Advertisement

Gangolli 13 – 15 ಕೋ.ರೂ. ನಷ್ಟ; ಸಿಎಂ ನಿಧಿಯಿಂದ ಪರಿಹಾರ: ಲಕ್ಷ್ಮೀ ಹೆಬ್ಬಾಳ್ಕರ್‌

11:11 PM Nov 17, 2023 | Team Udayavani |

ಗಂಗೊಳ್ಳಿ: ಅಗ್ನಿ ದುರಂತದಿಂದ 9 ದೊಡ್ಡ ಬೋಟು, 5 ಚಿಕ್ಕಬೋಟು ಹಾನಿಗೀಡಾಗಿ 13ರಿಂದ 15 ಕೋಟಿ ರೂ. ನಷ್ಟ ಸಂಭವಿಸಿರುವುದಾಗಿ ಜಿಲ್ಲಾಡಳಿತ ಅಂದಾಜಿಸಿದೆ. ಈವರೆಗೆ ಇಂತಹ ದುರಂತ ಸಂಭವಿಸದ ಕಾರಣ ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ 15 ದಿನಗಳೊಳಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಒದಗಿಸುವ ಪ್ರಯತ್ನ ಮಾಡುವೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್‌. ಹೆಬ್ಬಾಳ್ಕರ್‌ ಹೇಳಿದರು.

Advertisement

ಅವರು ಇಲ್ಲಿನ ಮ್ಯಾಂಗನೀಸ್‌ ವಾರ್ಫ್‌ ಬಂದರಿನಲ್ಲಿ ಸೋಮವಾರ ಅಗ್ನಿ ದುರಂತ ಸಂಭವಿಸಿದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಮಾಧ್ಯಮಗಳ ಜತೆ ಮಾತನಾಡಿದರು.

ಸಂತ್ರಸ್ತರ ಜತೆ ಸರಕಾರ ಇದೆ. ಈ ದುರ್ಘ‌ಟನೆಗೆ ಕಾರಣವೇನು ಎಂಬುದು ಇನ್ನೂ ಬೆಳಕಿಗೆ ಬಂದಿಲ್ಲ. ಇದು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಂದರಿನಲ್ಲಿ ಜನರ ಬೇಡಿಕೆಯಂತೆ ಅಗ್ನಿ ಶಾಮಕ ದಳ, ಪಂಪ್‌ಹೌಸ್‌ ಸ್ಥಾಪನೆ ಮಾಡಲಾಗುವುದು ಎಂದರು.

ಸೇತುವೆ
ಮೀನುಗಾರಿಕೆ ಜೆಟ್ಟಿ ಕುಸಿತ ಪ್ರಕರಣ ಈಗಷ್ಟೇ ಗಮನಕ್ಕೆ ಬಂದಿದ್ದು ಮೀನುಗಾರಿಕೆ ಇಲಾಖೆ ಜತೆ ಮಾತುಕತೆ ನಡೆಸುತ್ತೇನೆ. ಕುಂದಾಪುರ – ಬೈಂದೂರು ಸೇತುವೆ ಕುರಿತು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಮಾಜಿ ಶಾಸಕ ಗೋಪಾಲ ಪೂಜಾರಿ ಪೂರಕ ಮಾಹಿತಿ ನೀಡಿ, ಸೇತುವೆಗೆ 270ರಿಂದ 300 ಕೋ.ರೂ.ಗಳ ಅಗತ್ಯವಿದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದು ಸಿಆರ್‌ಎಫ್‌ ಅಥವಾ ಬೇರೆ ಅನುದಾನದಿಂದ ನಿರ್ಮಿಸಲಾಗುವುದು ಎಂದು ವಿವರಿಸಿದರು.

Advertisement

ಸಾಂತ್ವನ
ಹೊತ್ತಿ ಉರಿದ ಬೋಟ್‌ಗಳ ಅವಶೇಷಗಳನ್ನು ವೀಕ್ಷಿಸಿದ ಸಚಿವರು, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಮೀನುಗಾರರೊಂದಿಗೆ ಚರ್ಚೆ ನಡೆಸಿದರು. ಮೀನುಗಾರರು ಹಾಗೂ ಬೋಟ್‌ಗಳ ಮಾಲಕರಿಗೆ ಸಾಂತ್ವನ ಹೇಳಿದರು.

ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಕೆ. ಅರುಣ್‌, ಜಿ.ಪಂ. ಸಿಇಒ ಪ್ರಸನ್ನ ಎಚ್‌., ಎಸಿ ರಶ್ಮೀ ಎಸ್‌.ಆರ್‌., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ, ಮೀನುಗಾರಿಕೆ ಇಲಾಖೆ ಜಂಟಿನಿರ್ದೇಶಕ ವಿವೇಕ್‌ ಆರ್‌., ಉಪನಿರ್ದೇಶಕಿ ಅಂಜನಾದೇವಿ, ಸಹಾಯಕ ನಿರ್ದೇಶಕಿ ಸುಮಲತಾ, ಬಂದರು ಇಲಾಖೆ ಉಪನಿರ್ದೇಶಕ ಸಂಜೀವ ಅರಿಕೇರಿ, ಡಿವೈಎಸ್‌ಪಿ ಬೆಳ್ಳಿಯಪ್ಪ ಕೆ.ಯು., ಕಾಂಗ್ರೆಸ್‌ ಮುಖಂಡರಾದ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಕಾರ್ಕಳ, ಪ್ರಸಾದ್‌ ಕಾಂಚನ್‌ ಉಡುಪಿ, ದಿನೇಶ್‌ ಹೆಗ್ಡೆ ಮೊಳಹಳ್ಳಿ, ಪ್ರದೀಪ್‌ ಶೆಟ್ಟಿ ಗುಡಿಬೆಟ್ಟು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next