ಗಂಗಾವತಿ: ವಿಶ್ವಪರಂಪರಾ ಪ್ರದೇಶದಲ್ಲಿರುವ ಸ್ಮಾರಕಗಳ ಸುತ್ತಲು ಪಾವಿತ್ರ್ಯತೆ ಕಾಪಾಡಲು ಅಕ್ರಮ ರೆಸಾರ್ಟ್‌ಗಳನ್ನು ಕೂಡಲೇ ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶದನ್ವಯ ಮಂಗಳವಾರ ಬೆಳಗಿನ ಜಾವ 5 ಗಂಟೆಯಿಂದ ರೆಸಾರ್ಟ್‌ಗಳ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಸುಪ್ರೀಂಕೋರ್ಟ್ ಆದೇಶದಂತೆ ಗಡ್ಡಿಯಲ್ಲಿ 28 ಅನಧಿಕೃತ ವಾಣಿಜ್ಯ ಕಟ್ಟಡಗಳು 21 ಮನೆಗಳಿದ್ದು ಸ್ಮಾರಕಗಳ ಸಂರಕ್ಷಣೆ ದೃಷ್ಟಿಯಿಂದ ತಿಂಗಳೊಳಗೆ ಅನಧಿ ಕೃತ ಕಟ್ಟಡ ತೆರವು ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಹಂಪಿ ಅಭಿವೃದ್ಧಿ ಪ್ರಾಧಿಕಾರ ಕೊಪ್ಪಳ ಜಿಲ್ಲಾಡಳಿತ ತೆರವಿಗೂ ಮುಂಚೆ ಗಡ್ಡಿಯಲ್ಲಿರುವ ರೆಸಾರ್ಟ್‌ಗಳಿಗೆ ಸುಪ್ರೀಂಕೋರ್ಟಿನ ಆದೇಶ ರವಾನಿಸಿ ಸ್ವಯಂ ಪ್ರೇರಣೆಯಿಂದ ಮನೆ ಸೇರಿ ಎಲ್ಲ ರೆಸಾರ್ಟ್‌ಗಳನ್ನು ತೆರವು ಮಾಡಿಕೊಳ್ಳಬೇಕೆಂದು ಸೂಚನೆ ನೀಡಿತ್ತು.
2011ರಲ್ಲಿ ರೆಸಾರ್ಟ್ ಮಾಲೀಕರು ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಿಯಮಗಳ ರಚನೆ ಕುರಿತು ಆಕ್ಷೇಪಿಸಿ ಬೆಂಗಳೂರು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಇದೇ ವೇಳೆ ವಿಚಾರಣೆಗೆ ಕೈಗೆತ್ತಿಕೊಂಡು ಸುಪ್ರೀಂಕೋರ್ಟಿನ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಹೈಕೋರ್ಟ್ ಮಾ.2ರಂದು ಪರ ಮತ್ತು ವಿರೋಧ ಅರ್ಜಿದಾರರ ವಾದ ಆಲಿಸಿದ ನಂತರ ಸುಪ್ರೀಂ ನೀಡಿದ್ದ ಆದೇಶ ಎತ್ತಿ ಹಿಡಿದು ರೆಸಾರ್ಟ್ಗಳ ತೆರವಿಗೆ ಪೂರಕ ತೀರ್ಪು ನೀಡಿದ್ದರಿಂದ ಹಂಪಿ ಅಭಿವೃದ್ಧಿ ಪ್ರಾ ಧಿಕಾರ ಕೊಪ್ಪಳ-ಬಳ್ಳಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿ ರೆಸಾರ್ಟ್ ತೆರವು ಕಾರ್ಯಕ್ಕೆ ಸಹಕರಿಸುವಂತೆ ಮನವಿ ಮಾಡಿತು.
ಈ ಮಧ್ಯೆ ಕೊಪ್ಪಳ ಜಿಲ್ಲಾಧಿಕಾರಿ ತೆರವು ಕಾರ್ಯಕ್ಕೆ ತೊಂದರೆಯಾಗದಂತೆ ವಿರೂಪಾಪೂರಗಡ್ಡಿ ಪ್ರದೇಶದಲ್ಲಿ 144 ನಿಷೇಧಾಜ್ಞೆಯನ್ವಯ ಕರ್ಫ್ಯೂ ಹೇರಿ ಯಾರು ಸಹ ತೆರವು ಕಾರ್ಯಕ್ಕೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು. ಮಂಗಳವಾರ ಬೆಳಗಿನ ಜಾವ 5 ಗಂಟೆಗೆ ಕೊಪ್ಪಳ ಜಿಲ್ಲೆಯ ಎಲ್ಲ ತಹಶೀಲ್ದಾರರು-ಇಒಗಳು ಸೇರಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯೊಂದಿಗೆ ಗಡ್ಡಿಗೆ ಆಗಮಿಸಿ ಹಿಟ್ಯಾಚಿ-ಜೆಸಿಬಿ ಮೂಲಕ ತೆರವು ಕಾರ್ಯ ನಡೆಸಿದ್ದಾರೆ. ಮೊದಲಿಗೆ ಶಾಂತಿ ಗೆಸ್ಟ್ ಹೌಸ್ ನಿಂದ ತೆರವು ಕಾರ್ಯ ಆರಂಭಿಸಲಾಗಿದೆ.