ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡ ಕಂಡ ಅತ್ಯುತ್ತಮ ನಾಯಕ ಸೌರವ್ ಗಂಗೂಲಿ. ಆದರೆ ಅವರ ನಾಯಕತ್ವದಡಿ ಭಾರತಕ್ಕೆ ವಿಶ್ವಕಪ್ ಸಿಗಲಿಲ್ಲ ಎಂದು ಹೇಳುವುದು ದುರದೃಷ್ಟಕರ ಸಂಗತಿ ಎಂದು ಭಾರತ ತಂಡದ ಮಾಜಿ ಆಟಗಾರ ಮೊಹಮದ್ ಕೈಫ್ ಹೇಳಿದ್ದಾರೆ.
“ಹಲೋ ಲೈವ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ಇಬ್ಬರೂ ಭಾರತ ಕ್ರಿಕೆಟ್ ಕಂಡ ಅದ್ಭುತ ಆಟಗಾರರು. ಭಾರತೀಯ ಕ್ರಿಕೆಟ್‌ಗೆ ಈ ಇಬ್ಬರ ಕೊಡುಗೆ ಅಮೋಘವಾದದ್ದು ಎಂದು ಕೈಫ್ ಅಭಿಪ್ರಾಯಪಟ್ಟಿದ್ದಾರೆ.
ಧೋನಿ ಅವರಿಗಿಂತ ಸೌರವ್ ಗಂಗೂಲಿ ಅತ್ಯುತ್ತಮ ನಾಯಕ ಎನ್ನುವುದು ನನ್ನ ಆಯ್ಕೆ. ಧೋನಿ ಅದೃಷ್ಟದ ಬಲದಿಂದಾಗಿ ನಾಯಕರಾದವರು ಮತ್ತು ಧೋನಿಗೆ ಉತ್ತಮ ಆಟಗಾರರ ಬೆಂಬಲವೂ ಸಿಕ್ಕಿದ ಕಾರಣ ಅವರು ಯಶಸ್ವಿ ನಾಯಕರೆನಿಸಿಕೊಂಡರು. ಆದರೆ ಸೌರವ್ ಗಂಗೂಲಿಗೆ ನಾಯಕತ್ವ ಸಿಕ್ಕಾಗ ಭಾರತ ತಂಡದ ಪರಿಸ್ಥಿತಿ ಬಹಳ ಗಂಭೀರವಾಗಿತ್ತು. ಈ ವೇಳೆ ಭಾರತವು ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಒದ್ದಾಡಿತ್ತು. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಭಾರತ ತಂಡದ ಚುಕ್ಕಾಣಿ ಹಿಡಿದು ಸೌರವ್ ಗಂಗೂಲಿ ತಂಡವನ್ನು ಮುನ್ನಡೆಸಿ ಒಂದು ಬಲಿಷ್ಠವಾದ ತಂಡವನ್ನು ಕಟ್ಟಿ ಬೆಳೆಸಿದರು. ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಗಂಗೂಲಿ ಅವಧಿಯಲ್ಲಿ ಅದೆಷ್ಟೋ ಉದಯೋನ್ಮುಖ ಆಟಗಾರರು ಬೆಳಕಿಗೆ ಬಂದಿದ್ದಾರೆ.
ದ್ರಾವಿಡ್, ಲಕ್ಷ್ಮಣ್, ಸೆಹವಾಗ್ ಹೀಗೆ ಹಲವಾರು ಆಟಗಾರರು ಗಂಗೂಲಿ ನಾಯಕತ್ವದಲ್ಲಿ ಮಿಂಚಿದ್ದರು. ದಾದಾ ಅವರಲ್ಲಿ ಒಬ್ಬ ಆಟಗಾರನನ್ನು ಯಾವ ರೀತಿಯಲ್ಲಿ ಬೆಳೆಸಬೇಕು ಎನ್ನುವ ಜಾಣ್ಮೆ ಇತ್ತು ಎಂದು ಕೈಫ್ ವಿವರಿಸಿದ್ದಾರೆ.
ಭಾರತದ ಈಗಿನ ತಂಡದಲ್ಲಿ ಫೀಲ್ಡಿಂಗ್ ವಿಚಾರದಲ್ಲಿ ಬಹಳ ಸುಧಾರಣೆ ಆಗಿದೆ. ಆಗ ಯುವರಾಜ್ ಸಿಂಗ್ ಅದ್ಭುತ ಫೀಲ್ಡಿಂಗ್ ಮಾಡುತ್ತಿದ್ದರು. ಈಗಿನ ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ರೋಹಿತ್ ಶರ್ಮ, ಹಾರ್ದಿಕ್ ಪಾಂಡ್ಯ ಉತ್ತಮ ಫೀಲ್ಡಿಂಗ್ ಮಾಡುವುದರ ಮೂಲಕ ತಂಡವನ್ನು ಮುನ್ನಡೆಸುತ್ತಿದ್ದಾರೆ ಎಂದು ಮೊಹಮ್ಮದ್ ಕೈಫ್ ತಿಳಿಸಿದ್ದಾರೆ.