Advertisement

Gangolli: ಸ್ವಯಂ ಪ್ರೇರಣೆಯಿಂದ ಚಿತ್ರ ಕಲಾವಿದೆಯಾದ ತುಳಸಿ

05:27 PM May 01, 2024 | Team Udayavani |

ಗಂಗೊಳ್ಳಿ: ಉತ್ತಮ ಹವ್ಯಾಸ ಎನ್ನುವಂತದ್ದು ಯಾವತ್ತಿಗೂ ಸಾಧನೆಯ ಹಾದಿಯಲ್ಲಿ ಹೊಸ ಹುಮ್ಮಸ್ಸನ್ನು ತಂದು ಕೊಡುತ್ತದೆ. ವಿಶೇಷವಾಗಿ ಚಿತ್ರಕಲೆಯಂತಹ ಹವ್ಯಾಸ ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆ ರೂಪಿಸಿಕೊಳ್ಳಲು ಹಾಗೂ ಕಲಿಕೆಗೆ ಪೂರಕವಾದ ಮನಸ್ಸನ್ನು ಹೊಂದಲು ಸಹಕರಿಯಾಗುತ್ತದೆ.

Advertisement

ಇಂತಹ ಚಿತ್ರಕಲೆಯನ್ನು ತನ್ನ ಎಳೆಯ ವಯಸ್ಸಿನಲ್ಲಿ ಹವ್ಯಾಸವಾಗಿಸಿಕೊಂಡು, ಸ್ವಯಂ ಪ್ರೇರಣೆಯಿಂದ ಚಿತ್ರ ರಚನೆಯಲ್ಲಿ ತೊಡಗಿಸಿಕೊಂಡು ತನ್ನೊಳಗಿದ್ದ ಚಿತ್ರಗಾರ್ತಿಯನ್ನು ಕೃತಿರೂಪಕ್ಕಿಳಿಸಿ ನೋಡುಗರು ಬೆರಗಾಗುವಂತೆ ಮೆಚ್ಚಿ ಹೊಗಳುವಂತೆ ಮಾಡಿರುವುದು ಕುಂದಾಪುರ ತಾಲೂಕಿನ ಗಂಗೊಳ್ಳಿಯ ಪ್ರತಿಭೆ ತುಳಸಿ.

ಗಂಗೊಳ್ಳಿಯ ಪ್ರಸಿದ್ಧ ಛಾಯಾ ಚಿತ್ರಗ್ರಾಹಕ ಗಣೇಶ ಪಿ. ವೆಲ್‌ಕಮ್‌ ಮತ್ತು ಉಪನ್ಯಾಸಕಿ ಮಾಲತಿ ದಂಪತಿಯ ಪುತ್ರಿ ತುಳಸಿ
ಯಾವತ್ತೂ ಚಿತ್ರ ರಚನೆಯ ತರಗತಿಗಳಿಗೆ ಹೋದವಳಲ್ಲ. ಯಾವುದೇ ಚಿತ್ರಕಲಾ ಶಿಕ್ಷಕರ ಬಳಿ ತರಬೇತಿ ಪಡೆದವರಲ್ಲ. ತಂದೆ ಗಣೇಶ ಅವರು ಬಿಡಿಸುತ್ತಿದ್ದ ಚಿತ್ರಗಳಿಂದ ಪ್ರೇರಣೆ ಸ್ಫೂರ್ತಿ ಪಡೆದು, ಹಾಗೆ ಸುಮ್ಮನೆ ಎನ್ನುವಂತೆ ಚಿತ್ರ ರಚನೆಯಲ್ಲಿ ತೊಡಗಿಸಿಕೊಂಡ ತುಳಸಿ ಅವರ ಕೈಯಲ್ಲಿ ಈಗ ಮೂಡಿ ಬರುತ್ತಿರುವ ಸುಂದರ ಚಿತ್ರಗಳು ನೋಡುಗರನ್ನು ಮಂತ್ರ
ಮುಗ್ದರನ್ನಾಗಿಸುತ್ತಿದೆ.

ಕೊರೊನಾ ಸಮಯದಲ್ಲಿ ಸಿಕ್ಕ ಬಿಡುವಿನ ವೇಳೆಯನ್ನು ಸದು ಪಯೋಗಪಡಿಸಿಕೊಂಡು ಸ್ವಯಂ ಪ್ರೇರಣೆಯಿಂದ ಚಿತ್ರ ರಚನೆಯಲ್ಲಿ ತೊಡಗಿಸಿಕೊಂಡಿದ್ದ ತುಳಸಿ, ಚಿತ್ರಕಲೆಯಲ್ಲಿ ಪಳಗಿರುವ ರೀತಿ ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ.

Advertisement

ಈಕೆಯ ಕರಗಳಲ್ಲಿ ಅರಳಿದ ಕೃಷ್ಣ, ಗಣೇಶ, ಬುದ್ಧ, ಮುದುಕಿ, ಸನ್ಯಾಸಿ, ಹಂಸ, ವೃದ್ಧ, ಪ್ರಕೃತಿ ಮೊದಲಾದ ಚಿತ್ರಗಳು ಈಕೆಯ ಕಲಾ ಪ್ರೌಢಿಮೆಯನ್ನು ಸಾರಿ ಹೇಳುತ್ತದೆ. ಬೆಣಚುಕಲ್ಲಿನಲ್ಲಿ ವೈವಿಧ್ಯಮಯವಾದ ಆಕರ್ಷಕ ಚಿತ್ರಗಳನ್ನು ಬಿಡಿಸಿರುವ ಈಕೆ,
ಮಹಾಭಾರತದ ವಿವಿಧ ಸನ್ನಿವೇಶ, ಮಹಿಳೆಯರ ಮೇಲಿನ ದೌರ್ಜನ್ಯ, ನೀರಿನ ಸಮಸ್ಯೆ ಮೊದಲಾದವುಗಳ ಬಗ್ಗೆ ಬಿಡಿಸಿದ ಚಿತ್ರಗಳು ಕಲಾಸಕ್ತರ ಗಮನ ಸೆಳೆದು ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ. ಪೆನ್ಸಿಲ್‌ ಮತ್ತು ಬಣ್ಣಗಳಿಂದಲೇ ಭಾವಗಳನ್ನು ತೆರೆದಿಡುವ ಈಕೆಯ ಕಲಾ ಪ್ರೌಢಿಮೆ ಅಭಿನಂದನೀಯ.

ಸ್ಪರ್ಧೆಯ ಕಡೆಗೆ ಹೆಚ್ಚು ಆಸಕ್ತಿ ತೋರಿಸದ ತುಳಸಿ, ಚಿತ್ರ ಬಿಡಿಸುವುದರಲ್ಲೇ ಮನಸ್ಸಿಗೆ ನೆಮ್ಮದಿ ಖುಷಿ, ಸಂತೃಪ್ತಿ ಸಿಗುತ್ತದೆ ಅಷ್ಟು
ಸಾಕು ಎನ್ನುವ ವಿನೀತ ಭಾವ ಹೊಂದಿದ್ದಾಳೆ. ನವೀನ ಕಲ್ಪನೆ ಹಾಗೂ ಸೃಜನಶೀಲತೆಯನ್ನು ಮೇಳೈಸಿಕೊಂಡು ಮತ್ತಷ್ಟು ಈ ನಿಟ್ಟಿನಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡುವ ಹಂಬಲ ಈಕೆಗಿದೆ. ಮೊಬೈಲ್‌, ರೀಲ್ಸ್‌, ಟಿವಿ, ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಕಳೆದುಹೋಗಿರುವ ಇಂದಿನ ವಿದ್ಯಾರ್ಥಿಗಳಿಗೆ ತುಳಸಿಯಂತಹ ಪ್ರತಿಭೆಗಳು ನಿಜಕ್ಕೂ ಪ್ರೇರಣೆ ಆಗಬಲ್ಲರು.

ಗಮನ ಸೆಳೆದ ರಾಮನ ಚಿತ್ರ
ತುಳಸಿ, ಅವರ ಕೈಯಲ್ಲಿ ಅರಳಿದ ಅಯೋಧ್ಯೆ ಶ್ರೀರಾಮ ಮಂದಿರದ ಶ್ರೀ ಬಾಲರಾಮನ ಚಿತ್ರ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿದೆ. ಅಯೋಧ್ಯೆ ಶ್ರೀ ರಾಮ ಮಂದಿರದ ಬಾಲರಾಮನ ವಿಗ್ರಹದ ಪ್ರತಿರೂಪದಂತಿರುವ ಈ ಚಿತ್ರ ನೋಡುತ್ತಿದ್ದರೆ ಎಂಥವರು ಕೂಡ ಕೈ ಮುಗಿಯುವಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next