ಗಂಗೊಳ್ಳಿ: ತ್ರಾಸಿಯ ಹೆದ್ದಾರಿಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಬೈಕ್ ಢಿಕ್ಕಿಯಾಗಿ, ಬೈಕ್ ಸವಾರ ಗಂಗೊಳ್ಳಿಯ ನಿವಾಸಿ ಕಾಶಿಫ್ (17) ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ಎ. 1ರಂದು ಬೆಳಗ್ಗೆ 6.20 ರ ಸುಮಾರಿಗೆ ಸಂಭವಿಸಿದೆ.
ಬೆಳಗ್ಗೆ 5.45ರ ಸುಮಾರಿಗೆ ವೆಂಕಟೇಶ್ ಪೈ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಆಟೋ ರಿಕ್ಷಾವನ್ನು ಓವರ್‌ಟೇಕ್ ಮಾಡುವ ವೇಳೆ ಒಮ್ಮೆಲೆ ಎಡಕ್ಕೆ ತಿರುಗಿಸಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ, ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಹಿಂದಿನಿಂದ ಢಿಕ್ಕಿಯಾಗಿದೆ.
ಪರಿಣಾಮ ಬೈಕ್ ಸವಾರ ಕಾಶಿಫ್ ಹಾಗೂ ಸಹಸವಾರ ಮೊಹಮ್ಮದ್ ಫೈಜ್ (15) ಇಬ್ಬರೂ ರಸ್ತೆಗೆ ಬಿದ್ದು ಗಾಯಗೊಂಡಿದ್ದರು. ಇಬ್ಬರನ್ನೂ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಗಂಭೀರ ಗಾಯಗೊಂಡಿದ್ದ ಕಾಶಿಫ್ ಅವರು ಚಿಕಿತ್ಸೆಗೆ ಸ್ಪಂದಿಸದೇ 6.20ರ ಸುಮಾರಿಗೆ ಸಾವನ್ನಪ್ಪಿರುವುದಾಗಿದೆ. ವೆಂಕಟೇಶ್ ಪೈ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ, ಬೆದರಿಕೆ: ದೂರು ದಾಖಲು
ಗಂಗೊಳ್ಳಿ: ಇಲ್ಲಿನ ಬೇಲಿಕೆರೆಯಲ್ಲಿ ಹೋಳಿ ಕುಣಿತದ ವಿಚಾರಕ್ಕೆ ಆರೋಪಿಗಳಾದ ಪ್ರಶಾಂತ್, ಗುರುರಾಜ, ರವಿ, ಮಿಥುನ, ತರುಣ, ಕಿರಣ್, ಮನೋಜ ಹಾಗೂ ಇತರರು ಸೇರಿ ತನಗೆ ಹಾಗೂ ಜತೆಗಿದ್ದ ರೋಶನ್, ಚರಣ್‌ಗೆ ಹಲ್ಲೆಗೈದು, ಜೀವ ಬೆದರಿಕೆ ಹಾಕಿರುವುದಾಗಿ ಅಂಕಿತ್ ಗಂಗೊಳ್ಳಿ ದೂರು ನೀಡಿದ್ದಾರೆ.
ಈ ಘಟನೆಯಲ್ಲಿ ಗಾಯಗೊಂಡ ಅಂಕಿತ್ ಅವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಂಡಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.