Advertisement

10 ಕೆ. ಜಿ. ಗಾಂಜಾ ಪತ್ತೆ, ಮೂವರ ಸೆರೆ

03:00 AM Jul 04, 2017 | Team Udayavani |

ಮಂಗಳೂರು: ಮಂಗಳೂರು ನಗರಕ್ಕೆ ಬೃಹತ್‌ ಪ್ರಮಾಣದಲ್ಲಿ ಗಾಂಜಾವನ್ನು ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದ ಮೂರು ಮಂದಿಯನ್ನು ಗಾಂಜಾ ಸಮೇತ ಬಂಧಿಸಿರುವ ಮಂಗಳೂರು ಅಪರಾಧ ಪತ್ತೆ ದಳದ  ಪೊಲೀಸರು 10 ಕೆ.ಜಿ. ಗಾಂಜಾ ಸಹಿತ ಒಟ್ಟು 3 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. ಬಂಟ್ವಾಳ ತಾಲೂಕು ನರಿಂಗಾನ ಗ್ರಾಮದ ರಮೀಝ್ ರಾಝ್ (24), ಮಂಗಳೂರು ತಾಲೂಕು ನಾಟೆಕಲ್‌ನ ಮೊಹಮ್ಮದ್‌ ಹನೀಫ್‌ (31) ಮತ್ತು ಬೆಳ್ಮಣ್ ಗ್ರಾಮದ ಇಕ್ಬಾಲ್‌ ಹಾರಿಸ್‌ (24) ಬಂಧಿತರು.

Advertisement

ನಗರದ ಫಳ್ನೀರ್‌ ರಸ್ತೆಯ ಲಾಡ್ಜ್ ವೊಂದರಲ್ಲಿ ಕೊಠಡಿಯನ್ನು ಪಡೆದು ಕೆಲವರು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಸೋಮವಾರ ದಾಳಿ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿಸಿದರು. ಆರೋಪಿಗಳಿಂದ 10 ಕೆಜಿ ಗಾಂಜಾ, ಮೂರು ಮೊಬೈಲ್‌ ಫೋನ್‌, ಡಿಜಿಟಲ್‌ ತೂಕದ ಯಂತ್ರ, ಗಾಂಜಾಗಳನ್ನು ಸಣ್ಣ ಸಣ್ಣ ಪ್ಯಾಕೆಟ್‌ಗಳಾಗಿ ಮಾರಾಟ ಮಾಡಲು ಉಪಯೋಗಿಸುವ ಪ್ಲಾಸ್ಟಿಕ್‌ ಕವರ್‌ಗಳು, 9,500 ರೂ. ನಗದು, ಹೊಂಡಾ ಯುನಿಕಾರ್ನ್ದ್ವಿ ಚಕ್ರ ವಾಹನ ಪತ್ತೆಯಾಗಿದ್ದು, ಇವುಗಳ ಒಟ್ಟು ಮೊತ್ತ 3 ಲಕ್ಷ ರೂ. ಆಗಿವೆ.

ಆರೋಪಿಗಳು ಗಾಂಜಾವನ್ನು ಆಂಧ್ರ ಪ್ರದೇಶ ಚಿತ್ತೂರಿನಿಂದ ಖರೀದಿಸಿ ಮಂಗಳೂರಿಗೆ ತಂದು ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಮಾರಾಟಕ್ಕಾಗಿ ವಿತರಣೆ ಮಾಡುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ  ನಗರದ ವಸತಿ ಗೃಹದಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದು ಗಾಂಜಾವನ್ನು ಸಣ್ಣ ಸಣ್ಣ ಪ್ಯಾಕೆಟ್‌ಗಳನ್ನಾಗಿ ಮಾಡಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು.

ಆರೋಪಿಗಳ ರಮೀಝ್ ರಾಝ್ನ ಮೇಲೆ ಈ ಹಿಂದೆ 2016ರಲ್ಲಿ ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ತೌಡುಗೋಳಿ ಕ್ರಾಸ್‌ನ  ಹೊಟೇಲ್‌ನಲ್ಲಿ ಗಲಾಟೆ ಮಾಡಿ ಸೊತ್ತುಗಳನ್ನು ಹಾನಿಗೊಳಿಸಿದ ಪ್ರಕರಣ ಹಾಗೂ ಗಾಂಜಾ ಮಾರಾಟಕ್ಕೆ ಸಂಬಂಧಪಟ್ಟ ಪ್ರಕರಣ ದಾಖಲಾಗಿರುತ್ತದೆ. ಆತ ಈ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡು ಬಿಡುಗಡೆಗೊಂಡಿದ್ದನು. ಆರೋಪಿ ಮೊಹಮ್ಮದ್‌ ಹನೀಫ್‌ ವಿರುದ್ಧ ಈ ಹಿಂದೆ ಅಂದರೆ 2016ರಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಗಾಂಜಾ ಮಾರಾಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.

ಆರೋಪಿ ಇಕ್ಬಾಲ್‌ ಹಾರಿಸ್‌ ವಿರುದ್ಧ ಈ ಹಿಂದೆ ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ದಾಖಲಾದ ವೈದ್ಯಕೀಯ ವಿದ್ಯಾರ್ಥಿನಿ ಯನ್ನು ಅಪಹರಣ ಮಾಡಿ ರೇಪ್‌ ಮಾಡಿದ ಪ್ರಕರಣ, ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಪ್ರಕರಣ, ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪೊಲೀಸರಿಗೆ ಹಲ್ಲೆ ಮಾಡಿದ ಪ್ರಕರಣ ಮತ್ತು ಮಂಗಳೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಗ ಕೈದಿ ಇಲ್ಯಾಸ್‌ ಮೇಲೆ ಹಲ್ಲೆ ಮಾಡಿದ್ದು ಈ ಬಗ್ಗೆ ಮಂಗಳೂರು ಬರ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಹೀಗೆ ಆತನ ಮೇಲೆ ಒಟ್ಟು ಐದು ಪ್ರಕರಣಗಳು ದಾಖಲಾಗಿರುತ್ತವೆ.

Advertisement

ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಗಾಂಜಾವನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರಿನ ಬಂದರು ಪೊಲೀಸ್‌ ಠಾಣೆಗೆ ಹಸ್ತಾಂತರಿಸಲಾಗಿದೆ. ಈ ಆರೋಪಿಗಳಿಂದ ಗಾಂಜಾವನ್ನು ಖರೀದಿ ಸುವವರ ಬಗ್ಗೆ ಮಾಹಿತಿ ದೊರೆತಿದ್ದು, ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್‌ ಕಮೀಷನರ್‌ ಟಿ. ಆರ್‌ ಸುರೇಶ್‌ ಅವರ ಆದೇಶದಂತೆ ಡಿಸಿಪಿಗಳಾದ ಕೆ.ಎಂ. ಶಾಂತರಾಜು ಮತ್ತು ಹನುಮಂತರಾಯ, ಸಿಸಿಆರ್‌ಬಿ ಎಸಿಪಿ ವೆಲೆಂಟೈನ್‌ ಡಿ’ಸೋಜಾ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್‌ ಸುನಿಲ್‌ ವೈ. ನಾಯ್ಕ ಮತ್ತು ಪಿ.ಎಸ್‌.ಐ ಶ್ಯಾಮ್‌ ಸುಂದರ್‌ ಹಾಗೂ ಸಿಬಂದಿ ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next