Advertisement

ನವಲಿ ಬಳಿ ಸಮತೋಲನ ಜಲಾಶಯ

05:08 PM Feb 14, 2020 | Naveen |

ಗಂಗಾವತಿ: ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆಗೆ ನವಲಿ ಗ್ರಾಮದ ಹತ್ತಿರ ಸಮತೋಲನ ಜಲಾಶಯ ನಿರ್ಮಿಸುವ ಮೂಲಕ ಪರಿಹಾರ ಕಂಡುಕೊಳ್ಳಲು ರಾಜ್ಯ ಸರಕಾರ ಮುಂದಾಗಿದೆ.

Advertisement

ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಎರಡು ದಶಕಗಳಿಂದ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ತುಂಗಭದ್ರಾ ಡ್ಯಾಂನಲ್ಲಿ 33 ಟಿಎಂಸಿ ಅಡಿಯಷ್ಟು ಹೂಳು ತುಂಬಿದೆ. ಇದರಿಂದ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಒಂದೇ ಬೆಳೆ ಬೆಳೆಯುವಂತಾಗಿದೆ. ಈ ಭಾರಿ ಮಾತ್ರ ಮುಂಗಾರಿನ ನಂತರ ಮಳೆಯಾಗಿದ್ದರಿಂದ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದ್ದರೂ ಬೇಸಿಗೆ ಬೆಳೆಗಳಿಗೆ ನೀರಿನ ಕೊರತೆಯಾಗಲಿದೆ. ಮಳೆಗಾಲದಲ್ಲಿ ಹರಿದು ಹೋಗುವ ನೀರನ್ನು ಸಂಗ್ರಹಿಸಲು ನದಿಯಲ್ಲಿ ನಾಲ್ಕು ಬ್ಯಾರೇಜ್‌ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಈ ಯೋಜನೆ ಅವೈಜ್ಞಾನಿಕವಾಗಿದ್ದರಿಂದ ಕನಕಗಿರಿ ತಾಲೂಕಿನ ನವಲಿ ಗ್ರಾಮದ ಹತ್ತಿರ ಸಮಾನಾಂತರ ಜಲಾಶಯ ನಿರ್ಮಿಸಿ ಸುಮಾರು 37 ಟಿಎಂಸಿ ಅಡಿ ನೀರು ಸಂಗ್ರಹಿಸಿ ಕನಕಗಿರಿ, ಕಾರಟಗಿ ಸಿಂಧನೂರು, ಮಾನ್ವಿ ಮತ್ತು ರಾಯಚೂರು ಕೊನೆ ಭಾಗಕ್ಕೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಸುವ ಉದ್ದೇಶ ಹೊಂದಲಾಗಿದೆ.

ಈ ಹಿಂದೆ 2008ರಲ್ಲಿ ಬಿಜೆಪಿ ಸರಕಾರವಿದ್ದಾಗ ನವಲಿ ಸಮಾನಾಂತರ ಜಲಾಶಯ ನಿರ್ಮಿಸುವ ಕುರಿತು ಅಂದಿನ ಶಾಸಕ ಶಿವರಾಜ ತಂಗಡಗಿ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುವ ಮೂಲಕ ನಕ್ಷೆ ಸಿದ್ಧಪಡಿಸಿದ್ದರು. ನಂತರ ಯೋಜನೆ ಕುರಿತು ಪರ, ವಿರೋಧ ಚರ್ಚೆ ನಡೆದು ಯೋಜನೆ ಸ್ಥಗಿತವಾಗಿದ್ದು, ಇದೀಗ ರಾಜ್ಯ ಸರಕಾರ ನವಲಿ ಹತ್ತಿರ ಜಲಾಶಯ ನಿರ್ಮಿಸಲು 24 ಕೋಟಿ ವೆಚ್ಚದಲ್ಲಿ ವಿಸ್ತೃತ ವರದಿ ತಯಾರಿಸಲು ಜಲಸಂಪನ್ಮೂಲ ಇಲಾಖೆಗೆ ಆದೇಶ ಮಾಡಿದೆ. ಮುಂಬರುವ ಬಜೆಟ್‌ನಲ್ಲಿ ಈ ಕುರಿತು ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.

ತುಂಗಭದ್ರಾ ಡ್ಯಾಂ ನಿರ್ಮಿಸಿ ಫೆ. 28ಕ್ಕೆ ಸರಿಯಾಗಿ 75 ವರ್ಷಗಳು ತುಂಬುತ್ತವೆ. ಬಳ್ಳಾರಿ ಜಿಲ್ಲೆಯಲ್ಲಿ ಮಾಡಿದ ಅವೈಜ್ಞಾನಿಕ ಗಣಿಗಾರಿಕೆಯಿಂದ ಜಲಾಶಯದಲ್ಲಿ ಸುಮಾರು 33 ಟಿಎಂಸಿ ಅಡಿಯಷ್ಟು ಹೂಳು ತುಂಬಿದ್ದು, ನೀರು ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿ ನದಿ ಮೂಲಕ ತುಂಗಭದ್ರಾ ಜಲಾನಯನ ಪ್ರದೇಶದ ನೀರು ಸಮುದ್ರ ಸೇರುತ್ತಿದೆ. ಅಚ್ಚುಕಟ್ಟು ಪ್ರದೇಶದ ರೈತರಿಗೆ ಬೇಸಿಗೆ ಬೆಳೆ ಮತ್ತು ರಾಯಚೂರು ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಕೊರತೆಯುಂಟಾಗುತ್ತಿದೆ. ಇದನ್ನು ಹೋಗಲಾಡಿಸಲು ನವಲಿ ಹತ್ತಿರ ಜಲಾಶಯದ ಪ್ರಸ್ತಾಪ ಎರಡು ದಶಕಗಳಿಂದ ನಡೆಯುತ್ತಿದ್ದು, ಯೋಜನೆ ಆರಂಭಕ್ಕೆ ಯಾವ ಪಕ್ಷದ ಸರಕಾರ ಬಂದರು ಇಚ್ಛಾಶಕ್ತಿ ತೋರುತ್ತಿಲ್ಲ. ಇದೀಗ ರಾಜ್ಯ ಸರಕಾರ ನವಲಿ ಸಮತೋಲನ ಜಲಾಶಯ ನಿರ್ಮಿಸಲು 24 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್‌ಗೆ ಸಿದ್ಧತೆ ನಡೆಸಿದೆ.

ತುಂಗಭದ್ರಾ ಹೂಳಿನ ಸಮಸ್ಯೆ ಇತ್ಯರ್ಥಕ್ಕೆ ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರಕಾರ ಪ್ರಾಮಾಣಿಕ ಪ್ರಯತ್ನ ನಡೆಸಿತ್ತು. ವಿದೇಶಿ ತಂತ್ರಜ್ಞಾನ ಮೂಲಕ ಹೂಳು ತೆಗೆಯಬೇಕು ಅಥವಾ ಡ್ಯಾಂ ಎತ್ತರಿಸಲು ಯೋಜಿಸಲಾಗಿತ್ತು. ತಜ್ಞರ ಅಭಿಪ್ರಾಯದಲ್ಲಿ ಎರಡು ಯತ್ನ ಅವೈಜ್ಞಾನಿಕವಾಗಿವೆ ಎಂಬ ವರದಿ ಹಿನ್ನೆಲೆಯಲ್ಲಿ ನಾಲ್ಕು ಬ್ಯಾರೇಜ್‌ ಅಥವಾ ನವಲಿ ಗ್ರಾಮದ ಹತ್ತಿರ ಸಮಾನಾಂತರ ಜಲಾಶಯ ನಿರ್ಮಿಸಿ ಸುಮಾರು 37 ಟಿಎಂಸಿ ಅಡಿ ನೀರನ್ನು ಪ್ರವಾಹ ಸಂದರ್ಭದಲ್ಲಿ ಸಂಗ್ರಹಿಸುವ ಉದ್ದೇಶ ಹೊಂದಲಾಗಿತ್ತು. ಈ ಕುರಿತು ಜಲಸಂಪನ್ಮೂಲ ಇಲಾಖೆಯಿಂದ ವರದಿ ಸಿದ್ಧಪಡಿಸಲಾಗಿತ್ತು. ನಂತರ ಬಂದ ಕಾಂಗ್ರೆಸ್‌ ಸರಕಾರ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನೂತನ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ಜತೆಗೆ ಈಗಾಗಲೇ ಮಾತನಾಡಿದ್ದು, ಸಿಎಂ ಯಡಿಯೂರಪ್ಪ ಈಗಾಗಲೇ 24 ಕೋಟಿ ವೆಚ್ಚದಲ್ಲಿ ನವಲಿ ಸಮತೋಲನ ಜಲಾಶಯ ನಿರ್ಮಾಣಕ್ಕೆ ಡಿಪಿಆರ್‌ ವರದಿ ಸಿದ್ಧಪಡಿಸಲು ಸೂಚನೆ ನೀಡಿದ್ದಾರೆ. ಮತ್ತೂಮ್ಮೆ ಜಲಸಂಪನ್ಮೂಲ ಸಚಿವರ ಜತೆ ಕೃಷ್ಣ ಬಿ ಸ್ಕೀಂ ಯೋಜನೆ ಮತ್ತು ನವಲಿ ಸಮತೋಲನ ಜಲಾಶಯದ ಕುರಿತು ಚರ್ಚಿಸಿ ಇದೇ ವರ್ಷ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next