Advertisement

ಪೋಲಾಗೋದು ನಿಂತಿಲ್ಲ ಕಾಲುವೆ ನೀರು

03:22 PM Dec 11, 2019 | Naveen |

„ಕೆ.ನಿಂಗಜ್ಜ
ಗಂಗಾವತಿ:
ತುಂಗಭದ್ರಾ ಡ್ಯಾಂ ಎಡದಂಡೆ ಕಾಲುವೆ 27ನೇ ವಿತರಣಾ ಕಾಲುವೆ ವ್ಯಾಪ್ತಿಯ ಭತ್ತದ ಗದ್ದೆ ಕಟಾವು ಕಾರ್ಯ ನಡೆಯುತ್ತಿದ್ದರೂ,ಕಾಲುವೆ ಮೂಲಕ ನೀರು ಪೋಲಾಗುವುದು ನಿಂತಿಲ್ಲ.

Advertisement

ಭತ್ತದ ಕಟಾವು ಕಾರ್ಯ ನಡೆಯುತ್ತಿರುವ ಕಾಲುವೆ ವ್ಯಾಪ್ತಿಯಲ್ಲಿ ನೀರು ಹರಿಸುವುದನ್ನು ನಿಲ್ಲಿಸುವಂತೆ ಇತ್ತೀಚೆಗೆ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಿದರೂ ಪ್ರಯೋಜನವಾಗುತ್ತಿಲ್ಲ. ಕಾಲುವೆ ಮೂಲಕ ತುಂಗಭದ್ರಾ ನದಿಗೆ ನೀರು ಹರಿದು ಆಂಧ್ರಪ್ರದೇಶ ಸೇರುತ್ತಿದೆ. ಮಿತವಾಗಿ ಬಳಸಿ ಉಳಿಸಿದ ನೀರನ್ನು ಬೇಸಿಗೆ ಬೆಳೆಗೆ ಬಳಸಲು ನೀರಾವರಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದರೂ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ನಿರ್ಲಕ್ಷéದಿಂದ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಕೊಪ್ಪಳ, ಗಂಗಾವತಿ, ಕಾರಟಗಿ ವ್ಯಾಪ್ತಿಯ ಭತ್ತದ ಬೆಳೆ ಕಟಾವಿಗೆ ಬಂದಿದ್ದು, ಕಟಾವಿಗೆ 10 ದಿನಗಳ ಮೊದಲು ಭತ್ತದ ಬೆಳೆಗೆ ನೀರು ಹರಿಸುವುದಿಲ್ಲ ಆದರೆ ಕಳೆದ 20 ದಿನಗಳಿಂದ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಈ ಬಾರಿ ಜಲಾನಯನ ಪ್ರದೇಶದಲ್ಲಿ ಆಗಸ್ಟ್‌ ಕೊನೆಯ ವಾರ ಉತ್ತಮ ಮಳೆಯಾಗಿ ಡ್ಯಾಂ ಭರ್ತಿಯಾಗಿದೆ. ಸದ್ಯ ಡ್ಯಾಂನಲ್ಲಿ 86  ಎಂಸಿ ನೀರು ಸಂಗ್ರಹವಿದೆ.

ಎಡದಂಡೆ ಕಾಲುವೆ ವ್ಯಾಪ್ತಿಯ 27ನೇ ವಿತರಣಾ ಕಾಲುವೆ ವ್ಯಾಪ್ತಿಯಲ್ಲಿ ಸುಮಾರು 1.60 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ಕಟಾವಿಗೆ ಬಂದಿದೆ. ಭತ್ತ ಕಟಾವು ಮಾಡಿದ ಗದ್ದೆಗೆ ಇನ್ನೂ ಎರಡು ತಿಂಗಳು ನೀರಿನ ಅವಶ್ಯಕತೆ ಇಲ್ಲ. ಆದರೂ ಅಧಿಕಾರಿಗಳು ಕೆಲ ಒತ್ತಡದಿಂದ ವಿತರಣಾ ಕಾಲುವೆಗಳಲ್ಲಿ ನೀರು ನಿಲ್ಲಿಸದೇ ನದಿ ಮೂಲಕ ಆಂಧ್ರಕ್ಕೆ ನೀರು ಹರಿಸಲಾಗುತ್ತಿದೆ.

ಜನಪ್ರತಿನಿಧಿ ಗಳ ನಿರ್ಲಕ್ಷ್ಯ : ಕಳೆದ ನಾಲ್ಕೈದು ವರ್ಷಗಳಿಂದ ಮುಂಗಾರು ಬೆಳೆ ಮಾತ್ರ ಬೆಳೆದಿರುವ ಅಚ್ಚುಕಟ್ಟು ರೈತರು ಈ ಬಾರಿ ಡ್ಯಾಂ ಭರ್ತಿಯಾಗಿದ್ದರಿಂದ ಬೇಸಿಗೆ ಬೆಳೆ ಬೆಳೆಯಲೂ ಸಿದ್ಧರಾಗುವ ಸಂದರ್ಭದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀರು ಪೋಲು ಮಾಡುವ ಷಡ್ಯಂತ್ರ ನಡೆದಿದೆ. ಈ ಭಾಗದ ಶಾಸಕರು-ಸಂಸದರು ಮತ್ತು ಉಸ್ತುವಾರಿ ಸಚಿವರು ಇತ್ತ ಗಮನ ಹರಿಸುತ್ತಿಲ್ಲ.

Advertisement

ರೈತರು ಹೋರಾಟ ನಡೆಸುವ ಸಂದರ್ಭಗಳಲ್ಲಿ ಮಾತ್ರ ಸ್ಪರ್ಧೆಗೆ ಬಿದ್ದವರಂತೆ ಹೇಳಿಕೆ ಕೊಡುವ ಜನಪ್ರತಿನಿಧಿ ಗಳು ಕಳೆದ 25 ದಿನಗಳಿಂದ ನೀರು ವ್ಯರ್ಥವಾಗಿ ಹೋಗುತ್ತಿದ್ದರೂ ಮೌನ ವಹಿಸುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎನ್ನುವ ದೂರುಗಳು ಕೇಳಿ ಬರುತ್ತಿವೆ.

ಬಲದಂಡೆ ಭಾಗದ ಮೇಲ್ಮಟ್ಟದ ಮತ್ತು ಕೆಳಮಟ್ಟದ ಕಾಲುವೆ ನೀರು ಹರಿಸುವ ಕೋಟಾ ಮುಗಿದಿದ್ದರೂ ಅಧಿಕಾರಿಗಳು ನೀರು ಹರಿಸುತ್ತಿದ್ದಾರೆ. ಎಡದಂಡೆ ಕಾಲುವೆಯ 27ನೇ ವಿತರಣಾ ಕಾಲುವೆಗಳ ವ್ಯಾಪ್ತಿಯವರೆಗೆ ಭತ್ತ ಕಟಾವಿಗೆ ಬಂದರೂ ನೀರು ಹರಿಸಲಾಗುತ್ತಿದೆ. ಡ್ಯಾಂನಲ್ಲಿರುವ ನೀರು ಖಾಲಿ ಮಾಡುವ ಮೂಲಕ ಬೇಸಿಗೆ ಬೆಳೆಗೆ ನೀರಿನ ಕೊರತೆಯಾಗುವಂತೆ ಷಡ್ಯಂತ್ರ್ಯ
ಮಾಡಲಾಗುತ್ತಿದೆ. ಭತ್ತದ ಬೆಳೆ ಕೈಗೆ ಬಂದ ಪ್ರದೇಶದಲ್ಲಿ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ಅಚ್ಚಕಟ್ಟು ವ್ಯಾಪ್ತಿಯ ರೈತರು ಪಕ್ಷಭೇದ ಮರೆತು ಹೋರಾಟ ನಡೆಸಬೇಕಾಗುತ್ತದೆ. ತುಂಗಭದ್ರಾ ಯೋಜನೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ ನೀರು ಬಂದ್‌ ಮಾಡಿಸಬೇಕು.
ಟಿ.ವಿ. ಸತ್ಯನಾರಾಯಣ,
ಅಧ್ಯಕ್ಷರು, 21ನೇ ವಿತರಣಾ ಕಾಲುವೆ ನೀರು ಬಳಕೆದಾರರ ಸಹಕಾರಿ ಸಂಘ 

Advertisement

Udayavani is now on Telegram. Click here to join our channel and stay updated with the latest news.

Next