Advertisement

ಗಂಗೊಳ್ಳಿ : ಮತ್ತಷ್ಟು ಕುಸಿಯುತ್ತಿದೆ ಜೆಟ್ಟಿಯ ಸ್ಲ್ಯಾಬ್‌

11:42 PM Nov 09, 2019 | Team Udayavani |

ಗಂಗೊಳ್ಳಿ: ಇಲ್ಲಿನ ಮೀನುಗಾರಿಕಾ ಬಂದರಿನ ಜೆಟ್ಟಿಯ ದಕ್ಷಿಣ ದಿಕ್ಕಿನ ಎರಡನೇ ಹರಾಜು ಕೇಂದ್ರದ ಬಳಿಯ ಸ್ಲ್ಯಾಬ್‌ ಕುಸಿದು ಬಿದ್ದು, ವರ್ಷ ಕಳೆದರೂ, ಇನ್ನೂ ದುರಸ್ತಿಗೆ ಮಾತ್ರ ಕಾಲ ಕೂಡಿ ಬಂದಿಲ್ಲ. ಈಗ ಜೆಟ್ಟಿಯ ಅಲ್ಲಲ್ಲಿ ಸ್ಲಾéಬ್‌ ಮತ್ತಷ್ಟು ಕುಸಿಯುತ್ತಿದೆ.

Advertisement

ಎರಡನೇ ಹರಾಜು ಪ್ರಾಂಗಣದ ಸ್ಲ್ಯಾಬ್‌ ಕಳೆದ ವರ್ಷ ಕುಸಿಯಲಾರಂಭಿಸಿದ್ದು, ಇತ್ತೀಚಿಗೆ ಕೆಲ ತಿಂಗಳಿನಿಂದ ನಿರಂತರವಾಗಿ ಕುಸಿಯುತ್ತಿದೆ. ಜೆಟ್ಟಿಗೆ ತಾಗಿಕೊಂಡಿರುವ ಹರಾಜು ಪ್ರಾಂಗಣದ ಪಿಲ್ಲರ್‌ ಕುಸಿಯುತ್ತಿದ್ದು, ಹರಾಜು ಪ್ರಾಂಗಣದ ಮೇಲ್ಛಾವಣಿ ಕುಸಿದು ಬೀಳುವ ಸ್ಥಿತಿಗೆ ಬಂದು ತಲುಪಿದೆ. ಇದರಿಂದ ಬಂದರಿನ ಸುಮಾರು 200 ಮೀ. ಪ್ರದೇಶದಲ್ಲಿ ಮೀನುಗಾರಿಕಾ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕುಸಿತದ ಭೀತಿಯಲ್ಲಿರುವ 2ನೇ ಹರಾಜು ಪ್ರಾಂಗಣಕ್ಕೆ ಪ್ರವೇಶಿಸದಂತೆ ತಡೆಗೋಡೆ ನಿರ್ಮಿಸಲಾಗಿದೆ. ಇಲ್ಲಿ ಮೀನುಗಾರಿಕಾ ಚಟುವಟಿಕೆ ನಡೆಸದಂತೆ ನಿರ್ಬಂಧ ಹೇರಲಾಗಿದೆ.

ಸುಮಾರು 8.32 ಕೋ.ರೂ. ವೆಚ್ಚದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಂಯುಕ್ತ ಸಹಭಾಗಿತ್ವದೊಂದಿಗೆ ಕಳೆದ ಸುಮಾರು 15 ವರ್ಷಗಳ ಹಿಂದೆ ಸುಮಾರು 400 ಮೀ. ಉದ್ದದ ಮೀನುಗಾರಿಕಾ ಜೆಟ್ಟಿ ನಿರ್ಮಾಣಗೊಂಡಿತ್ತು. ಜೆಟ್ಟಿ ದುರಸ್ತಿಗೆ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತಿದ್ದರೂ ದುರಸ್ತಿ ಕಾರ್ಯ ಮಾತ್ರ ಆರಂಭಿಸಿಲ್ಲ.

ವಿಳಂಬ ಯಾಕೆ?
ಜೆಟ್ಟಿಯನ್ನು ದುರಸ್ತಿಗೊಳಿಸುವ ಬದಲು ಜೆಟ್ಟಿಯನ್ನು ಪುನರ್‌ ನಿರ್ಮಾಣ ಮಾಡಲು ಮುಂದಾಗಿದ್ದು, ಇದಕ್ಕಾಗಿ ಹೆಚ್ಚಿನ ಅನುದಾನ ಬೇಕಿದೆ. ಈಗ ಬಿಡುಗಡೆಯಾಗಿರುವ ಅನುದಾನ ಸಾಕಾಗದ ಕಾರಣ, ಹೆಚ್ಚುವರಿ ಹಣಕ್ಕಾಗಿ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಹೊಸ ವಿನ್ಯಾಸದ ಜೆಟ್ಟಿಯನ್ನು ನಿರ್ಮಿಸುವ ಯೋಜನೆಯನ್ನು ಇಲಾಖೆ ರೂಪಿಸಿದ್ದು, ಸರಕಾರದ ಒಪ್ಪಿಗೆಗಾಗಿ ಕಾಯಲಾಗುತ್ತಿದೆ ಎಂದು ಮೀನುಗಾರಿಕೆ ಮತ್ತು ಬಂದರು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪಿಲ್ಲರ್‌ ಕುಸಿಯುವ ಭೀತಿ
ಜೆಟ್ಟಿಯ ಸ್ಲ್ಯಾಬ್‌ ಕುಸಿದು ಬಿದ್ದು ವರ್ಷವೇ ಕಳೆದರೂ ದುರಸ್ತಿಗೆ ಮೀನಾಮೇಷ ಎಣಿಸುತ್ತಿರುವ ಇಲಾಖೆಯ ಕ್ರಮ ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಎರಡನೇ ಹರಾಜು ಪ್ರಾಂಗಣದ ಜೆಟ್ಟಿ ಸ್ಲ್ಯಾಬ್‌ ಸಂಪೂರ್ಣವಾಗಿ ಕುಸಿದಿದ್ದು, ಪ್ರಾಂಗಣದ ಪಿಲ್ಲರ್‌ ಕುಸಿದು ಬೀಳುವ ಹಂತದಲ್ಲಿದೆ. ಜೆಟ್ಟಿಯ ಸುರಕ್ಷತೆ ಬಗ್ಗೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಿ ಮೀನುಗಾರರಿಗೆ ರಕ್ಷಣೆ ಒದಗಿಸಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ.

Advertisement

ನಮ್ಮ ಕಷ್ಟ ಕೇಳುವವರೇ ಇಲ್ಲ
ಹಲವು ಸಮಯದಿಂದ ಹೊಸದಾಗಿ ವರದಿ ತಯಾರಿಸಿ, ಪ್ರಸ್ತಾವನೆ ಕಳುಹಿಸಿದ್ದಾರೆ ಎಂದು ಹೇಳುತ್ತಾರೆ. ಮೀನುಗಾರರನ್ನು ಭೇಟಿಯಾಗಿ ಎರಡೆರಡು ಸಲ ಮನವಿ ಕೊಟ್ಟಿದ್ದೇನೆ. ಇಲ್ಲಿಗೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ. ಈಗ ಅಷ್ಟೇನು ಮೀನುಗಾರಿಕೆ ಇಲ್ಲದಿರುವುದರಿಂದ ಬೋಟ್‌ಗಳಿಗೆ ಸಮಸ್ಯೆ ಯಾಗುತ್ತಿಲ್ಲ. ಆದರೆ ಎಲ್ಲ ಬೋಟ್‌ಗಳು ಮೀನುಗಾರಿಕೆಗೆ ತೆರಳಿದ ನಂತರ ಬಂದರಿನಲ್ಲಿ ಜಾಗದ ಕೊರತೆ ಆಗುತ್ತದೆ. ನಮ್ಮ ಸಮಸ್ಯೆ ಯಾರೂ ಕೇಳುವರೇ ಇಲ್ಲದಂತಾಗಿದೆ.
– ರಮೇಶ್‌ ಕುಂದರ್‌, ಪರ್ಸಿನ್‌ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ, ಗಂಗೊಳ್ಳಿ

ಹೊಸ ಪ್ರಸ್ತಾವನೆ ಸಲ್ಲಿಕೆ
ಈಗಾಗಲೇ ಗಂಗೊಳ್ಳಿಯ ಜೆಟ್ಟಿಯ ಎರಡನೇ ಹರಾಜು ಪ್ರಾಂಗಣವನ್ನು ಹೊಸದಾಗಿ ಪುನರ್‌ ನಿರ್ಮಾಣ ಮಾಡಲು 12.5 ಕೋ.ರೂ. ವೆಚ್ಚದ ಕರಡು ತಯಾರಿಸಿ, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಮೀನುಗಾರಿಕಾ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿಯೂ ಈ ಬಗ್ಗೆ ಪ್ರಸ್ತಾಪಿಸಿದ್ದೇನೆ. ಆದಷ್ಟು ಶೀಘ್ರ ಅನುದಾನ ಮಂಜೂರುಗೊಳಿಸಿ, ಬಂದರು ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು.
-ಬಿ.ಎಂ. ಸುಕುಮಾರ್‌ ಶೆಟ್ಟಿ, ಬೈಂದೂರು ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next