ಲಂಡನ್: ವಿಶ್ವಕಪ್ ಕೂಟ ಶುರುವಾಗಿ ಎರಡು ವಾರ ಆಗಿದೆಯಷ್ಟೆ. ಆಗಲೇ ನಾಲ್ಕು ಪಂದ್ಯಗಳು ಮಳೆಯಿಂದಾಗಿ ರದ್ದಾಗಿರುವುದರಿಂದ ಕ್ರಿಕೆಟ್ ಅಭಿಮಾನಿಗಳೆಲ್ಲ ತೀವ್ರ ನಿರಾಶೆಯಲ್ಲಿದ್ದಾರೆ. ಇಂಗ್ಲೆಂಡ್‌ನ ಹವಾಮಾನವನ್ನು ನೋಡುವಾಗ ಮುಂದಿನ ಪಂದ್ಯಗಳು ಕೂಡಾ ಪೂರ್ತಿಯಾಗಿ ನಡೆಯುವ ಖಾತರಿಯಿಲ್ಲ. ಮಳೆಯಾಟವೇ ಜೋರಾಗಿರುವ ಸಂದರ್ಭದಲ್ಲೇ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಇದಕ್ಕೊಂದು ಸರಳವಾದ ಪರಿಹಾರ ಸೂಚಿಸಿದ್ದಾರೆ.
ಮಳೆ ಬಂದಾಗ ಪಿಚ್ಗೆ ಹೊದಿ ಸುವ ಹೊದಿಕೆಗಳನ್ನು ಬದಲಿಸಿ ದರೆ ಮಳೆಯಿಂದಾಗಿ ಪಂದ್ಯ ರದ್ದಾಗುವ ಸಮಸ್ಯೆಯಿಂದ ಪಾರಾಗಬಹುದು ಎನ್ನುವುದೇ ಗಂಗೂಲಿಯ ಸಲಹೆ.
ಭಾರತದಲ್ಲಿ ಈ ಮಾದರಿಯ ಹೊದಿಕೆಗಳನ್ನು ಬಳಸುವುದರಿಂದ ಮಳೆಯಿಂದಾಗಿ ಪಂದ್ಯ ರದ್ದಾಗುವುದು ಬಹಳ ಅಪರೂಪ. ವಿಶೇಷವೆಂದರೆ ಈಡನ್ ಗಾರ್ಡನ್‌ನಲ್ಲಿ ಉಪಯೋಗಿಸುತ್ತಿರುವ ಈ ಹೊದಿಕೆಯನ್ನು ಇಂಗ್ಲೆಂಡ್‌ನಿಂದಲೇ ತರಿಸಿಕೊಂಡಿದ್ದಾರಂತೆ.
ಇದು ತುಂಬ ಹಗುರವಾಗಿರುವ ಹೊದಿಕೆ. ಬೆಲೆಯೂ ಅಗ್ಗ, ಇಂಗ್ಲೆಂಡ್‌ನಲ್ಲಿ ತೆರಿಗೆ ವಿನಾಯಿತಿಯೂ ಇದೆ. ಭಾರತದಲ್ಲಿ ಎಲ್ಲ ಪಂದ್ಯಗಳಿಗೆ ಇದೇ ಹೊದಿಕೆಯನ್ನು ಉಪಯೋಗಿಸುತ್ತಿದ್ದೇವೆ. ಹೀಗಾಗಿ ಮಳೆ ನಿಂತ 10 ನಿಮಿಷಗಳಲ್ಲಿ ಪಂದ್ಯ ಪುನರಾರಂಭ ವಾಗುತ್ತದೆ. ಹಗುರವಾಗಿರುವುದರಿಂದ ಎತ್ತಿಕೊಂಡು ಹೋಗಲು ಹೆಚ್ಚು ಜನರ ಅಗತ್ಯವೂ ಇಲ್ಲ. ಹಿಂದೆ ಉಪಯೋಗಿ ಸುತ್ತಿದ್ದ ನೀಲಿ ಹೊದಿಕೆಗಿಂತ ಈಗಿನ ಹೊದಿಕೆ 10 ಪಾಲು ಹೆಚ್ಚು ಅನುಕೂಲಕಾರಿ ಎಂದು ವಿವರಿಸಿದ್ದಾರೆ ಗಂಗೂಲಿ.
ಈಡನ್ ಗಾರ್ಡನ್‌ನಲ್ಲಿ ಉಪಯೋಗಿಸುವ ಹೊದಿಕೆ ಪಾರದರ್ಶಕವಾಗಿರುವುದರಿಂದ ಸೂರ್ಯ ಕಿರಣ ಹಾದು ಹೋಗುತ್ತದೆ. ಹೀಗಾಗಿ ಹುಲ್ಲು ಒಣಗಿ ಬಣ್ಣ ಬದಲಾಯಿಸುವು ದಿಲ್ಲ. ಪದೇ ಪದೇ ಮಳೆ ಸುರಿಯುವ ಇಂಗ್ಲಂಡ್‌ನಂಥ ದೇಶಗಳಲ್ಲಿ ವಿಶ್ವಕಪ್ ಕೂಟಗಳಂಥ ಮಹತ್ವದ ಪಂದ್ಯ ನಡೆಯುವಾಗ ಆಧುನಿಕ ಹೊದಿಕೆ ಬಳಸುವುದು ಸೂಕ್ತ ಎನ್ನುವುದು ಗಂಗೂಲಿ ಸಲಹೆ.