ಗಂಗೊಳ್ಳಿ:ನಮ್ಮಲ್ಲಿ ಸಾಕಷ್ಟು ನಿಸರ್ಗದತ್ತವಾದ ಪ್ರಕೃತಿ ಸೌಂದರ್ಯವಿದೆ. ಸುಮಾರು 320 ಕಿಲೋ ಮೀಟರ್ ನಷ್ಟು ಬೀಚ್ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಕೃಷಿ, ಮೀನುಗಾರಿಕೆ ನಶಿಸುತ್ತಿರುವ ಉದ್ಯವಾಗಿದ್ದು, ಕರಾವಳಿ ಪ್ರದೇಶದಲ್ಲಿ ಬೀಚ್ ಟೂರಿಸಂ ಪ್ರಮುಖವಾಗಲಿದೆ ಎಂದು ಕರಾವಳಿ ಪ್ರವಾಸೋದ್ಯಮಗಳ ಸಂಘಟನೆ ಅಧ್ಯಕ್ಷ ಮನೋಹರ್ ಎಸ್.ಶೆಟ್ಟಿ ಹೇಳಿದರು.
ಅವರು ಕುಂದಾಪುರ ತಾಲೂಕಿನ ಗುಜ್ಜಾಡಿಯ ಹೆಬ್ಬಾರ್ ಬೈಲು ಎಂಬಲ್ಲಿ ಗಂಗೋತ್ರಿ ಹಾಲಿಡೇಸ್ ಕ್ರೂಸ್ ಸಾಂಪ್ರದಾಯಿಕ ದೋಣಿ ಮನೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಬೀಚ್ ಟೂರಿಸಂ ಇಂಡಸ್ಟ್ರೀಸ್ ಗೆ ಸರ್ಕಾರದ ಬೆಂಬಲ ಕೂಡಾ ಬೇಕಾಗಿದೆ. ನಮ್ಮ ಕರಾವಳಿ ಪ್ರದೇಶದಲ್ಲಿ ಟೆಂಪಲ್ ಟೂರಿಸಂ, ಬೀಚ್ ಟೂರಿಸಂ ಹಾಗೂ ಬ್ಯಾಕ್ ವಾಟರ್, ವಾಟರ್ ಸ್ಫೋರ್ಟ್ಸ್ ಪ್ರವಾಸೋದ್ಯಮಕ್ಕೆ ವಿಫುಲವಾದ ಅವಕಾಶವಿದೆ ಎಂದು ಹೇಳಿದರು.
ಇದು ನನ್ನ ಕನಸಿನ ಕೂಸು. ಹಲವಾರು ರಾಜ್ಯಗಳನ್ನು ಸುತ್ತುತ್ತಿದ್ದ ನನಗೆ. ನಮ್ಮಲ್ಲಿಯೇ ಇರುವ ಪ್ರಕೃತಿ ಸೌಂದರ್ಯವನ್ನು ಬೇರೆ ರಾಜ್ಯದವರಿಗೆ ಯಾಕೆ ಪರಿಚಯಿಸಬಾರದು ಎಂಬ ಮಹತ್ವಾಕಾಂಕ್ಷೆಯಿಂದ ಸಾಂಪ್ರದಾಯಿಕ ದೋಣಿ ಮನೆ ನಿರ್ಮಾಣವಾಗಿದೆ. ಕೇರಳ, ಗೋವಾದಲ್ಲಿ ಪ್ರವಾಸೋದ್ಯಮಕ್ಕೆ ಸರ್ಕಾರದಿಂದ ಸಾಕಷ್ಟು ನೆರವು ಸಿಗುತ್ತದೆ. ಆದರೆ ನಮ್ಮಲ್ಲಿಯೂ ಕೂಡಾ ಪ್ರವಾಸೋದ್ಯಮಕ್ಕೆ ಹೆಚ್ಚಿನ ನೆರವು ನೀಡಬೇಕು ಎಂದು ಗಂಗೋತ್ರಿ ಹಾಲಿಡೇಸ್ ನ ಮಾಲಕ ವಾಸುದೇವ ಅವರು ತಮ್ಮ ದೋಣಿ ಮನೆಯ ಕನಸನ್ನು ಬಿಚ್ಚಿಟ್ಟರು.
ಗಂಗೋತ್ರಿ ಹಾಲಿಡೇಸ್ ಕ್ರೂಸ್ ಸಾಂಪ್ರದಾಯಿಕ ದೋಣಿ ಮನೆಯನ್ನು ರಾಷ್ಟ್ರೀಯ ಕಬಡ್ಡಿ ಆಟಗಾರ ರಿಶಾಂಕ್ ದೇವಾಡಿಗ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಭಾಸ್ಕರ, ಬಿಜೆಪಿ ಹಿಂದುಳಿದ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಕರಾವಳಿ ಪ್ರವಾಸೋದ್ಯಮ ಸಂಘಟನೆಯ ನಾಗರಾಜ ಹೆಬ್ಬಾರ್, ಕೆನರಾ ಬ್ಯಾಂಕ್ ಕುಂದಾಪುರ ಶಾಖೆಯ ಪ್ರಬಂಧಕ ನಂದನ್ ಪಿ, ಕೊಲ್ಲೂರು ಮಹಸ್ಥಿತ ಧರ್ಮಪೀಠದ ಶ್ರೀಮೈತ್ರಿ ಸಮಾಖ್ಯಾತ, ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ, ಜಿಪಂ ಸದಸ್ಯೆ ಶೋಭಾ ಜಿ.ಪುತ್ರನ್, ಗಂಗೋತ್ರಿ ಹಾಲಿಡೇಸ್ ಕ್ರೂಶ್ ಮಾಲಕ ವಾಸುದೇವ ದೇವಾಡಿಗ ಉಪಸ್ಥಿತರಿದ್ದರು.
ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾಸುದೇವ ದೇವಾಡಿಗ ಪ್ರಾಸ್ತಾವಿಕ ಮಾತನ್ನಾಡಿ ಸ್ವಾಗತಿಸಿದರು. ಯಶವಂತ್ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.