ಗಂಗೊಳ್ಳಿ: ಎಲ್ಲ ಪಂಚಾಯತ್‌ಗಳಿಗೂ ಸರಕಾರದಿಂದ ಸಾಕಷ್ಟು ಅನುದಾನ ಬರುತ್ತಿದ್ದು, ಅದನ್ನು ಸಮರ್ಪಕವಾಗಿ ಬಳಸಿ. ಸಂಸದರು, ಶಾಸಕರ ನಿಧಿಯಿಂದ ಬರುವ ಅನುದಾನವನ್ನು ಕೂಡ ಸರಿಯಾದ ರೀತಿಯಲ್ಲಿ ಹಂಚಿಕೆ ಮಾಡಿ ವಿನಿಯೋಗಪಡಿಸಿಕೊಳ್ಳಬೇಕು ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಅವರು ಮಂಗಳವಾರ ಗಂಗೊಳ್ಳಿ ಗ್ರಾ.ಪಂ. ಕಚೇರಿಗೆ ಭೇಟಿ ನೀಡಿ, ಪಂಚಾಯತ್ ವತಿಯಿಂದ ಅಭಿನಂದನೆ ಹಾಗೂ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಮಾತನಾಡಿದರು.
ಈ ಗ್ರಾಮದ ಸಮಗ್ರ ಅಭಿವೃದ್ಧಿಗೆ ಶಾಸಕರೊಂದಿಗೆ ಎಲ್ಲ ರೀತಿಯಿಂದಲೂ ಸಹಕಾರ ನೀಡುತ್ತೇನೆ. ಪಂಚಾಯತ್ ಅಧಿಕಾರಿಗಳು ಕೂಡ ಈ ಬಗ್ಗೆ ಏನೆಲ್ಲ ಅಭಿವೃದ್ಧಿ ಆಗಬೇಕು ಎನ್ನುವ ಕುರಿತು ಮನವಿ ಸಲ್ಲಿಸಿದರೆ ಈ ಬಗ್ಗೆ ಆದ್ಯತೆ ಮೇರೆಗೆ ಗಮನಹರಿಸಲಾಗುವುದು ಎಂದರು.
ಇದೇ ವೇಳೆ ಸಂಸದರು, ಶಾಸಕರು ಗ್ರಾ.ಪಂ.ನ ಕಚೇರಿಗೆ ಬಂದು ಕುಳಿತಿದ್ದರೂ, ಪಿಡಿಒ ಹಾಗೂ ಕಾರ್ಯದರ್ಶಿ ಅಲ್ಲಿದ್ದುದನ್ನು ನೋಡಿ ಬಿ.ವೈ. ರಾಘವೇಂದ್ರ ಅವರು ಗರಂ ಆದ ಪ್ರಸಂಗ ಕೂಡ ನಡೆಯಿತು. ಇದಲ್ಲದೆ ದೊಡ್ಡಹಿತ್ಲು ತೋಡಿನಲ್ಲಿ ತುಂಬಿರುವ ತ್ಯಾಜ್ಯ ತೆರವಿಗೆ ಸ್ಪಂದಿಸದಿರುವ ಬಗ್ಗೆ ಪಂಚಾಯತ್ ಅಧಿಕಾರಿಗಳನ್ನು ಸಂಸದರು ತರಾಟೆಗೆ ತೆಗೆದುಕೊಂಡರು.
3ನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ಬಿ.ವೈ. ರಾಘವೇಂದ್ರ ಅವರನ್ನು ಪಂಚಾಯತ್ ವತಿಯಿಂದ ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.
ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಪಿಡಿಒ ಚಂದ್ರಶೇಖರ್, ಕಾರ್ಯದರ್ಶಿ ಮಾಧವ, ಉಪಾಧ್ಯಕ್ಷರು, ಸದಸ್ಯರು, ಬಿಜೆಪಿ ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು ಮತ್ತಿತರರು ಉಪಸ್ಥಿತರಿದ್ದರು.