Advertisement
ಕೋಡಿ – ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಹೂಳು ತುಂಬಿ, ಮೀನುಗಾರರಿಗೆ ಕಂಟಕವಾಗುತ್ತಿದೆ. ಬೋಟುಗಳು ಗಂಗೊಳ್ಳಿ ಬಂದರು ಪ್ರವೇಶಿಸಲು ಮತ್ತು ಹೊರ ಹೋಗಲು ಹರಸಾಹಸ ಪಡು ವಂತಾಗಿದೆ. ಮರಳು ದಿಬ್ಬಗಳ ಆಳ- ಎತ್ತರವನ್ನು ಅಂದಾಜಿಸಲಾಗದೆ ಅನೇಕ ಬೋಟುಗಳು ಅವಘಡಕ್ಕೆ ಈಡಾಗುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಹೂಳೆತ್ತಲು ಮುಂದಾಗುತ್ತಿಲ್ಲ ಎನ್ನುವ ಆರೋಪ ಮೀನುಗಾರ ವಲಯದಿಂದ ವ್ಯಕ್ತವಾಗುತ್ತಿದೆ.
ಸಮುದ್ರದ ಅಲೆಗಳ ಇಳಿತದ ಸಮಯದಲ್ಲಿ ಬೋಟುಗಳು ಸಂಚರಿಸುವುದು ಕಷ್ಟವಾಗುತ್ತಿದೆ. ಅಲೆಗಳು ಏರುವ ಸಮಯ ನೋಡಿ ಬೋಟುಗಳು ಬಂದರು ಒಳಗೆ ಬರುವುದು ಮತ್ತು ಹೊರಗೆ ಹೋಗಬೇಕಾಗಿದ್ದು, ಸಾಕಷ್ಟು ತೊಂದರೆಯಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಮರಳು ಶೇಖರಣೆಯಾಗಿದೆ. ಸಾಮಾನ್ಯವಾಗಿ ಬೋಟಿನ ಕೆಳಭಾಗವು ನೀರಿನ ಮಟ್ಟಕ್ಕಿಂತ 3 ಮೀ.ಗಳಷ್ಟು ಕೆಳಗಿರುತ್ತದೆ. ಅದಕ್ಕಿಂತಲೂ ಎರಡೂವರೆ ಮೀ.ಗಳಷ್ಟು ಆಳವಾಗಿ ಹೂಳೆತ್ತಿದರೆ ಮಾತ್ರ ಸುಗಮ ಸಂಚಾರ ಸಾಧ್ಯ. ಇಲ್ಲಿ ಹೂಳು ತುಂಬಿರುವುದರಿಂದ ಬೋಟುಗಳ ಸಂಚಾರಕ್ಕೆ ತೊಡಕಾಗಿದೆ ಎನ್ನುತ್ತಾರೆ ಮೀನುಗಾರರು. ನೆಪ ಮಾತ್ರಕ್ಕೆ ತೆರವು
ಕೋಡಿ, ಗಂಗೊಳ್ಳಿ, ಮರವಂತೆ, ಕೊಡೇರಿ ಸೇರಿದಂತೆ ಎಲ್ಲ ಕಡೆಗಳ ಬಂದರು ಭಾಗದ ಅಳಿವೆ ಪ್ರದೇಶಗಳಲ್ಲಿ ಸಮರ್ಪಕ ಡ್ರೆಜ್ಜಿಂಗ್ ನಡೆಯದೇ ಹಲವು ವರ್ಷಗಳು ಕಳೆದಿವೆ. ಇಲಾಖೆಯು ಪ್ರತಿ ವರ್ಷ ನೆಪ ಮಾತ್ರಕ್ಕೆ ಖಾಸಗಿಯವರ ಮೂಲಕ ಅಲ್ಪಸ್ವಲ್ಪ ಹೂಳೆತ್ತು ತ್ತದೆ. ಆದರೆ ಈವರೆಗೆ ಸರಿಯಾದ ರೀತಿಯಲ್ಲಿ ಡ್ರೆಜ್ಜಿಂಗ್ ಮಾಡಿರುವುದೇ ಇಲ್ಲ ಎನ್ನುವುದು ಮೀನುಗಾರರ ಆರೋಪ.
Related Articles
ಗಂಗೊಳ್ಳಿಯಲ್ಲಿ 50 ಪರ್ಸಿನ್ ಬೋಟುಗಳು, 300 ಫಿಶಿಂಗ್ ಬೋಟುಗಳು, 100ಕ್ಕೂ ಹೆಚ್ಚು ನಾಡದೋಣಿಗಳು, 70-80 ತ್ರಿಸೆವೆಂಟಿ ಬೋಟುಗಳು, 25 ಗಿಲ್‌ನೆಟ್‌ಗಳು, ಕೋಡಿಯಲ್ಲಿ 50 ಬೋಟುಗಳು, 10 ಜೋಡಿ ನಾಡದೋಣಿಗಳು, 25 ತ್ರಿಸೆವೆಂಟಿ ಬೋಟುಗಳು ಸೇರಿದಂತೆ ನೂರಾರು ಬೋಟುಗಳಿದ್ದು, ಸಾವಿರಾರು ಮಂದಿ ಮೀನುಗಾರಿಕೆ ವೃತ್ತಿಯನ್ನು ಆಶ್ರಯಿಸಿದ್ದಾರೆ. ಹೂಳೆತ್ತದೇ ಇರುವುದರಿಂದ ನೂರಾರು ಬೋಟುಗಳಿಗೆ ಕಂಟಕವಾಗುತ್ತಿದೆ.
Advertisement
ಡ್ರೆಜ್ಜಿಂಗ್ ಯಂತ್ರವಿಲ್ಲದೆ ಸಮಸ್ಯೆಎಂಟು ಮೀನು ಗಾರಿಕೆ ಬಂದರು ಮತ್ತು 26 ಮೀನುಗಾರಿಕೆ ಇಳಿದಾಣಗಳನ್ನು ಹೊಂದಿರುವ ರಾಜ್ಯದಲ್ಲಿ ಈವರೆಗೆ ಒಂದೇ ಒಂದು ಡ್ರೆಜಿಂಗ್ ಯಂತ್ರವಿಲ್ಲ ದಿರುವುದರು ವಿಪರ್ಯಾಸ. ಕರ್ನಾಟಕದಲ್ಲೆಲ್ಲೂ ಸರಕಾರಿ ಅಥವಾ ಖಾಸಗಿ ಡ್ರೆಜ್ಜಿಂಗ್ ಯಂತ್ರ ಇಲ್ಲ. ಕೇರಳದ ಸರಕಾರ ಸ್ವಂತ ಯಂತ್ರ ಹೊಂದಿದೆ. ಮಹಾರಾಷ್ಟ್ರ, ಗೋವಾ ಮತ್ತಿತರ ಕಡೆ ಖಾಸಗಿಯಿಂದ ಹೂಳೆತ್ತಲಾಗುತ್ತಿದೆ. ನಮ್ಮಲ್ಲೂ ಡ್ರೆಜ್ಜಿಂಗ್ ಮಾಡಬೇಕಾದರೆ ಅನ್ಯ ರಾಜ್ಯಗಳ ಖಾಸಗಿಯವರನ್ನು ಕರೆಸಿಕೊಳ್ಳಲಾಗುತ್ತದೆ. ಇದರಿಂದಲೇ ಬಂದರುಗಳಲ್ಲಿ ಹೂಳೆತ್ತುವ ಕಾರ್ಯ ಆಗುತ್ತಿಲ್ಲ. ಕರಾವಳಿಯ ಬಂದರುಗಳಲ್ಲಿ ಹೂಳೆತ್ತುವ ಸಂಬಂಧ ಯೋಜನೆ ರೂಪಿಸಲಾಗಿರುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಭರವಸೆ ನೀಡಿದ್ದಾರೆ. ಇದು ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ ಎನ್ನುವುದು ಮೀನುಗಾರರ ಆಶಯ. ಹೂಳೆತ್ತದೆ ಅನೇಕ ವರ್ಷ
ಗಂಗೊಳ್ಳಿ, ಕೋಡಿ ಭಾಗದಲ್ಲಿ ಹೂಳೆತ್ತದೆ ಅನೇಕ ವರ್ಷಗಳೇ ಆಗಿವೆ. ಪ್ರತಿ ಸಲ ಡ್ರೆಜ್ಜಿಂಗ್ ಮಾಡಲು ಮನವಿ ಸಲ್ಲಿಸುತ್ತೇವೆ ಅನ್ನುತ್ತಾರೆ. ಕೆಲವು ವರ್ಷಗಳ ಹಿಂದೆ ಡ್ರೆಜ್ಜಿಂಗ್ ಮಾಡಲು ಎಲ್ಲ ಯೋಜನೆಗಳು ಸಿದ್ಧವಾಗಿದ್ದವು. ಆದರೆ ಅದು ಅರ್ಧಕ್ಕೆ ನಿಂತು ಹೋಯಿತು. ಅಲ್ಲಿಂದ ಇಲ್ಲಿವರೆಗೆ ಡ್ರೆಜ್ಜಿಂಗ್ ಮಾಡಿಲ್ಲ. ಬೋಟು, ದೋಣಿಗಳ ಸಂಚಾರಕ್ಕೆ ಭಾರೀ ಸಮಸ್ಯೆಯಾಗುತ್ತಿದೆ. ಅವಘಡ ಸಂಭವಿಸುವ ಅಪಾಯವೂ ಇದೆ.
– ರಾಮಪ್ಪ ಖಾರ್ವಿ ಗಂಗೊಳ್ಳಿ, ಮೀನುಗಾರರು ಪ್ರಸ್ತಾವ ಸಲ್ಲಿಕೆ
ಗಂಗೊಳ್ಳಿ, ಕೋಡಿ ಅಳಿವೆ ಪ್ರದೇಶ, ಬ್ರೇಕ್‌ವಾಟರ್ ಭಾಗದಲ್ಲಿ ಹೂಳೆತ್ತುವ ಸಂಬಂಧ ಸರ್ವೇ ಮಾಡಿ, ಅದರ ವರದಿಯನ್ನಾಧರಿಸಿ, ಅಂದಾಜು ಮಾಡಿ ಸರಕಾರಕ್ಕೆ ಅನುದಾನಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ. ಮೀನುಗಾರರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಅರಿವಿದ್ದು, ಶೀಘ್ರ ಹೂಳೆತ್ತಲು ಎಲ್ಲ ರೀತಿಯಲ್ಲೂ ಪ್ರಯತ್ನ ಮಾಡಲಾಗುತ್ತಿದೆ.
– ಉದಯ ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಬಂದರು ಮತ್ತು ಮೀನುಗಾರಿಕೆ ಇಲಾಖೆ