Advertisement

ಗಂಗೊಳ್ಳಿ : ವಾರದ ಸಂತೆಗಿಲ್ಲ ಸ್ವಂತ ಜಾಗ

11:53 AM Jun 21, 2019 | Team Udayavani |

ಗಂಗೊಳ್ಳಿ, ಜೂ. 20: ಅವಿಭಜಿತ ಕುಂದಾಪುರ ತಾಲೂಕಿನಲ್ಲಿಯೇ ದೊಡ್ಡ ಹಾಗೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಗ್ರಾಮವಾದ ಗಂಗೊಳ್ಳಿಯಲ್ಲಿ ಪ್ರತಿ ಬುಧವಾರ ನಡೆಯುವ ವಾರದ ಸಂತೆಗೆ ಇನ್ನೂ ಕೂಡ ಸ್ವಂತ ಜಾಗವಿಲ್ಲ. ಕಳೆದ 4 -5 ವರ್ಷಗಳಿಂದ ಖಾಸಗಿ ಜಾಗ ವೊಂದರಲ್ಲಿ ವಾರದ ಸಂತೆ ನಡೆಯುತ್ತಿದೆ.

Advertisement

ಗಂಗೊಳ್ಳಿಯ ಮುಖ್ಯ ರಸ್ತೆಯ ಪಕ್ಕ ಅರೆಕಲ್ಲು ಸಮೀಪ ವಾರದ ಸಂತೆ ನಡೆಯುತ್ತಿದೆ. ಮೊದಲಿಗೆ ಇಲ್ಲಿನ ನಗರೇಶ್ವರಿ ದೇವಸ್ಥಾನ ಸಮೀಪದ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ವಾರದ ಸಂತೆ ಸುಮಾರು ಒಂದೂವರೆ ವರ್ಷಗಳ ಕಾಲ ನಡೆಯುತ್ತಿತ್ತು. ಆ ಬಳಿಕ ಇದು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತದೆ ಎನ್ನುವ ಕಾರಣಕ್ಕೆ ಅರೆಕಲ್ಲು ಸಮೀಪ ಖಾಸಗಿ ವ್ಯಕ್ತಿಯೊಬ್ಬರ ಜಾಗವೊಂದರಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ವಾರದ ಸಂತೆ ನಡೆಯುತ್ತಿದೆ.

ಇಷ್ಟು ವರ್ಷಗಳಿಂದ ವಾರದ ಸಂತೆ ನಡೆಯುತ್ತಿದ್ದರೂ, ಇಲ್ಲಿನ ಪಂಚಾಯತ್‌ ಆಗಲಿ ಅಥವಾ ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಂಘವಾಗಲಿ ಗಂಗೊಳ್ಳಿಯಲ್ಲಿ ಸಂತೆ ನಡೆಸಲು ಸ್ವಂತ ಜಾಗವನ್ನು ಗುರುತಿಸಿಲ್ಲ. ಸುಸಜ್ಜಿತ ಮಾರುಕಟ್ಟೆಗೆ ಬೇಕಾದ ಕಟ್ಟಡವಿಲ್ಲ. ಇಷ್ಟು ವರ್ಷಗಳಿಂದ ಇಲ್ಲಿ ಸಂತೆ ನಡೆಯುತ್ತಿದ್ದರೂ ಸೂಕ್ತವಾದ ಸರಕಾರಿ ಜಾಗವೊಂದನ್ನು ಗುರಿತಿಸಲು ಈವರೆಗೆ ಸಂಬಂಧಪಟ್ಟವರು ಯಾರೂ ಮುಂದಾಗಿಲ್ಲ.

ಸೂಕ್ತ ಸರಕಾರಿ ಜಾಗವಿಲ್ಲ:

ಇಲ್ಲಿ ಪ್ರತಿ ವಾರ ನಡೆಯುವ ಸಂತೆಗೆ ಸೂಕ್ತ ಜಾಗವನ್ನು ಒದಗಿಸಿಕೊಡಬೇಕು ಎನ್ನುವ ಯೋಜನೆಯಿದ್ದರೂ ಪಂಚಾಯತ್‌ ವ್ಯಾಪ್ತಿಯಲ್ಲಿ ಎಲ್ಲಿಯೂ ಸೂಕ್ತವಾದ ಸರಕಾರಿ ಜಾಗವಿಲ್ಲ. ರಥಬೀದಿಯಲ್ಲಿ ನಡೆಸುವುದು ಬೇಡ ಎಂದು ಸದಸ್ಯರೇ ಈ ಹಿಂದೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಿಂದಿನ ಗ್ರಾಮಸಭೆಯಲ್ಲಿಯೂ ಈ ಬಗ್ಗೆ ಚರ್ಚೆಯಾಗಿದ್ದು, ಈಗ ಸಂತೆ ನಡೆಯುವ ಜಾಗದವರೇ ವ್ಯಾಪಾರಿಗಳಿಂದ ಇಂತಿಷ್ಟು ಬಾಡಿಗೆ ರೂಪದಲ್ಲಿ ಸಂಗ್ರಹಿಸಿ ಪಂಚಾಯತ್‌ಗೆ ತಿಂಗಳಿಗೆ 2 ಸಾವಿರ ರೂ. ನೀಡುತ್ತಾರೆ. ಅದನ್ನು ಇನ್ನು 4 ಸಾವಿರ ರೂ. ಹೆಚ್ಚಿಸಿ ನಿರ್ಣಯ ಮಾಡಲಾಗಿದೆ. – ಚಂದ್ರಶೇಖರ್‌,ಪಿಡಿಒ ಗಂಗೊಳ್ಳಿ ಗ್ರಾ.ಪಂ.
ಕೆಸರಿನಲ್ಲೇ ವ್ಯಾಪಾರ:

ಮಳೆಗಾಲದಲ್ಲಿ ಅಂತೂ ಈಗ ನಡೆಯುತ್ತಿರುವ ಜಾಗದಲ್ಲಿ ತರಕಾರಿ, ಹಣ್ಣು, ಹೂವು, ದಿನಸಿ ವಸ್ತುಗಳನ್ನು ಕೆಸರಿನಲ್ಲೇ ಇಟ್ಟುಕೊಂಡು ಮಾರಾಟ ಮಾಡಬೇಕಾದ ಪರಿಸ್ಥಿತಿಯಿದೆ. ಸಂತೆಯ ಈ ದುಸ್ಥಿತಿಯಿಂದಾಗಿ ಮಳೆ ಬಂದರೆ ಖರೀದಿಗೆ ಗ್ರಾಹಕರು ಕೂಡ ಬರುವುದಿಲ್ಲ. ಸಂಬಂಧಪಟ್ಟವರು ವಾರದ ಸಂತೆಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟರೆ ಅನುಕೂಲವಾಗುತ್ತದೆ ಎನ್ನುವುದು ಇಲ್ಲಿಗೆ ಮಾರಾಟ ಮಾಡಲು ಬಂದ ವ್ಯಾಪಾರಿಯೊಬ್ಬರ ಅಭಿಪ್ರಾಯ.

 

.ವಿಶೇಷ ವರದಿ

Advertisement
Advertisement

Udayavani is now on Telegram. Click here to join our channel and stay updated with the latest news.

Next