Advertisement

ಗಂಗೊಳ್ಳಿ: ಕೋಡಿ ಬ್ರೇಕ್‌ವಾಟರ್‌ ಬಳಿಕ ಗಂಗೊಳ್ಳಿ ಸರದಿ

05:40 PM Jul 01, 2024 | Team Udayavani |

ಗಂಗೊಳ್ಳಿ: ಕುಂದಾಪುರದ ಕೋಡಿ ಬ್ರೇಕ್‌ ವಾಟರ್‌ ಕಾಮಗಾರಿ ಅಪಾಯದಲ್ಲಿ ಇದ್ದ ಸುದ್ದಿ ಬಹಿರಂಗವಾಗುತ್ತಲೇ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಅಳಿವೆಯಲ್ಲಿ ನಿರ್ಮಿಸಲಾಗಿರುವ ಬ್ರೇಕ್‌ ವಾಟರ್‌ ತಡೆಗೋಡೆ ಕೂಡ ಅಪಾಯದಲ್ಲಿದೆ. ಕಡಲ ಅಲೆಯ ಅಬ್ಬರಕ್ಕೆ ಬ್ರೇಕ್‌ ವಾಟರ್‌ ತಡೆಗೋಡೆ ಕುಸಿಯುವ ಸಾಧ್ಯತೆ ದಟ್ಟವಾಗಿದೆ. ಬ್ರೇಕ್‌ ವಾಟರ್‌ ತಡೆಗೋಡೆಯ ಬುಡದಲ್ಲಿದ್ದ ಕಲ್ಲುಗಳು, ವಿಶಿಷ್ಟ ವಿನ್ಯಾಸದ ಕಾಂಕ್ರಿಟ್‌ ಸ್ಲಾಬ್‌ಗಳು ಜಾರುತ್ತಿವೆ.

Advertisement

102 ಕೋ.ರೂ. ವೆಚ್ಚ
2016ರಲ್ಲಿ ಗಂಗೊಳ್ಳಿ-ಕೋಡಿ ಅಳಿವೆ ಪ್ರದೇಶದಲ್ಲಿ 102 ಕೋಟಿ ರೂ. ವೆಚ್ಚದ ಬ್ರೇಕ್‌ ವಾಟರ್‌ ನಿರ್ಮಾಣ ಆರಂಭಗೊಂಡು ಗಂಗೊಳ್ಳಿ ಭಾಗದಿಂದ 750 ಮೀ. ಪಶ್ಚಿಮಕ್ಕೆ ಸಮುದ್ರದಲ್ಲಿ ಬ್ರೇಕ್‌ ವಾಟರ್‌ ಕಾಮಗಾರಿ ನಡೆದಿತ್ತು.

ಕುಸಿತ
ಪ್ರತೀ ವರ್ಷ ಮಳೆಗಾಲದಲ್ಲಿ ಅಲೆಗಳ ಅಬ್ಬರಕ್ಕೆ ನಲುಗಿ ಬ್ರೇಕ್‌ ವಾಟರ್‌ ತಡೆಗೋಡೆ ಕುಸಿಯಲಾರಂಭಿಸಿದೆ. ದಿನೇ ದಿನೇ ಹೆಚ್ಚುತ್ತಿರುವ ಅಲೆಗಳ ಅಬ್ಬರಕ್ಕೆ ಕಲ್ಲುಗಳು ಕಡಲಿಗೆ ಜಾರುತ್ತಿದ್ದು, ತಡೆಗೋಡೆಯಲ್ಲಿ ಬಿರುಕು ಮೂಡಿದೆ. ತಡೆಗೋಡೆಯ ಕಲ್ಲುಗಳು ಜಾರುತ್ತಿರುವುದರಿಂದ ತಡೆಗೋಡೆ ಮೇಲೆ ನಿರ್ಮಿಸಲಾಗಿರುವ ಕಾಂಕ್ರೀಟ್‌ ರಸ್ತೆ ಮತ್ತು ತಡೆಗೋಡೆ ನಡುವೆ ಕಂದಕ ನಿರ್ಮಾಣವಾಗಿದೆ. ಸಂಭವನೀಯ ಅಪಾಯ ತಡೆಯುವ ನಿಟ್ಟಿನಲ್ಲಿ ಸಂಬಂಧಿತ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂಬ ಸ್ಥಳೀಯರು ಆಗ್ರಹಿಸಿದ್ದಾರೆ.

ಹಿಂದೆಯೇ ಅಪಾಯ
ಕಳೆದ ಕೆಲವು ವರ್ಷಗಳ ಹಿಂದೆ ಕಡಲಿನ ಅಲೆಯ ಅಬ್ಬರಕ್ಕೆ ತಡೆಗೋಡೆ ಅಪಾಯಕ್ಕೆ ಸಿಲುಕಿತ್ತು. ಗೋಡೆ ರಕ್ಷಣೆಗೆಂದು ಹಾಕಿರುವ ಟೆಟ್ರಾಪಾಡ್‌, ಶಿಲೆಯ ಕಲ್ಲುಗಳು ಜಾರಿದ್ದವು. ಸ್ಥಳೀಯರು ಈ ವಿಚಾರವಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಆದಷ್ಟು ಬೇಗ ತಡೆಗೋಡೆ ದುರಸ್ತಿಪಡಿಸುವಂತೆ ಮನವಿ ಮಾಡಿದ್ದರು. ಆದರೆ ಈವರೆಗೆ ಯಾವುದೇ
ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಸ್ಥಳೀಯ ಮೀನುಗಾರರಿಂದ ಕೇಳಿ ಬಂದಿದೆ.

ಈಗಲೂ ಅಪಾಯ
ಕಳೆದ ಕೆಲವು ದಿನಗಳಿಂದ ಕಡಲ ಅಲೆಗಳ ಅಬ್ಬರ ತೀವ್ರಗೊಂಡಿದ್ದು, ಸೀವಾಕ್‌ ತಡೆಗೋಡೆ ಅಪಾಯ ಎದುರಿಸುತ್ತಿದೆ. ಕಲ್ಲುಗಳು ಒಂದೊಂದಾಗಿ ಕಡಲಿಗೆ ಸೇರುತ್ತಿದ್ದರೂ ಯಾವುದೇ ಕ್ರಮ ವಹಿಸದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಅನೈತಿಕ ಚಟುವಟಿಕೆ
ಗಂಗೊಳ್ಳಿ ಸೀವಾಕ್‌ನಲ್ಲಿ ಅನೈತಿಕ ಚಟುವಟಿಕೆಗಳು, ಮದ್ಯಪಾನಾದಿ ಗೋಷ್ಠಿಗಳು, ಗಾಂಜಾದಂತಹ ಅಮಲು ಸೇವನೆ, ಜೂಜಿನಂತಹ ಅಡ್ಡೆಗಳು ನಡೆಸಲ್ಪಡುತ್ತವೆ ಹಾಗೂ ಗೋ ಕಳ್ಳತನ ಮತ್ತು ಮೀನುಗಾರಿಕೆ ಸಲಕರಣೆಗಳ ಕಳ್ಳತನ ನಡೆಯುತ್ತಿದೆ ಎನ್ನುವ ಸಾರ್ವಜನಿಕ ದೂರಿನ ಅನ್ವಯ ಮೀನುಗಾರಿಕೆ ಬಂದರಿನ ಭದ್ರತೆಯ ದೃಷ್ಟಿಯಿಂದ ಸ್ಥಳೀಯ ಮೀನುಗಾರ ಸಂಘಟನೆಗಳ ಮೂಲಕ ಹಾಕಿದ ಸಿಸಿ ಕೆಮೆರಾಗಳು ದಿನದ 24 ತಾಸು ಕಣ್ಗಾವಲಿನಲ್ಲಿ ಇರುತ್ತವೆ. ಮಳೆಗಾಲದಲ್ಲಿ ಸೀವಾಕ್‌ ಮೇಲೆ ಹೋಗುವವರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಅಲೆಗಳ ಹೊಡೆತದಿಂದ ಕಲ್ಲುಗಳು ಜಾರಿದ್ದು ಕಲ್ಲುಗಳ ಮತ್ತು ಟೆಟ್ರಾಪಾಡ್‌ಗಳ ಮೇಲೆ ನಿಲ್ಲಬಾರದು ಎನ್ನುತ್ತಾರೆ ಸ್ಥಳೀಯ ಮೀನುಗಾರ ಮಂಜುನಾಥ ಖಾರ್ವಿ.

ಈಡೇರದ ಬೇಡಿಕೆ
ಬ್ರೇಕ್‌ ವಾಟರ್‌ ತಡೆಗೋಡೆಯನ್ನೇ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಸೀವಾಕ್‌ ಆಗಿ ಪರಿವರ್ತಿಸಬೇಕೆಂಬ ಬೇಡಿಕೆ ಇದ್ದರೂ, ಈವರೆಗೆ ಸೀವಾಕ್‌ ನಿರ್ಮಾಣ ಬೇಡಿಕೆಗೆ ಮನ್ನಣೆ ದೊರೆತಿಲ್ಲ. ಬ್ರೇಕ್‌ ವಾಟರ್‌ ತಡೆಗೋಡೆ ಮೇಲೆ ಕಾಂಕ್ರೀಟ್‌ ರಸ್ತೆಯನ್ನು ನಿರ್ಮಿಸಲಾಗಿದ್ದು, ವಾರಾಂತ್ಯದಲ್ಲಿ ಮಕ್ಕಳು, ಮಹಿಳೆಯರು ಎಂದು ಸಾವಿರರಾರು ಪ್ರವಾಸಿಗರು ಆಗಮಿಸಿ ನದಿ ಮತ್ತು ಸಮುದ್ರದ ಸಂಗಮ ಸ್ಥಳದ ಆಸ್ವಾದವನ್ನು ಸವಿಯುತ್ತಿದ್ದಾರೆ. ಅಂದಾಜು 1 ಕಿ.ಮೀ. ಉದ್ದದ ಬ್ರೇಕ್‌ ವಾಟರ್‌
ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದು.

ಅಪಾಯ ತಡೆಗಟ್ಟಬೇಕು
ಗಂಗೊಳ್ಳಿ ಬಂದರಿನ ಬ್ರೇಕ್‌ ವಾಟರ್‌ ತಡೆಗೋಡೆ ಅಪಾಯ ಎದುರಿಸುತ್ತಿದೆ. ಸಮುದ್ರದ ಅಲೆಯ ಹೊಡೆತಕ್ಕೆ ಕಾಂಕ್ರಿಟ್‌ ಸ್ಲಾಬ್‌ಗಳು, ಕಲ್ಲುಗಳು ಜಾರುತ್ತಿವೆ. ತಡೆಗೋಡೆಯಲ್ಲಿ ಬಿರುಕು ಮೂಡಿದೆ. ಸಂಭವನೀಯ ಅಪಾಯ ತಡೆಯುವ ನಿಟ್ಟಿನಲ್ಲಿ ಸಂಬಂಧಿತ ಇಲಾಖೆ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು.
*ರಾಮಪ್ಪ ಖಾರ್ವಿ, ಮೀನುಗಾರ ಮುಖಂಡ, ಗಂಗೊಳ್ಳಿ

ಪತ್ರ ಬರೆಯಲಾಗಿದೆ
ಗಂಗೊಳ್ಳಿ ಬ್ರೇಕ್‌ ವಾಟರ್‌ ತಡೆಗೋಡೆ ಕುಸಿತ ಹಾಗೂ ಬಿರುಕು ಬಿಟ್ಟಿರುವ ಬಗ್ಗೆ ಸಿಡಬ್ಲ್ಯುಪಿಆರ್‌ ಎಸ್‌ ಅವರೊಂದಿಗೆ ಮಾತುಕತೆ ನಡೆಸಿ ವರದಿ ಪಡೆದು ತಡೆಗೋಡೆ ದುರಸ್ತಿ ಬಗ್ಗೆ ಕ್ರಮಕೈಗೊಳ್ಳುವ ಸಂಬಂಧ ಮೀನುಗಾರಿಕೆ ಇಲಾಖೆ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಈವರೆಗೆ ಮಾಹಿತಿ ಬಂದಿಲ್ಲ. ಇದಕ್ಕೆ ಮೀನುಗಾರಿಕೆ ಇಲಾಖೆ ಅನುದಾನ ಒದಗಿಸಬೇಕಿದೆ.
*ಶೋಭಾ ಕೆ., ಸಹಾಯಕ
ಕಾರ್ಯನಿರ್ವಾಹಕ ಎಂಜಿನಿಯರ್‌, ಬಂದರು ಮತ್ತು ಮೀನುಗಾರಿಕೆ ಇಲಾಖೆ, ಉಡುಪಿ

 

Advertisement

Udayavani is now on Telegram. Click here to join our channel and stay updated with the latest news.

Next