Advertisement

ಗಂಗೊಳ್ಳಿ : “ಆಧಾರ್‌’ಗಾಗಿ 25 ಕಿ.ಮೀ. ಅಲೆದಾಟ

09:06 PM Dec 06, 2019 | mahesh |

ಗಂಗೊಳ್ಳಿ: ಇಲ್ಲಿನ ಜನರು ಆಧಾರ್‌ ಕಾರ್ಡ್‌ ನೋಂದಣಿ ಅಥವಾ ತಿದ್ದುಪಡಿ ಮಾಡಿಸಬೇಕಾದರೆ ಸುಮಾರು 25 ಕಿ.ಮೀ. ದೂರದ ವಂಡ್ಸೆಗೆ ಹೋಗಬೇಕು. ಕೆಲ ಕಾಲ ಇಲ್ಲಿನ ಗ್ರಾಪಂ. ಕಚೇರಿಯಲ್ಲಿ ಆರಂಭಿಸಿದ್ದರೂ, ಬಳಿಕ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿದೆ. ಈಗ ಕೆಲ ತಿಂಗಳಿನಿಂದ ಗಂಗೊಳ್ಳಿ ಅಂಚೆ ಕಚೇರಿಯಲ್ಲಿ ಆರಂಭಿಸಿದ್ದರೂ, ಸಿಬಂದಿ ಕೊರತೆಯಿಂದ ಕಾರ್ಯಾಚರಿಸುತ್ತಿಲ್ಲ.

Advertisement

ಗಂಗೊಳ್ಳಿ ಗ್ರಾಮವು ವಂಡ್ಸೆ ಹೋಬಳಿ ವ್ಯಾಪ್ತಿಯಾಗಿದ್ದು, ಅಲ್ಲಿನ ನಾಡಕಚೇರಿಯಲ್ಲಿ ತೆರೆಯಲಾದ ಆಧಾರ್‌ ಕಾರ್ಡ್‌ ನೋಂದಣಿ ಕೇಂದ್ರದಲ್ಲಿ ಇಲ್ಲಿನ ಗ್ರಾಮಸ್ಥರು ನೋಂದಣಿ ಅಥವಾ ತಿದ್ದುಪಡಿಗೆ ಹೋಗಬೇಕು. ಇಲ್ಲದಿದ್ದಲ್ಲಿ ಬೈಂದೂರು, ಕುಂದಾಪುರದ ಅಂಚೆ ಕಚೇರಿಗಳಲ್ಲಿಯೂ ಮಾಡಿಸಬಹುದು.
ಮುಂದಿನ ಮಾರ್ಚ್‌ವರೆಗೂ ಟೋಕನ್‌ ವಂಡ್ಸೆ ಆಧಾರ್‌ ಕೇಂದ್ರಕ್ಕೆ ಗಂಗೊಳ್ಳಿ, ತ್ರಾಸಿ, ಸಹಿತ 39 ಗ್ರಾಮಗಳ ಜನ ಬರುತ್ತಾರೆ. ಪ್ರತಿದಿನ ಇಲ್ಲಿ 50ರಿಂದ 70 ಆಧಾರ್‌ ಕಾರ್ಡ್‌ಗಳ ತಿದ್ದುಪಡಿ ಹಾಗೂ ಹೊಸ ಕಾರ್ಡ್‌ಗಳ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಬಹುದೂರದ ಗಂಗೊಳ್ಳಿ, ಹೊಸಾಡುವಿನಿಂದ ಬರುವ ಗ್ರಾಮಸ್ಥರು ಇಲ್ಲಿ ತಾಸುಗಟ್ಟಲೆ ಕಾಯಬೇಕಾಗಿದೆ. ಕೆಲಸದೊತ್ತಡ ಎಷ್ಟಿದೆಯೆಂದರೆ ಕೆಲವರಿಗೆ ಮುಂದಿನ ವರ್ಷದ ಮಾರ್ಚ್‌ಗೆ ಆಧಾರ್‌ ತಿದ್ದುಪಡಿಗೆ ಬರಲು ಟೋಕನ್‌ ನೀಡಲಾಗಿದೆ.

ಆರೇ ತಿಂಗಳು…!
ಇಲ್ಲಿನ ಗ್ರಾ.ಪಂ. ಕಚೇರಿಯಲ್ಲಿ 2018ರ ಆ.28 ಕ್ಕೆ ಆಧಾರ್‌ ಸೇವೆಯನ್ನು ಆರಂಭಿಸಲಾಗಿತ್ತು. ಆದರೆ ಅದು ಈ ವರ್ಷದ ಫೆ. 11ಕ್ಕೆ ಸ್ಥಗಿತಗೊಂಡಿದೆ. ಇಲ್ಲಿ ಆಧಾರ್‌ ತಿದ್ದುಪಡಿ, ನೋಂದಣಿ ಮಾಡಿಸಿ ಕೊಂಡವರು 450 ಮಂದಿ ಮಾತ್ರ. ಇದು ಇಲ್ಲಿ ಮಾತ್ರವಲ್ಲ ರಾಜ್ಯಾದ್ಯಂತ ಗ್ರಾ.ಪಂ.ಗಳಲ್ಲಿ ತಾಂತ್ರಿಕ ಸಮಸ್ಯೆಯಿಂದ ಕಾರ್ಯಾಚರಿಸುತ್ತಿಲ್ಲ. ಇನ್ನು ಕಳೆದ ತಿಂಗಳು ಉಡುಪಿಯ ಪ್ರಧಾನ ಅಂಚೆ ಕಚೇರಿ ಸಹಯೋಗದಲ್ಲಿ ಇಲ್ಲಿನ ವೀರ ಸಾವರ್ಕರ್‌ ದೇಶ ಪ್ರೇಮಿಗಳ ಬಳಗದ ಆಶ್ರಯದಲ್ಲಿ ಆಧಾರ್‌ ಅದಾಲತ್‌ ಶಿಬಿರವನ್ನು ಮಾಡಲಾಗಿದ್ದು, ಅಲ್ಲಿ 494 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ.

ಆಧಾರ್‌ ಕೇಂದ್ರಕ್ಕೆ ಬೇಡಿಕೆ
ಗಂಗೊಳ್ಳಿ, ಗುಜ್ಜಾಡಿ, ತ್ರಾಸಿ, ಹೊಸಾಡು, ಮರವಂತೆ ಗ್ರಾಮಗಳಿಗೆ ಅನುಕೂಲವಾಗುವಂತೆ ಒಂದು ಆಧಾರ್‌ ಕೇಂದ್ರ ತೆರೆಯುವಂತೆ ಈ ಗ್ರಾಮಗಳ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಸಹಿತ ಅನೇಕ ಗ್ರಾ.ಪಂ.ಗಳಿಂದ ಜಿಲ್ಲಾಡಳಿತಕ್ಕೆ ಮನವಿ ಕೂಡ ಸಲ್ಲಿಸಲಾಗಿದೆ.

ಸಮಸ್ಯೆಯೇನು?
ಅವಿಭಜಿತ ಕುಂದಾಪುರ ತಾಲೂಕಿನ ಕುಂದಾಪುರ ಮುಖ್ಯ ಅಂಚೆ ಕಚೇರಿ, ಬೈಂದೂರು, ವಂಡ್ಸೆ, ಕೋಟೇಶ್ವರ, ತಲ್ಲೂರು, ಗಂಗೊಳ್ಳಿ, ತ್ರಾಸಿ, ಖಂಬದಕೋಣೆ, ಶಿರೂರು, ಕೊಲ್ಲೂರು, ಸಿದ್ದಾಪುರದ ಅಂಚೆ ಕಚೇರಿಗಳಲ್ಲಿ ಆಧಾರ್‌ ಸೇವೆಯನ್ನು ಕೆಲವು ತಿಂಗಳಿನಿಂದ ಆರಂಭಿಸಲಾಗಿದೆ. ಆದರೆ ಇದರಲ್ಲಿ ಕುಂದಾಪುರ, ಬೈಂದೂರು, ವಂಡ್ಸೆ, ಕೋಟೇಶ್ವರದಲ್ಲಿ ಮಾತ್ರ ಸಕ್ರಿಯವಾಗಿದೆ. ಕೊಲ್ಲೂರಿನಲ್ಲಿ ಒಬ್ಬರೇ ಸಿಬಂದಿಯಿರುವುದರಿಂದ ಇನ್ನೂ ಆಧಾರ್‌ ಸೇವೆ ಆರಂಭ ಆಗಿಲ್ಲ. ಇನ್ನುಳಿದ ಗಂಗೊಳ್ಳಿ, ತಲ್ಲೂರು, ತ್ರಾಸಿ, ಖಂಬದಕೋಣೆ, ಶಿರೂರು, ಸಿದ್ದಾಪುರದ ಅಂಚೆ ಕಚೇರಿಗಳು ಬಿ ಕ್ಲಾಸ್‌ (ಇಬ್ಬರು ಸಿಬಂದಿ ಮಾತ್ರ) ಆಗಿದ್ದು, ಅದರಲ್ಲಿ ಒಬ್ಬರನ್ನು ಬೇರೆಡೆಗೆ ನಿಯೋಜಿಸಿದರೆ, ಆಗ ಆಧಾರ್‌ ಕೆಲಸ ಮಾಡುವುದು ಕಷ್ಟ. ಇದರಿಂದ ಕಂಪ್ಯೂಟರ್‌, ಬಯೋಮೆಟ್ರಿಕ್‌ ಕೊಟ್ಟರೂ ಸಿಬಂದಿ ಕೊರತೆಯಿಂದ ಸಮಸ್ಯೆಯಾಗಿದೆ.

Advertisement

ಕಾರಣ ಹೇಳುವುದೇ ಆಯಿತು
ಇಲ್ಲಿನ ಅಂಚೆ ಕಚೇರಿಯಲ್ಲಿ ಕೆಲ ದಿನಗಳಿಂದ ಆಧಾರ್‌ ತಿದ್ದುಪಡಿ ಅಥವಾ ನೋಂದಣಿ ಕಾರ್ಯ ಆಗುತ್ತಿಲ್ಲ. ಅಲ್ಲಿಗೆ ಹೋಗಿ ಕೇಳಿದರೆ ಜನ ಕಳುಹಿಸಿಲ್ಲ, ಯಂತ್ರ ಕಳುಹಿಸಿಲ್ಲ, ನೆಟ್‌ವರ್ಕ್‌ ಸಮಸ್ಯೆ, ಇನ್ನು ನೆಟ್‌ವರ್ಕ್‌ ಬೆಂಗಳೂರಿನಿಂದ ಬರಬೇಕು ಅಂತ ಹೇಳುತ್ತಾರೆ. ಅದು ಯಾವ ರೀತಿ ಅಂತ ಗೊತ್ತಿಲ್ಲ. ದಿನಾ ಕಾರಣ ಹೇಳುವುದೇ ಆಯಿತು. ಇರುವಂತಹ ಸಿಬಂದಿಯಾದರೂ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಡಿಕೊಡಬಹುದು ಅಲ್ವಾ.
– ಶಿವರಾಜ್‌ ಖಾರ್ವಿ, ಗಂಗೊಳ್ಳಿ

ಅಲ್ಲಲ್ಲಿ ಆಧಾರ್‌ ಶಿಬಿರ
ಕೆಲವು ಅಂಚೆ ಕಚೇರಿಗಳಲ್ಲಿ ಆಧಾರ್‌ ಸೇವೆ ಆರಂಭಿಸಿದ್ದರೂ ಅಲ್ಲಿ ಇರುವಂತಹ ಸಿಬಂದಿ ಯನ್ನು ಬೇರೆಡೆಗೆ ನಿಯೋಜಿಸಿದಾಗ ಸಮಸ್ಯೆ ಯಾಗುತ್ತದೆ. ಇರುವಂತಹ ಎಲ್ಲರಿಗೂ ತರಬೇತಿ ಇದ್ದಿರುವುದಿಲ್ಲ. ತರಬೇತಿಗೊಂಡವರು ಬೇರೆಡೆಗೆ ವರ್ಗವಾದರೆ ಸಮಸ್ಯೆಯಾಗುತ್ತದೆ. ಎಲ್ಲರಿಗೂ ತರಬೇತಿ ಕೊಡುವ ಕೆಲಸವೂ ಇಲಾಖೆಯಿಂದ ಆಗುತ್ತಿದೆ. ಆ ಕಾರಣಕ್ಕಾಗಿ ಅಲ್ಲಲ್ಲಿ ಆಧಾರ್‌ ಅದಾಲತ್‌ ಶಿಬಿರಗಳನ್ನು ಆಯೋಜಿಸುತ್ತಿರು ವುದು. ಈ ತಿಂಗಳಲ್ಲಿ ಬೈಂದೂರಿನಲ್ಲಿ ಶಿಬಿರವನ್ನು ಆಯೋಜಿಸಲಾಗಿದ್ದು, ಬೇರೆ ಬೇರೆ ಕಡೆಗಳಲ್ಲಿ ಕೂಡ ಆಯೋಜಿಸಲಾಗುವುದು. ಜನರು ಇದರ ಪ್ರಯೋಜನ ಪಡೆದುಕೊಳ್ಳಬಹುದು.
– ಗಣಪತಿ ಮರ್ಡಿ, ಸಹಾಯಕ ಅಂಚೆ ಅಧೀಕ್ಷಕರು, ಕುಂದಾಪುರ

 ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next