Advertisement

ಬಾಟಲಿಗೆ ಸತ್ತ ಸೊಳ್ಳೆಗಳನ್ನು ತುಂಬಿ ಕೋರ್ಟ್‌ಗೆ ಹಾಜರಾದ!

07:34 PM Nov 04, 2022 | Team Udayavani |

ಮುಂಬೈ: ತಾವಿರುವ ಜೈಲು ಕೊಠಡಿಯ ದುಸ್ಥಿತಿಯನ್ನು ತಿಳಿಸುವ ಸಲುವಾಗಿ ವಿಚಾರಣಾಧೀನ ಗ್ಯಾಂಗ್‌ಸ್ಟರ್‌ವೊಬ್ಬ ಬಾಟಲಿ ತುಂಬ ಸತ್ತ ಸೊಳ್ಳೆಗಳನ್ನು ತುಂಬಿಸಿ ಕೋರ್ಟ್‌ಗೆ ತಂದಿದ್ದಾನೆ!

Advertisement

ಜೈಲಿನ ಸೆಲ್‌ನಲ್ಲಿ ಸೊಳ್ಳೆ ಕಾಟ ವಿಪರೀತವಾಗಿದೆ. ಅದಕ್ಕೆ ಈ ಬಾಟಲಿಯಲ್ಲಿರುವ ಸೊಳ್ಳೆಗಳೇ ಸಾಕ್ಷಿ. ದಯವಿಟ್ಟು, ನಮಗೆ ಸೊಳ್ಳೆ ಪರದೆಯ ವ್ಯವಸ್ಥೆ ಕಲ್ಪಿಸಿ ಎಂದು ಗ್ಯಾಂಗ್‌ಸ್ಟರ್‌ ಎಜಾಝ್  ಕೋರ್ಟ್‌ಗೆ ಮನವಿ ಮಾಡಿದ್ದಾನೆ. ಆದರೆ, ಮುಂಬೈನ ಸೆಷನ್ಸ್‌ ನ್ಯಾಯಾಲಯವು ಈತನ ಅರ್ಜಿಯನ್ನು ವಜಾ ಮಾಡಿದೆ.

ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಮಾಜಿ ಸಹಚರ ಎಜಾಝ್ ಮೇಲೆ ಹಲವು ಕ್ರಿಮಿನಲ್‌ ಕೇಸುಗಳು ದಾಖಲಾಗಿವೆ. 2020ರ ಜನವರಿಯಿಂದ ಆತ ತಲೋಜಾ ಜೈಲಿನಲ್ಲಿದ್ದಾನೆ. ಇತ್ತೀಚೆಗಷ್ಟೇ ಆತ ಕೈದಿಗಳಿಗೆ ಸೊಳ್ಳೆ ಪರದೆ ಬಳಸಲು ಅವಕಾಶ ಕಲ್ಪಿಸುವಂತೆ ಕೋರಿ ಕೋರ್ಟ್‌ ಮೊರೆಹೋಗಿದ್ದ.

ಗುರುವಾರ ವಿಚಾರಣೆ ವೇಳೆ, ಸತ್ತ ಸೊಳ್ಳೆಗಳನ್ನು ಪ್ಲಾಸ್ಟಿಕ್‌ ಬಾಟಲಿಯೊಳಗೆ ತುಂಬಿಸಿ ಕೋರ್ಟ್‌ಗೆ ತಂದಿದ್ದ. ಎಲ್ಲ ಕೈದಿಗಳು ಪ್ರತಿದಿನ ಸೊಳ್ಳೆ ಕಾಟ ಎದುರಿಸುತ್ತಿದ್ದಾರೆ. ನಮಗೆ ಸೊಳ್ಳೆ ಪರದೆ ಬಳಸಲು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದ.

ಆದರೆ, ಭದ್ರತಾ ಕಾರಣಗಳಿಂದಾಗಿ ಅನುಮತಿ ನೀಡಲಾಗದು ಎಂದು ಜೈಲಿನ ಅಧಿಕಾರಿಗಳು ಹೇಳಿದ ಕಾರಣ, ಕೋರ್ಟ್‌ ಆತನ ಮನವಿಯನ್ನು ತಿರಸ್ಕರಿಸಿತು. ಎಜಾಝ್ ಮಾತ್ರವಲ್ಲದೇ, ಇನ್ನೂ ಅನೇಕ ಕೈದಿಗಳು ಇದೇ ಮಾದರಿಯ ಅರ್ಜಿಗಳನ್ನು ಸಲ್ಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next