Advertisement

ಗಂಗೊಳ್ಳಿ: ಮೀನು ಮಾರುಕಟ್ಟೆ ಕೊಳಚೆ ನೀರು ಚರಂಡಿಗೆ

01:00 AM Mar 11, 2019 | Team Udayavani |

ಗಂಗೊಳ್ಳಿ: ಎರಡು ವರ್ಷಗಳ ಹಿಂದೆ ಗಂಗೊಳ್ಳಿಯಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಮೀನು ಮಾರುಕಟ್ಟೆಯಿಂದ ಹೊರ ಬರುವ ಕೊಳಚೆ ನೀರು ಚರಂಡಿಗೆ ಹೋಗುತ್ತಿದ್ದು, ಇದರಿಂದ ಹೊರ ಬರುವ ದುರ್ವಾಸನೆಯಿಂದ ಸಮೀಪದಲ್ಲಿರುವ ಸರಕಾರಿ ಶಾಲೆಯ ಮಕ್ಕಳು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. 

Advertisement

ಗಂಗೊಳ್ಳಿಯಲ್ಲಿರುವ ಈ ಸುಸಜ್ಜಿತ ಮೀನು ಮಾರುಕಟ್ಟೆಯಲ್ಲಿ ಒಟ್ಟು 43 ಮಂದಿ ಮಹಿಳೆಯರಿಗೆ ಮೀನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಸದ್ಯ 20-25 ಮಂದಿ ಮಹಿಳೆಯರು ಪ್ರತಿ ದಿನ ಮೀನು ಮಾರಾಟ ಮಾಡುತ್ತಾರೆ. 

ಗ್ರಾಮಸಭೆಯಲ್ಲೂ ಪ್ರಸ್ತಾಪ
ಮೀನು ಮಾರುಕಟ್ಟೆಯ ಕೊಳಚೆ ನೀರಿನ ವಾಸನೆಯಿಂದ ಶಾಲೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೀನು ಮಾರುಕಟ್ಟೆ ಸಮೀಪದ ಚರಂಡಿಯಲ್ಲಿ ಪ್ಲಾಸ್ಟಿಕ್‌ ಮತ್ತಿತರ ತ್ಯಾಜ್ಯಗಳು ತುಂಬಿಕೊಂಡಿದ್ದು, ಇದರ ಪರಿಹಾರಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಇತ್ತೀಚೆಗೆ ನಡೆದ ಗಂಗೊಳ್ಳಿಯ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆಯಲ್ಲಿ ಇಲ್ಲಿನ ಸರಕಾರಿ ಕಿ.ಪ್ರಾ. ಶಾಲೆಯ ವಿದ್ಯಾರ್ಥಿನಿ ಮನಿಷಾ ಆಗ್ರಹಿಸಿದ್ದರು. 

ಸಮಸ್ಯೆಯೇನು?
ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ 2 ವರ್ಷಗಳ ಹಿಂದೆ ನಿರ್ಮಾಣಗೊಂಡ ಮೀನು ಮಾರುಕಟ್ಟೆಯಿಂದ ಹೊರ ಹೋಗುವ ಕೊಳಚೆ ನೀರಿನ ಸಮರ್ಪಕ ವಿಲೇವಾರಿ ಮಾಡದ ಕಾರಣ ಸಮೀಪದಲ್ಲೇ ಇರುವ ಗಂಗೊಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ದುರ್ವಾಸನೆಯಲ್ಲೇ ತರಗತಿಯಲ್ಲಿ ಕುಳಿತುಕೊಳ್ಳುವಂತಾಗಿದೆ.

ಶೀಘ್ರ ಸಮಸ್ಯೆ ಪರಿಹರಿಸಲಿ
ಮೀನು ಮಾರುಕಟ್ಟೆಯಿಂದ ಹೊರ ಬರುವ ಕೊಳಚೆ ನೀರನ್ನು ಮಳೆ ನೀರು ಹೋಗುವ ಚರಂಡಿಗೆ ಬಿಡುವ ಬದಲು ಒಳಚರಂಡಿ ನಿರ್ಮಾಣ ಮಾಡಿ ಅಥವಾ ತ್ಯಾಜ್ಯ ಗುಂಡಿ ತೆಗೆದು ಅದಕ್ಕೆ ಬಿಟ್ಟರೆ ದುರ್ವಾಸನೆ ಬರಲು ಸಾಧ್ಯವಿಲ್ಲ. ಶೀಘ್ರ ಈ ಸಮಸ್ಯೆ ಕುರಿತು ಕ್ರಮವಹಿಸಲಿ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ, ಸ್ಥಳೀಯಾಡಳಿತ ಗಮನಹರಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ. 

Advertisement

ಪರಿಶೀಲನೆ ನಡೆಸಲಾಗುವುದು
ಈ ಬಗ್ಗೆ ಗ್ರಾಮಸಭೆಯಲ್ಲಿ ಮಕ್ಕಳು ಗಮನಸೆಳೆದಿದ್ದು, ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಸೋಮವಾರ ಅಲ್ಲಿಗೆ ಗ್ರಾ.ಪಂ. ಅಧ್ಯಕ್ಷರೊಂದಿಗೆ ಭೇಟಿ ಕೊಟ್ಟು ಸಮಸ್ಯೆ ಪರಿಹಾರಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು. ಮಕ್ಕಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ.
– ಚಂದ್ರಶೇಖರ್‌, ಗಂಗೊಳ್ಳಿ ಗ್ರಾ.ಪಂ. ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next