳ ದೂರದಲ್ಲಿ ಹಾಕಲಾಗಿದ್ದು ಮಧ್ಯದಲ್ಲಿರುವ 1,070 ಮೀಟರ್‌ ಭೂ ಪ್ರದೇಶದಲ್ಲಿ ಈ ಹಿಂದಿಗಿಂತಲೂ ಎರಡು ಪಟ್ಟು ಹೆಚ್ಚು ವೇಗದಲ್ಲಿ ದಡಕ್ಕಪ್ಪಳಿಸುತ್ತಿದ್ದು, ಸುಮಾರು 20ಕ್ಕೂ ಹೆಚ್ಚು ಮನೆಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್‌ ಕುಮಾರ್‌ ಉಳ್ಳಾಲ್‌ ತಿಳಿಸಿದ್ದಾರೆ. 

ಕಳೆದ ಮುವೈತ್ತದು ವರ್ಷಗಳಿಂದ ಕೈಕೋ ಪ್ರದೇಶದಲ್ಲಿ ವಾಸಿಸುತ್ತಿದ್ದು. ಈವರೆಗೂ ನಮಗೆ ಮನೆಗೆ ಹಕ್ಕುಪತ್ರವಾಗಲಿ ಭದ್ರತೆಯಾಗಲಿ ನೀಡಿಲ್ಲ. ಈಗ ಮನೆ ಸಮುದ್ರ ಪಾಲಾಗುತ್ತಿದ್ದು, ಶಾಶ್ವತವಾಗಿ ನಿವೇಶನ ನೀಡಿದರೆ ನಾವು ಅಲ್ಲಿ ವಾಸಿಸಲು ಸಾಧ್ಯ. ಎರಡು ವರ್ಷದ ಹಿಂದೆ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದಾಗ ಎರಡು ವರ್ಷದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದು ಇನ್ನೂ ಈಡೇರಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಇಸ್ಮಾಯಿಲ್‌. 

ಕಲ್ಲುಗಳು ಸಮುದ್ರಪಾಲು
ಕಿಲೇರಿಯಾನಗರ, ಕೈಕೋದಲ್ಲಿ ಸಮುದ್ರದ ತಟದಲ್ಲಿ ತಾತ್ಕಾಲಿಕವಾಗಿ ಹಾಕಲಾಗಿರುವ ಕಲ್ಲುಗಳು ಸಮುದ್ರ ಪಾಲಾಗುತ್ತಿದೆ. ಕಲ್ಲುಗಳ ಕುಸಿತದಿಂದ ಸಮುದ್ರದ ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿದ್ದು, ಮನೆಗಳು ಧರಾಶಾಹಿಯಾಗುತ್ತಿದೆ. ಸೋಮೇಶ್ವರ ಉಚ್ಚಿಲದ ಫೆರಿಬೈಲು ಬಳಿ ತಾತ್ಕಾಲಿಕ ಕಾಮಗಾರಿ ನಡೆಯುತ್ತಿದೆ.

Advertisement

ಗಂಜಿಕೇಂದ್ರಕ್ಕೆ ಜನ ಬರುತ್ತಿಲ್ಲ 
ಅಪಾಯದಲ್ಲಿರುವ ಕುಟುಂಬಗಳಿಗೆ ಉಳ್ಳಾಲ ಒಂಭತ್ತುಕೆರೆ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಗಂಜಿಕೇಂದ್ರ ಆರಂಬಿಸಿದ್ದರೂ, ಯಾರೂ ಬಂದಿಲ್ಲ. ಅಪಾಯದಂಚಿನಲ್ಲಿರುವ 35ಕ್ಕೂ ಹೆಚ್ಚು ಮನೆಗಳಿಂದ 15 ಮನೆಯವರು ಸಂಪೂರ್ಣ ಸ್ಥಳಾಂತರಗೊಂಡಿದ್ದು, ತಮ್ಮ ಸಂಬಂಧಿಕರ ಮನೆಗಳಿಗೆ
ತೆರಳಿದ್ದಾರೆ. ಉಳ್ಳಾಲ ದರ್ಗಾದಲ್ಲಿ ಗಂಜಿ ಕೇಂದ್ರವಿದ್ದರೂ ಹೆಚ್ಚಿನ ಜನರು ತಮ್ಮ ಸಂಬಂಧಿಕರ ಮನೆಯನ್ನೇ ಆಶ್ರಯಿಸಿದ್ದಾರೆ.

ಸೂಕ್ತ ಸೌಲಭ್ಯಕ್ಕೆ  ನಗರ ಸಭೆ ಸಿದ್ಧ
ಕೈಕೋ ಮತ್ತು ಕಿಲೇರಿಯಾದ ಅಪಾಯದಲ್ಲಿ ಇರುವ 41ಮನೆಗಳಿಗೆ ನಿವೇಶನ ನೀಡುವ ಭರವಸೆಯೊಂದಿಗೆ ಸಮುದ್ರತಟದಿಂದ ಸ್ಥಳಾಂತರಿಸಲು ಸಚಿವರ ಅದೇಶದ ಮೇರೆಗೆ ತಹಶೀಲ್ದಾರ್‌ ತಿಳಿಸಿದ್ದು, ಕೆಲವು ಮನೆಗಳು ಮಾತ್ರ ಸ್ಥಳಾಂತರಗೊಂಡಿವೆ. ಇನ್ನು ಕೆಲವು ಬಾಕಿಯಿದೆ. ಗಂಜಿ ಕೇಂದ್ರ ಸನ್ನದ್ಧ ಸ್ಥಿತಿಯಲ್ಲಿದ್ದು, ಜನ ರಿಗೆ ಸೂಕ್ತ ಸೌಲಭ್ಯ ನೀಡಲು ನಗರಸಭೆ ಸಿದ್ಧವಾಗಿದೆ.
– ವಾಣಿ.ವಿ. ಆಳ್ವ, ನಗರಸಭಾ ಪೌರಾಯುಕ್ತೆ

Advertisement

Udayavani is now on Telegram. Click here to join our channel and stay updated with the latest news.

Next