ಗ್ರಾಮೀಣ ಭಾಗದ ರಸ್ತೆಗಳು ಮತ್ತು ಕುಡಿಯುವ ನೀರಿಗೆ ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಇದೇ ವೇಳೆ ಪಂಚಾಯತ್ ಸಂಸ್ಥೆಗಳ ವಿಕೇಂದ್ರೀಕರಣ ಮತ್ತು ಬಲವರ್ಧನೆಗೆ ಪಂಚಾಯತ್‌ರಾಜ್ ಆಯುಕ್ತಾಲಯ ಪ್ರಾರಂಭಿಸುವ ಘೋಷಣೆ ಮಾಡಲಾಗಿದೆ.
ರಾಜ್ಯದಲ್ಲಿ ಚಾಲ್ತಿಯಲ್ಲಿರುವ “ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯು 2020-21ನೇ ಸಾಲಿನಲ್ಲಿ ಮುಕ್ತಾಯಗೊಳ್ಳಲಿದೆ. ಗ್ರಾಮೀಣ ರಸ್ತೆಗಳ ಸುಧಾರಣೆಗಾಗಿ ಹೊಸದಾಗಿ “ಗ್ರಾಮೀಣ ಸುಮಾರ್ಗ ಯೋಜನೆ’ ಜಾರಿಗೆ ತರಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಅದರಂತೆ ಮುಂದಿನ ಐದು ವರ್ಷಗಳಲ್ಲಿ 20 ಸಾವಿರ ಕಿ.ಮೀ. ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು, ಅದಕ್ಕಾಗಿ ಪ್ರಸಕ್ತ ಬಜೆಟ್‌ನಲ್ಲಿ 780 ಕೋಟಿ ರೂ.ಮೀಸಲಿಡಲಾಗಿದೆ.
ಎಲ್ಲಾ ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರನ್ನು ಒಗದಿಸಲು ಕೇಂದ್ರ ಸರ್ಕಾರದ “ಜಲ್ ಜೀವನ್ ಮಿಷನ್’ ಹಾಗೂ ರಾಜ್ಯದ ಸಂಪನ್ಮೂಲ ಗಳನ್ನು ಬಳಸಿಕೊಂಡು ಪ್ರತಿ ಮನೆಗೆ ಕುಡಿಯುವ ನೀರಿನ ಸಂಪರ್ಕ ಮುಂದಿನ ನಾಲ್ಕು ವರ್ಷಗಳಲ್ಲಿ ಕಲ್ಪಿಸಲು “ಮನೆ ಮನೆಗೆ ಗಂಗೆ’ ಎಂಬ ನೂತನ ಯೋಜನೆ ಅನುಷ್ಠಾನ ಗೊಳಿಸಲಾಗುವುದು. 2020-21ನೇ ಸಾಲಿನಲ್ಲಿ 10 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ನೀಡುವ ಗುರಿ ಹೊಂದ ಲಾಗಿದೆ.
ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ಮಹತ್ವಕಾಂಕ್ಷಿ ಯೋಜನೆಯಾದ “ಜಲಧಾರೆ’ಯ ಮೊದಲ ಹಂತದಲ್ಲಿ ಎಐಐಬಿ ನೆರವಿನೊಂದಿಗೆ ವಿಜಯಪುರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಬೃಹತ್ ಕುಡಿಯುವ ನೀರಿನ ಯೋಜನೆಯನ್ನು 700 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
ಸಮಗ್ರ ನೀತಿ: ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ನೀರಿನ ಪೂರೈಕೆಯಲ್ಲಿ ಸಮನ್ವಯ ಸಾಧಿಸಲು ಹಾಗೂ ಶುದ್ಧ ಕುಡಿಯುವ ನೀರನ್ನು ಪೂರೈಸಲು ಸಮಗ್ರ ನೀತಿ ರೂಪಿಸಲಾಗುವುದು. ಸಂಬಂಧಿಸಿದ ಇಲಾಖೆ ಮತ್ತು ಸಂಸ್ಥೆಗಳನ್ನು ಒಂದೇ ಸಚಿವಾಲಯದಡಿ ತರಲು ಉದ್ದೇಶಿಸಲಾಗಿದೆ.
ಪಂಚಾಯತ್‌ರಾಜ್ ಆಯುಕ್ತಾಲಯ: ಪಂಚಾಯತ್‌ರಾಜ್ ಸಂಸ್ಥೆಗಳಿಗೆ ಅಧಿಕಾರವನ್ನು ವಿಕೇಂದ್ರೀಕರಣಗೊಳಿಸುವ ನಿಟ್ಟಿನಲ್ಲಿ ಕರ್ನಾಟಕವು ಇಡೀ ದೇಶಕ್ಕೆ ಮಾದರಿಯಾಗಿದೆ. ಈ ವ್ಯವಸ್ಥೆಯನ್ನು ಮತ್ತಷ್ಟು ವಿಕೇಂದ್ರೀಕರಣಗೊಳಿಸುವ ಮತ್ತು ಬಲಪಡಿಸುವ ಉದ್ದೇಶದಿಂದ 2020-21ನೇ ಸಾಲಿನಲ್ಲಿ ಪಂಚಾಯತ್‌ರಾಜ್ ಆಯುಕ್ತಾಲಯ’ ಪ್ರಾರಂಭಿಸಲಾಗುವುದು ಎಂದು ಬಜೆಟ್‌ಬಲ್ಲಿ ಘೋಷಿಸಲಾಗಿದೆ.