Advertisement

ಗಂಗೊಳ್ಳಿ: ತ್ಯಾಜ್ಯ ಸಂಗ್ರಹಾಗಾರ ಆಗುತ್ತಿದೆ ಸಮುದ್ರತೀರ

08:16 PM Oct 03, 2021 | Team Udayavani |

ಗಂಗೊಳ್ಳಿ: ಪಂಚ ನದಿಗಳ ಸಂಗಮದ ತಾಣವಾಗಿರುವ ಗಂಗೊಳ್ಳಿಯ ಸುಂದರ ಸಮುದ್ರ ತೀರ ತ್ಯಾಜ್ಯ ವಿಸರ್ಜನೆಯ ಕೇಂದ್ರವಾಗಿ ಮಾರ್ಪಡುತ್ತಿದ್ದು, ಪ್ರವಾಸಿಗರು, ವಾಯು ವಿಹಾರಿಗಳು ತೀವ್ರ ಮುಜುಗರ ಅನುಭವಿಸು ವಂತಾಗಿದೆ.

Advertisement

ಪ್ರವಾಸಿ ತಾಣ
ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವೆಂದು ಗುರುತಿಸಲ್ಪಡುವ ಗಂಗೊಳ್ಳಿ ಸಮುದ್ರ ತೀರ ಅಭಿವೃದ್ಧಿಯ ಭಾಗ್ಯ ಕಂಡಿಲ್ಲ. ತ್ರಾಸಿ-ಮರವಂತೆ ಕಡಲ ಕಿನಾರೆ ಹೊರತುಪಡಿಸಿದರೆ ಈ ಭಾಗದ ಯಾವುದೇ ಕಡಲ ಕಿನಾರೆ ಪ್ರದೇಶಗಳು ಅಭಿವೃದ್ಧಿ ಹೊಂದಿಲ್ಲ. ಮೀನುಗಾರಿಕೆ ಬಂದರು, ಹಳೆಯ ಲೈಟ್‌ಹೌಸ್‌ ಸೇರಿದಂತೆ ಸುಮಾರು 450 ವರ್ಷಕ್ಕೂ ಪುರಾತನ‌ ದೇವಸ್ಥಾನಗಳು, ಶಿಲಾಶಾಸನ ಗಳು ಗಂಗೊಳ್ಳಿಯಲ್ಲಿ ಇವೆ.

ಕಡಲತೀರಕ್ಕೆ ತ್ಯಾಜ್ಯ ವಿಲೇವಾರಿಗೆ ಎಸ್‌ಎಲ್‌ಆರ್‌ಎಂ ಘಟಕ ಕಾರ್ಯನಿರ್ವಹಿಸುತ್ತಿದ್ದರೂ ಮನೆ ಹಾಗೂ ವಾಣಿಜ್ಯ ಮಳಿಗೆಗಳ ತ್ಯಾಜ್ಯವನ್ನು ಸಂಜೆ ಬಳಿಕ ಕಡಲ ತೀರಕ್ಕೆ ಎಸೆಯಲಾಗುತ್ತಿದೆ. ಹಳೆ ಸಾಮಗ್ರಿಗಳು, ಹಾಳಾದ ಟಿವಿ, ಫ್ರಿಡ್ಜ್ ಮೊದಲಾದ ಉಪಕರಣಗಳನ್ನು, ಮನೆಯ ನಿರುಪ
ಯುಕ್ತ ಕಟ್ಟಡ ಸಾಮಗ್ರಿ, ಮರಗಳನ್ನು ಕೂಡ ಕಡಲಿನಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಇದರಿಂದಾಗಿ ಜನರಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ. ಮೂಗು ಮುಚ್ಚಿಕೊಂಡು ತಿರುಗಾಡಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ. ಕಳೆದ ಕೆಲವು ದಿನಗಳ ಹಿಂದೆ ಕಡಲ ತೀರದಲ್ಲಿ ಬಿಸಾಡಿದ ಪ್ಲಾಸ್ಟಿಕ್‌ ತ್ಯಾಜ್ಯ ತಿಂದು ಜಾನುವಾರು ಮೃತಪಟ್ಟಿತ್ತು.

ಗಂಭೀರವಾಗಿ ಪರಿಗಣಿಸಿಲ್ಲ
ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಗಂಗೊಳ್ಳಿ ಕಡಲ ತೀರ ತ್ಯಾಜ್ಯ ವಿಸರ್ಜನೆಯ ಕೇಂದ್ರವಾಗಿ ಮಾರ್ಪಾಡಾಗುತ್ತಿರುವ ಬಗ್ಗೆ
ಸ್ಥಳೀಯಾಡಳಿತ ಗಂಭೀರವಾಗಿ ಪರಿಗಣಿ ಸಿಲ್ಲ. ಪ್ರವಾಸೋದ್ಯಮ, ಹಾಗೂ ಅರಣ್ಯ ಇಲಾಖೆ ಕೂಡ ತ್ಯಾಜ್ಯ ಎಸೆಯುವುದನ್ನು ನಿಲ್ಲಿಸಲು ಯಾವುದೇ ಕ್ರಮ ಕೈಗೊಳ್ಳದಿರುವುದು ತ್ಯಾಜ್ಯ ಎಸೆಯುವವರಿಗೆ ವರದಾನವಾಗಿ ಪರಿಣಮಿಸಿದೆ. ಕಡಲ ತೀರದಲ್ಲಿ ವಿಹರಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಆಸುಪಾಸಿನ ಮಂದಿ ಬೀಚ್‌ನಲ್ಲಿ ಗೊತ್ತಿಲ್ಲದೆ ತ್ಯಾಜ್ಯ ಎಸೆಯುತ್ತಿರುವುದು ಸುತ್ತಮುತ್ತಲಿನ ನಿವಾಸಿಗಳ ನಿದ್ರೆಗೆಡಿಸಿದೆ.
ಅಂಕುಶ ಅಗತ್ಯ ಸುಂದರ ಕಡಲ ತೀರವಾಗಿ ರೂಪುಗೊಳ್ಳಬೇಕಾಗಿದ್ದ ಗಂಗೊಳ್ಳಿ ಕಡಲ ತೀರ ತ್ಯಾಜ್ಯ ಎಸೆಯುವ ಕೇಂದ್ರವಾಗಿ ಬೆಳೆಯುತ್ತಿದೆ. ಕಡಲ ತೀರದಲ್ಲಿ ತ್ಯಾಜ್ಯ ವಿಸರ್ಜನೆಗೆ ಅಂಕುಶ ಹಾಕದಿದ್ದಲ್ಲಿ ಮತ್ತೊಂದು ಡಂಪಿಂಗ್‌ ಯಾರ್ಡ್‌ ಆಗುವುದರಲ್ಲಿ ಸಂಶಯ ವಿಲ್ಲ. ಸಂಬಂಧಪಟ್ಟ ಇಲಾಖೆ, ಗ್ರಾ.ಪಂ. ಸೂಕ್ತ ಕಠಿನ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಗಂಗೊಳ್ಳಿ ಯನ್ನು ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿಪಡಿಸಿದರೆ ತ್ಯಾಜ್ಯ ವಿಲೇವಾರಿಗೆ ಬ್ರೇಕ್‌ ಬೀಳಲಿದೆ. ಎನ್ನುತ್ತಾರೆ ಸ್ಥಳೀಯರಾದ ಕೃಷ್ಣ ಖಾರ್ವಿ.

ಇದನ್ನೂ ಓದಿ:ಹುಮನಾಬಾದ್ ನಲ್ಲೊಂದು ಸರಳ ವಿವಾಹ : ಪುರೋಹಿತರಿಲ್ಲ, ವಧುವಿಗೆ ತಾಳಿ ಇಲ್ಲ, ಹೂ ಮಾಲೆಯೂ ಇಲ್ಲ

Advertisement

ತ್ಯಾಜ್ಯ ರಾಶಿ
ಸುಂದರ ರಮಣೀಯ ಪ್ರದೇಶದ ಕಡಲತೀರ ತ್ಯಾಜ್ಯದಿಂದ ತುಂಬಿ ತುಳುಕುತ್ತಿದೆ. ಕಡಲ ತೀರಕ್ಕೆ ಹೋಗುವ ದಾರಿಯುದ್ದಕ್ಕೂ ತಾಜ್ಯಗಳು ಕಂಡು ಬರುತ್ತಿದೆ. ಪ್ರವಾಸಿಗರನ್ನು ಹಾಗೂ ಪ್ರತಿನಿತ್ಯ ವಿಹಾರಕ್ಕೆಂದು ಬರುವ ಜನರನ್ನು ಈ ಪರಿಸರದ ಗಬ್ಬು ವಾಸನೆ ಸ್ವಾಗತಿಸುತ್ತಿದೆ. ಎಲ್ಲಿ ನೋಡಿದರಲ್ಲಿ ತ್ಯಾಜ್ಯ ವಸ್ತುಗಳನ್ನು ಎಸೆಯಲಾಗಿದೆ. ಕಡಲ ತೀರಕ್ಕೆ ಸಾಗುವ ದಾರಿಯ ಇಕ್ಕೆಲಗಳಲ್ಲಿ ಭಾರಿ ಪ್ರಮಾಣದ ತ್ಯಾಜ್ಯ ಸಂಗ್ರಹಗೊಂಡಿದೆ.

ಗಂಭೀರವಾಗಿ ಪರಿಗಣಿಸಲಿ
ಕಳೆದ ಹಲವು ವರ್ಷಗಳಿಂದ ಜನರು ಗಂಗೊಳ್ಳಿ ಬೀಚ್‌ನಲ್ಲಿ ತ್ಯಾಜ್ಯ ಎಸೆಯುತ್ತಿದ್ದು ಅನೇಕ ಬಾರಿ ಈ ಬಗ್ಗೆ ಸ್ಥಳೀಯ ಗ್ರಾಪಂ.ಗೆ ದೂರು ನೀಡಲಾಗಿದೆ. ಆದರೆ ತ್ಯಾಜ್ಯ ಎಸೆಯುವುದು ಕಡಿಮೆಯಾಗಿಲ್ಲ. ಪ್ರತಿನಿತ್ಯ ತ್ಯಾಜ್ಯ ಎಸೆಯುವುದು ವ್ಯಾಪಕವಾಗುತ್ತಿದೆ. ಪರಿಸರದಲ್ಲಿ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಎಲ್ಲರೂ ತಂದು ಬೀಚ್‌ ವಠಾರದಲ್ಲಿ ತ್ಯಾಜ್ಯ, ಕಟ್ಟಡದ ನಿರುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಸ್ಥಳೀಯಾಡಳಿತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು.
-ಜಾನ್ಸನ್‌, ಸ್ಥಳೀಯ ನಿವಾಸಿ.

ಕ್ರಮ ಕೈಗೊಳ್ಳಲಾಗುವುದು
ಗಂಗೊಳ್ಳಿ ಬೀಚ್‌ನಲ್ಲಿ ತ್ಯಾಜ್ಯ ವಿಸರ್ಜನೆಗೆ ಸಂಬಂಧಪಟ್ಟಂತೆ ಈಗಾಗಲೇ ಅನೇಕ ಬಾರಿ ಸ್ಥಳೀಯರಿಗೆ ಮೌಖಿಕ ಎಚ್ಚರಿಕೆ ನೀಡಲಾಗಿದೆ. ಆದರೂ ತ್ಯಾಜ್ಯ ಎಸೆಯುವುದು ಕಡಿಮೆಯಾಗಿಲ್ಲ. ಸಂಬಂಧಪಟ್ಟ ಇಲಾಖಾಧಿಕಾರಿಗಳ ಜತೆ ಚರ್ಚೆ ನಡೆಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಸದ್ಯ ಬೀಚ್‌ ವಠಾರದಲ್ಲಿರುವ ತ್ಯಾಜ್ಯಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
-ಉಮಾಶಂಕರ, ಅಭಿವೃದ್ಧಿ ಅಧಿಕಾರಿ, ಗ್ರಾ. ಪಂ. ಗಂಗೊಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next