Advertisement
ಜೆಟ್ಟಿಯ ಸ್ಲ್ಯಾಬ್ ಮತ್ತೆ ಕುಸಿದಿರುವುದು ಮಾತ್ರವಲ್ಲದೆ ಎರಡನೇ ಹರಾಜು ಪ್ರಾಂಗಣ ಅಪಾಯಕಾರಿ, ಕುಸಿಯುವ ಭೀತಿಯಿಂದ ಇಲ್ಲಿ ಯಾವುದೇ ಮೀನುಗಾರಿಕಾ ಚಟುವಟಿಕೆ ನಡೆಸದಂತೆ ನಾಲ್ಕು ಸುತ್ತಲೂ ಇಟ್ಟಿಗೆಯಿಂದ ತಡೆಗೋಡೆ ಕಟ್ಟಲಾಗಿತ್ತು. ಅದು ಕೂಡ ಒಂದು ಬದಿ ಕುಸಿದಿದ್ದು, ಮತ್ತೂಂದು ಬದಿ ಬಿರುಕುಬಿಟ್ಟಿದೆ.
ಈಗ ಈ ಎರಡನೇ ಹರಾಜು ಪ್ರಾಂಗಣದಲ್ಲಿ ಮೀನುಗಾರರಿಗೆ ಅಪಾಯ ಎದುರಾಗಬಹುದು ಎನ್ನುವ ಕಾರಣಕ್ಕೆ ಇಲ್ಲಿ ಎಲ್ಲ ರೀತಿಯ ಮೀನುಗಾರಿಕಾ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಸ್ಲ್ಯಾಬ್ ದುರಸ್ತಿಯಾಗುವವರೆಗೆ ಬಂದರಿನ ಬೇರೆ ಕಡೆ ಬದಲಿ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಮೀನುಗಾರಿಕಾ ಋತು ಆರಂಭಕ್ಕೂ ಮುನ್ನ ಅಧಿಕಾರಿಗಳು ಹೇಳಿದ್ದರೂ ಇನ್ನೂ ಪರ್ಯಾಯ ವ್ಯವಸ್ಥೆಯನ್ನೇ ಮಾಡಿಕೊಟ್ಟಿಲ್ಲ. ಇಲ್ಲಿ ಸುಮಾರು 300ಕ್ಕೂ ಮಿಕ್ಕಿ ಪರ್ಸಿನ್, 600ಕ್ಕೂ ಹೆಚ್ಚು ಫಿಶಿಂಗ್ ಬೋಟ್‌ಗಳಿವೆ. 500ಕ್ಕೂ ಅಧಿಕ ನಾಡದೋಣಿಗಳಿವೆ. ಇದರಿಂದ ಬಂದರಿನಲ್ಲಿ ಬೋಟುಗಳಿಂದ ಮೀನು ಇಳಿಸಲು, ಬೋಟು ನಿಲುಗಡೆಗೆ ಜಾಗದ ಸಮಸ್ಯೆಯಾಗುತ್ತಿದೆ. 3ನೇ ಬಾರಿಗೆ ಕುಸಿತ
2018ರ ಸೆ. 14ರಂದು ಮೀನುಗಾರಿಕಾ ಬಂದರಿನ ಎರಡನೇ ಹರಾಜು ಪ್ರಾಂಗಣದ ಜೆಟ್ಟಿಯ ಸ್ಲ್ಯಾಬ್ ಕುಸಿದು ಬಿದ್ದಿತ್ತು. ಆ ಬಳಿಕ ಡಿಸೆಂಬರ್‌ನಲ್ಲಿ ಮತ್ತೂಂದು ಕಡೆ ಕೂಡ ಸ್ಲ್ಯಾಬ್ ಕುಸಿದಿತ್ತು. ಈಗ ಮತ್ತೆ ಕುಸಿದಿದೆ. ಜೆಟ್ಟಿ ಒಟ್ಟು ಅಂದಾಜು 400 ಮೀ. ಉದ್ದವಿದ್ದು, ಅದರಲ್ಲಿ 100 ಮೀ. ಉದ್ದದ ಜೆಟ್ಟಿ ಈವರೆಗೆ ಕುಸಿದಿದೆ. ಇನ್ನು ಸಮುದ್ರದ ನೀರು ಒಳಗೆ ನುಗ್ಗುತ್ತಿರುವುದರಿಂದ ಜೆಟ್ಟಿಯ ಅಡಿಪಾಯಕ್ಕೆ ಕುತ್ತು ತರುವ ಭೀತಿಯೂ ಎದುರಾಗಿದೆ. ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ, ಹರಾಜು ಪ್ರಾಂಗಣದ ಗೋಡೆ, ಜೆಟ್ಟಿ ಎಲ್ಲವೂ ಕುಸಿಯುವ ಸಂಭವ ಇದೆ ಎನ್ನುವ ಆತಂಕ ಮೀನುಗಾರರದ್ದು.
Related Articles
ಈಗ 3 ನೇ ಬಾರಿಗೆ ಜೆಟ್ಟಿಯ ಸ್ಲ್ಯಾಬ್ ಕುಸಿದಿದೆ. ಇಷ್ಟು ಸಮಯವಾದರೂ ಇನ್ನೂ ಒಂಚೂರು ಕೂಡ ಕಾಮಗಾರಿಯೇ ಆಗಿಲ್ಲ. ಇವರು ಮೀನುಗಾರರ ಪ್ರಾಣ ಹೋಗಲಿ ಅನ್ನುವುದನ್ನು ಕಾಯುತ್ತಿ ದ್ದಾರೆಯೇ? ಇಷ್ಟು ದಿನ ಬರೀ ಭರವಸೆಗಳೇ ಆಯಿತು. ಎಲ್ಲ ಬಂದರುಗಳಂತೆಯೇ ನಾವು ಅರ್ಹರಲ್ಲವೇ? ಇವರಿಂದ ಆಗದಿದ್ದರೆ ಜೀವಹಾನಿ ಸಂಭವಿಸುವ ಮುನ್ನ ಇಡೀ ಬಂದರನ್ನೇ ಮೀನುಗಾರಿಕೆಗೆ ಯೋಗ್ಯವಲ್ಲ ಎಂದು ಬಂದ್ ಮಾಡಲಿ.
-ರಮೇಶ್ ಕುಂದರ್,
ಅಧ್ಯಕ್ಷರು, ಪರ್ಸಿನ್ ಮೀನುಗಾರರ ಸಹಕಾರ ಸಂಘ, ಗಂಗೊಳ್ಳಿ
Advertisement
ಹೆಚ್ಚುವರಿ ಅನುದಾನಕ್ಕೆ ವಿಳಂಬಗಂಗೊಳ್ಳಿ ಬಂದರಿನ ಪೂರ್ಣ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಎಂಜಿನಿಯರ್‌ಗಳು ಸಿದ್ಧಪಡಿಸಿದ್ದು, ಈಗಾಗಲೇ ಸರಕಾರ 1.98 ಕೋ.ರೂ. ಮಂಜೂರಾತಿ ನೀಡಿದ್ದರೂ ಹೆಚ್ಚಿನ ಅನುದಾನಕ್ಕಾಗಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರು ಮೀನುಗಾರಿಕಾ ಅಧಿಕಾರಿಗಳ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾವಿಸಿ, ಜೆಟ್ಟಿಯ ಮರು ನಿರ್ಮಾಣಕ್ಕಾಗಿ 12.5 ಕೋ.ರೂ. ವೆಚ್ಚದ ಯೋಜನೆ ಸಿದ್ಧಪಡಿಸಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ. ಹೆಚ್ಚುವರಿ ಅನುದಾನದ ಅಗತ್ಯವಿದ್ದುದರಿಂದ ವಿಳಂಬವಾಗುತ್ತಿದೆ ಎನ್ನುವುದಾಗಿ ಅಧಿಕಾರಿಗಳು ಸಮಜಾಯಿಷಿ ಕೊಡುತ್ತಾರೆ.