Advertisement

ಕಬ್ಬು ಕಟಾವಿಗೆ ಗ್ಯಾಂಗ್‌ವಾರ್‌

10:45 AM Dec 23, 2019 | Suhan S |

ಧಾರವಾಡ: ಸತತ ಮಳೆಗೆ ಸಿಲುಕಿ ನಲುಗಿದ್ದ ಕಬ್ಬಿನ ಬೆಳೆ ರೈತರ ಹೊಲದಲ್ಲಿ ಕಂಗೊಳಿಸುತ್ತಿದ್ದು, ಇದೀಗ ಕಬ್ಬು ಕಟಾವಿಗೆ ಗ್ಯಾಂಗ್‌ಗಳು ಸಿಕ್ಕದೇ ರೈತರು ಮತ್ತೆ ಸಂಕಷ್ಟ ಎದುರಿಸುವಂತಾಗಿದೆ.

Advertisement

ಜಿಲ್ಲೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಅಂದರೆ 55 ಲಕ್ಷ ಟನ್‌ ಕಬ್ಬು ಬೆಳೆಯಲಾಗಿದ್ದು, ಈ ಪೈಕಿ ಶೇ.20 ಕಬ್ಬು ಮಾತ್ರ ಈವರೆಗೂ ಕಟಾವು ಆಗಿದೆ. ಇನ್ನುಳಿದ ಶೇ.80 ಕಬ್ಬು ಹಾಗೇ ಉಳಿದುಕೊಂಡಿದೆ. ಈ ಸಂಬಂಧ ಕಬ್ಬು ಬೆಳೆಗಾರರು ಹರಸಾಹಸ ಪಟ್ಟು ಕಬ್ಬು ಕಟಾವಿನ ಗ್ಯಾಂಗ್‌ಗಳನ್ನು ಹೆಚ್ಚಿನ ಹಣಕೊಟ್ಟು ತರುತ್ತಿದ್ದರೂ ಕಬ್ಬು ಕಟಾವು ಆಮೆಗತಿಯಲ್ಲಿ ಸಾಗುತ್ತಿದೆ.

ಪ್ರತಿವರ್ಷ ಸಕ್ಕರೆ ಕಾರ್ಖಾನೆಗಳು ಪಾಳಿ ಮೇಲೆ ನೇರವಾಗಿ ರೈತರ ಹೊಲಗಳಿಗೆ ತಮ್ಮ ಕಾರ್ಖಾನೆ ಗ್ಯಾಂಗ್‌ಗಳನ್ನು ಕಬ್ಬು ಕಟಾವಿಗೆ ನಿಯೋಜನೆ ಮಾಡುತ್ತಿದ್ದವು. ಈ ವರ್ಷ ಈ ಪದ್ಧತಿ ನಿಲ್ಲಿಸಿದ್ದು, ರೈತರೇ ತಮ್ಮ ಗ್ಯಾಂಗ್‌ಗಳನ್ನು ತಂದು ಕಡಿಯುವ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ. ಧಾರವಾಡ, ಅಳ್ನಾವರ, ಕಲಘಟಗಿ, ಹುಬ್ಬಳ್ಳಿ ತಾಲೂಕಿನಲ್ಲಿ ಅತೀ ಹೆಚ್ಚು ಕಬ್ಬು ಬೆಳೆಯಲಾಗಿದ್ದು, ಇನ್ನಿತರ ಬೆಳೆಗಳಿಂದ ರೈತರು ಸಂಪೂರ್ಣ ದೂರವಾಗಿದ್ದಾರೆ. ಸಾಂಪ್ರದಾಯಿಕ ಭತ್ತ, ಹತ್ತಿ, ಜೋಳ, ತೊಗರಿ ಮತ್ತು ದ್ವಿದಳ ಧಾನ್ಯಗಳು ಸಂಪೂರ್ಣ ಮಾಯವಾಗಿದ್ದು, ಎಲ್ಲ ಕಡೆಗೂ ಬರೀ ಕಬ್ಬು ಆವರಿಸಿಕೊಂಡಿದೆ.

ಮೂಲ ಕಾರಣ ಮಳೆ: ಅಕ್ಟೋಬರ್‌ ತಿಂಗಳಿನಲ್ಲಿ ಸುರಿದ ಮಳೆಗೆ ರೈತರ ಹೊಲದಲ್ಲಿ ವಿಪರೀತ ನೀರು ನಿಂತು ಕಬ್ಬು ಕಟಾವು ಅಸಾಧ್ಯವಾಯಿತು. ಈ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆಗಳು ರೈತರ ಹೊಲಕ್ಕೆ ಕಬ್ಬು ಕಟಾವಿಗೆ ಮಹಾರಾಷ್ಟ್ರದಿಂದ ಕಬ್ಬು ಕಡಿಯುವ ಗ್ಯಾಂಗ್‌ಗಳನ್ನು ಕಳುಹಿಸಿಯಾಗಿತ್ತು. ಮಳೆಯಿಂದಾಗಿ ಕಬ್ಬು ಕಡೆಯುವುದು ಅಸಾಧ್ಯವಾಗಿ ಗ್ಯಾಂಗ್‌ಗಳು 20 ದಿನಕ್ಕೂ ಹೆಚ್ಚು ಕಾಲ ರೈತರ ಹೊಲದಲ್ಲಿ ಖಾಲಿ ಕುಳಿತರು. ಮಳೆ ನಿಂತು ಭೂಮಿ ಒಣಗುವ ವರೆಗೂ ಕಾದು ಗ್ರಾಮಗಳಲ್ಲಿ ರಸ್ತೆ ಪಕ್ಕದ ಹೊಲದಲ್ಲಿನ ಕಬ್ಬು ಮಾತ್ರ ಕಟಾವು ಮಾಡಿದರು. ಹೆಚ್ಚು ನೀರು ನುಗ್ಗಿದ ಭೂಮಿ ಒಣಗದೇ ಹೋಗಿದ್ದರಿಂದ ಗ್ಯಾಂಗ್‌ಗಳೂ ಕಾಲು ಕಿತ್ತವು.

ಹೊರ ಜಿಲ್ಲೆಯತ್ತ ಕಬ್ಬು: ಧಾರವಾಡ ಜಿಲ್ಲೆಯ ಕಬ್ಬು ಈ ಮೊದಲು ಅತೀ ಹೆಚ್ಚಿನ ಪ್ರಮಾಣದಲ್ಲಿ ಬೆಳಗಾವಿ ಜಿಲ್ಲೆಯ ಮುನವಳ್ಳಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಸಕ್ಕರೆ ಕಾರ್ಖಾನೆಗಳಿಗೆ ರವಾನೆಯಾಗುತ್ತಿತ್ತು. ಈ ವರ್ಷ ಈ ಎರಡೂ ಕಾರ್ಖಾನೆಗಳು ತಮ್ಮ ಗ್ಯಾಂಗ್‌ಗಳನ್ನು ಹಿಂದಕ್ಕೆ ಪಡೆದುಕೊಂಡಿದ್ದು ರೈತರು ತಮ್ಮ ಕಬ್ಬು ಕಡಿದು ಸಾಗಾಟ ಮಾಡುವುದಕ್ಕೆ ಒದ್ದಾಡುವ ಸ್ಥಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪ್ರಭಾವ ಇರುವ ರೈತರು ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ರವಾನಿಸುತ್ತಿದ್ದಾರೆ. ಸಂಕೇಶ್ವರ, ಗೋಕಾಕ, ದೂಧ್‌ ಗಂಗಾ, ಮಲಪ್ರಭಾ ಸಕ್ಕರೆ ಕಾರ್ಖಾನೆ, ಸತೀಶ್‌ ಮತ್ತು ಹರ್ಷಾ ಶುಗರ್ನಲ್ಲಿನ ಅಧಿಕಾರಿಗಳು, ರಾಜಕೀಯ ಮುಖಂಡರ ಮೇಲೆ ಪ್ರಭಾವ ಬೀರಿ ಕಬ್ಬು ಕಳಿಸುತ್ತಿದ್ದಾರೆ. ಪ್ರಭಾವಕ್ಕೆ ನಿಲುಕದ ರೈತರು ಮಾತ್ರ ಸಂಕಷ್ಟ ಎದುರಿಸುತ್ತಿದ್ದಾರೆ.

Advertisement

ಸೂಲಂಗಿ ಭರಿತ ಇಳುವರಿ ಕುಸಿತ:  ಸತತ ಮಳೆಯಿಂದಾಗಿ ಕಬ್ಬಿಗೆ ಬಿಳಿಹೊಡೆ (ಸೂಲಂಗಿ) ಹಾದಿದ್ದು, ಇದು ಇಳುವರಿ ಮೇಲೆ ಹೊಡೆತ ಕೊಟ್ಟಿದೆ. ಸಾಮಾನ್ಯವಾಗಿ ಕಬ್ಬು ಹದಕ್ಕೆ ಸರಿಯಾಗಿ ಬಂದರೆ ಧಾರವಾಡ ಜಿಲ್ಲೆಯಲ್ಲಿ ಎಕರೆಗೆ 40 ಟನ್‌ ವರೆಗೂ ಇಳುವರಿ ಬರುತ್ತದೆ. ಆದರೆ ಈ ವರ್ಷ ತುಂಬಾ ಚೆನ್ನಾಗಿ ಬಂದಿದೆ ಎನ್ನುವ ಕಬ್ಬು ಎಕರೆಗೆ 25 ಟನ್‌ ದಾಟುತ್ತಿಲ್ಲ. ಒಟ್ಟಿನಲ್ಲಿ ಈ ವರ್ಷ ಕಬ್ಬಿನ ಇಳುವರಿ, ಕಟಾವಿಗೆ ಗ್ಯಾಂಗಿನ ಕೊರತೆ, ಸರಬರಾಜಿಗೆ ಕಾರ್ಖಾನೆಗಳು ರೂಪಿಸಿದ ಹೊಸ ನಿಯಮಗಳಿಂದ ಜಿಲ್ಲೆಯ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ನಾವು ನಿಯಮಗಳ ಅನ್ವಯ ಕಬ್ಬು ಕಟಾವು ಮಾಡುತ್ತಿದ್ದೇವೆ. ಆದರೆ ಮಹಾರಾಷ್ಟ್ರದಿಂದ ಕಬ್ಬು ಕಡಿಯಲು ದೀಪಾವಳಿ

ಸಂದರ್ಭದಲ್ಲಿಯೇ ಬಂದಿದ್ದ ಗ್ಯಾಂಗ್‌ಗಳು ಮಳೆಯಿಂದ ಕೆಲಸವಿಲ್ಲದೇ ಅಲೆದು ಮರಳಿ ಊರಿಗೆ ಹೋಗಿದ್ದಾರೆ. ಹೀಗಾಗಿ ಸ್ವಲ್ಪ ಕಬ್ಬು ಕಟಾವು ವಿಳಂಬವಾಗುತ್ತಿರುವುದು ನಿಜ. ಹೆಸರು ಹೇಳಲಿಚ್ಚಿಸಿದ ಪ್ಯಾರಿ ಸುಗರ್ ಕಾರ್ಖಾನೆ ಅಧಿಕಾರಿ, ಹಳಿಯಾಳ

 

­ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next