ಬೆಂಗಳೂರು: ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಬ್ಯಾಗ್‌ಗಳಲ್ಲಿ ಗಾಂಜಾ ತಂದು ನಗರದಲ್ಲಿ ಮಾರಾಟಕ್ಕೆ ಯತ್ನಿಸಿದ್ದ ಮಹಿಳೆಯನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನ್ಯೂಗುರಪ್ಪನಪಾಳ್ಯ ನಿವಾಸಿ ನಗ್ಮಾ (27) ಬಂಧಿತೆ.
ಆಕೆಯಿಂದ 13 ಲಕ್ಷ ರೂ. ಮೌಲ್ಯದ 26 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ. ಮಹಿಳೆ ಇತ್ತೀಚೆಗೆ ಠಾಣೆ ವ್ಯಾಪ್ತಿಯ ಬಸ್ ನಿಲ್ದಾಣ ಸಮೀಪದಲ್ಲಿ ಇಬ್ಬರು ಮಕ್ಕಳ ಜತೆ ಮೂರು ಟ್ರಾವೆಲ್ ಬ್ಯಾಗ್‌ಗಳಲ್ಲಿ ಮಾದಕ ವಸ್ತುಗಳನ್ನು ಇಟ್ಟುಕೊಂಡು ಬೇರೆಡೆ ಸಾಗಾಟಕ್ಕೆ ಯತ್ನಿಸಿದ್ದಳು. ಇದೇ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಅನುಮಾನಗೊಂಡು ಆಕೆಯನ್ನು ವಿಚಾರಣೆ ನಡೆಸಿದಾಗ ಬ್ಯಾಗ್‌ಗಳಲ್ಲಿ ಗಾಂಜಾ ಪತ್ತೆಯಾಗಿದೆ.
ಆಕೆಯ ವಿಚಾರಣೆಯಲ್ಲಿ, ಈ ಹಿಂದೆ ಗಾಂಜಾ ಮಾರಾಟ ಪ್ರಕರಣದಲ್ಲಿ ಪತಿ ಮುಜ್ಜು ಎಂಬಾತ ಜೈಲು ಸೇರಿದ್ದಾನೆ. ಆ ನಂತರ ಪತ್ನಿ ದಂಧೆ ಮುಂದುವರಿಸಿದ್ದಾಳೆ. ವಿಶಾಖಪಟ್ಟಣಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ ಅಲ್ಲಿಂದ ಮಾದಕ ವಸ್ತುಗಳನ್ನು ತಂದು ನೀಲಸಂದ್ರದಲ್ಲಿ ತನ್ನ ಮನೆಗೆ ಕೊಂಡೊಯ್ಯಲು ಆಟೋ ರಿಕ್ಷಾಗಾಗಿ ಕಾಯುತ್ತಿದ್ದಳು ಎಂಬುದು ಗೊತ್ತಾಗಿದೆ.
ಗಾಂಜಾವನ್ನು ತನ್ನ ಪತಿ ಮಾರಾಟ ಮಾಡುತ್ತಿದ್ದ ಟೆಕಿಗಳು, ವಿದ್ಯಾರ್ಥಿಗಳು ಹಾಗೂ ನಿರ್ದಿಷ್ಟ ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದು ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದರು. ಈ ಕುರಿತು ಕಲಾಸಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.