Advertisement

Gangavati: ಅಕಾಲಿಕ ಮಳೆಗೆ ನೂರಾರು ಎಕರೆ ಭತ್ತದ ಬೆಳೆ ನಾಶ; ವ್ಯಾಪಕ ನಷ್ಟ

05:56 PM Nov 09, 2023 | Team Udayavani |

ಗಂಗಾವತಿ: ಅಖಂಡ ಗಂಗಾವತಿ ತಾಲೂಕಿನಲ್ಲಿ ಮಂಗಳವಾರ ಮತ್ತು ಬುಧವಾರ ರಾತ್ರಿ ಸುರಿದ ಅಕಾಲಿಕ ಮಳೆ, ಗಾಳಿಗೆ ನೂರಾರು ಎಕರೆಯಲ್ಲಿ ಬೆಳೆಯಲಾಗಿದ್ದ ಭತ್ತದ ಬೆಳೆ ನೆಲಕ್ಕುರುಳಿ ರೈತರಿಗೆ ಅಪಾರ ಪ್ರಮಾಣದ ನಷ್ಟವುಂಟಾಗಿದೆ.

Advertisement

ಮರಳಿ ಹೋಬಳಿಯ ಢಣಾಪೂರ, ಮರಳಿ, ನರಸಾಪೂರ,ಶ್ರೀರಾಮನಗರ, ಹೊಸ್ಕೇರಿ, ಮತ್ತು ಜಂಗಮರ ಕಲ್ಗುಡಿ ಗ್ರಾಮಗಳ ಸುಮಾರು 500 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಭತ್ತದ ಬೆಳೆ ಇನ್ನೂ ಎರಡು-ಮೂರು ವಾರಗಳಲ್ಲಿ ಕಟಾವಿಗೆ ಬರುತ್ತಿದ್ದು ಮಳೆಯಿಂದ ಸಂಪೂರ್ಣ ನಾಶವಾಗಿದೆ.ಉಳಿದಂತೆ ಕಟಾವಿಗೆ ಬಂದಿದ್ದ ಭತ್ತ ನೆಲಕ್ಕುರಳಿದ್ದು ಮೇಲಕ್ಕೆತ್ತಿ ಕಟ್ಟುವ ಕಾರ್ಯ ಮಾಡಲಾಗುತ್ತಿದೆ.

ಹೇರೂರು, ಮರಳಿ ಭಾಗದಲ್ಲಿ ರೈತರು ಹೆಚ್ಚಾಗಿ ಆರ್‌ಎನ್‌ಆರ್ ಭತ್ತವನ್ನು ನಾಟಿ ಮಾಡಲಾಗಿತ್ತು. ಈ ಬೆಳೆ ಸ್ವಲ್ಪ ಮಟ್ಟಿಗೆ ಎತ್ತರಕ್ಕೆ ಬೆಳೆದು ಅಧಿಕ ಇಳುವರಿ ಕೊಡುತ್ತದೆ. ಅಕಾಲಿಕ ಮಳೆಯಾಗಿದ್ದರಿಂದ ಭತ್ತ ಸಂಪೂರ್ಣ ನೆಲಕ್ಕೆ ಉರುಳಿದೆ. ಇದರಿಂದ ರೈತರ ಸಂಕಷ್ಟಕ್ಕೀಡಾಗಿದ್ದಾರೆ.

ಮುಂಗಾರು ಮಳೆ ತಡವಾಗಿ ಆರಂಭವಾಗಿದ್ದ ಭತ್ತದ ನಾಟಿ ಒಂದುವರೆ ತಿಂಗಳು ತಡವಾಗಿ ಮಾಡಲಾಗಿದ್ದು ತುಂಗಭದ್ರಾ ಡ್ಯಾಂ ನಲ್ಲಿ ಒಂದು ಬೆಳೆಗಾಗುಷ್ಟು ನೀರು ಇದ್ದು ಬೇಸಿಗೆ ಹಂಗಾಮಿನಲ್ಲಿ ನೀರು ಪೂರೈಕೆ ಮಾಡಲು ಆಗುವುದಿಲ್ಲ ಎಂದು ಇತ್ತೀಚೆಗೆ ಜರುಗಿದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಮಧ್ಯೆ ಸುರಿದ ಅಕಾಲಿಕ ಮಳೆಯಿಂದ ರೈತರು ಕಂಗಾಲಾಗಿದ್ದಾರೆ.

ಅಕಾಲಿಕ ಮಳೆಯಿಂದಾಗಿರುವ ಹಾನಿಯನ್ನು ಕುರಿತು ಕೂಡಲೇ ಸರ್ವೇ ನಡೆಸಿ ಸರಕಾರಕ್ಕೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್ ತಂಗಡಗಿ ಸೂಚನೆಯ ಹಿನ್ನೆಲೆಯಲ್ಲಿ ಗಂಗಾವತಿ, ಕಾರಟಗಿ ಹಾಗೂ ಕನಕಗಿರಿ ತಹಸೀಲ್ದಾರರು ಮತ್ತು ಸಹಾಯಕ ಕೃಷಿ ನಿರ್ದೇಶಕರು ಹಾನಿಗೊಳಗಾದ ರೈತರ ಗದ್ದೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.

Advertisement

ಮಳೆ,ಗಾಳಿಯ ಪರಿಣಾಮ ಮರಳಿ ಹಾಗೂ ಹೇರೂರು ಹೋಬಳಿಯ ಗ್ರಾಮಗಳ ರೈತರ ಗದ್ದೆ ನೆಲಕ್ಕುರುಳಿದ್ದು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಡ್ಯಾಂ ನಲ್ಲಿ ನೀರಿನ ಕೊರತೆ ಹಿನ್ನೆಲೆಯಲ್ಲಿ ಈ ಭಾರಿ ಒಂದೇ ಬೆಳೆಯಾಗಿದ್ದು ಇದೀಗ ಅದು ಕೂಡ ನೆಲಕ್ಕುರಳಿದ್ದು ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಸರಕಾರ ವೈಜ್ಞಾನಿಕ ಬೆಳೆ ಹಾನಿ ಪರಿಹಾರ ನೀಡಬೇಕು.
-ರೆಡ್ಡಿ ಶ್ರೀನಿವಾಸ ಕಾಂಗ್ರೆಸ್ ಮುಖಂಡರು, ಎಪಿಎಂಸಿ ಮಾಜಿ ನಿರ್ದೇಶಕರು.

ಅಕಾಲಿಕ ಮಳೆಯ ಪರಿಣಾಮ ಬೆಳೆದು ನಿಂತಿದ್ದ ಭತ್ತದ ಬೆಳೆ ಹಾನಿಯಾಗಿದ್ದು ರೈತರು ಆತಂಕಪಡುವ ಅಗತ್ಯವಿಲ್ಲ.ಈಗಾಗಲೇ ಕ್ಷೇತ್ರದ ರೈತರ ಜತೆ ದೂರವಾಣಿಯಲ್ಲಿ ಮಾತನಾಡಿದ್ದು ಶೀಘ್ರ ಬೆಳೆ ನಷ್ಟವಾಗಿರುವ ರೈತರ ಗದ್ದೆಗೆ ಭೇಟಿ ನೀಡಲಾಗುತ್ತದೆ. ಬೆಳೆನಷ್ಟದ ಕುರಿತು ಸರ್ವೇ ನಡೆಸುವಂತೆ ಸೂಚಿಸಲಾಗಿದ್ದು ಜಿಲ್ಲಾಡಳಿತದಿಂದ ಸರ್ವೇ ವರದಿ ಸರಕಾರಕ್ಕೆ ವರದಿ ಬಂದ ನಂತರ ಸಿಎಂ, ಡಿಸಿಎಂ ಹಾಗೂ ಕೃಷಿ ಸಚಿವರ ಜತೆಗೆ ಮಾತನಾಡಿ ಪರಿಹಾರ ವಿತರಿಸಲಾಗುತ್ತದೆ.
-ಶಿವರಾಜ್ ಎಸ್ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವರು.

Advertisement

Udayavani is now on Telegram. Click here to join our channel and stay updated with the latest news.

Next