Advertisement

ಗಂಗಾವತಿ ಭಾಗದಲ್ಲಿ ನಡೆಯಿತು ಎರಡು ಸ್ವಾತಂತ್ರ್ಯ ಹೋರಾಟ

08:11 AM Aug 15, 2022 | Team Udayavani |

ಗಂಗಾವತಿ : ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿದ್ದು ಇಡೀ ದೇಶ ಅಮೃತಮಹೋತ್ಸವದ ಮೂಲಕ ಸ್ವಾತಂತ್ರö್ಯ ಸೇನಾನಿಗಳನ್ನು ಸ್ಮರಿಸಿಕೊಳ್ಳುತ್ತಿದೆ. ಗಂಗಾವತಿ ಭಾಗದಲ್ಲಿ ಎರಡು ಭಾರಿ ಸ್ವಾತಂತ್ರ್ಯ ಹೋರಾಟ ನಡೆದು ಸಾವಿರಾರು ಜನರು ಸೆರೆ ಅನುಭವಿಸಿ ಕೆಲವರು ಹುತಾತ್ಮರಾಗಿದ್ದಾರೆ.

Advertisement

ಕಲ್ಯಾಣ(ಹೈದ್ರಾಬಾದ್) ಕರ್ನಾಟಕದ 6 ಜಿಲ್ಲೆಗಳು ನಿಜಾಮ ಆಡಳಿತದಲ್ಲಿದ್ದವು ಮಹಾತ್ಮಗಾಂಧಿಯವರ ಕರೆಯ ಮೇರೆಗೆ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಬೆಳಗಾವಿ, ಲಾಹೋರ್, ಲಖ್ನೋ ಮತ್ತು ಮದ್ರಾಸ್ ನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಗಂಗಾವತಿಯ ರಾಮಭಟ್ ಜೋಶಿ, ವಿಠ್ಠಲ್ ಶೆಟ್ಟಿ, ಕೋದಂಡರಾಮಪ್ಪ, ತಿರುಮಲದೇವರಾಯ, ಭತ್ತದ ಮರಿಯಪ್ಪ, ಗೌಳಿ ಮಹಾದೇವಪ್ಪ ಸೇರಿ ನೂರಾರು ಹೋರಾಟಗಾರರು ನಿಜಾಮನ ಅಧಿಕಾರಿಗಳ ಕಣ್ಣು ತಪ್ಪಿಸಿ ಹೋಗಿ ಬರುತ್ತಿದ್ದರು. ಸಿರಗುಪ್ಪ, ಕಂಪ್ಲಿ, ಹೊಸಪೇಟೆಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ತರಬೇತಿ ನೀಡಲು ಶಿಬಿರಗಳನ್ನು ಸ್ಥಾಪಿಸಲಾಗಿತ್ತು. ಇಲ್ಲಿಗೆ ಗಂಗಾವತಿ, ಕಾರಟಗಿ, ಜಮಾಪೂರ, ಸಿದ್ದಾಪೂರ, ಉಳೇನೂರು ಭಾಗದ ಹೋರಾಟಗಾರರು ಹೋಗಿ ಕಾಂಗ್ರೆಸ್ ಮುಖಂಡರ ಭಾಷಣ ಪ್ರೇರಣೆಯ ಮಾತು ಕೇಳಿ ಬರುತ್ತಿದ್ದರು. ನಿಜಾಮ ಆಡಳಿತ ಕೃಷಿ ಬೆಳೆಗಳ ಮೇಲೆ ತೆರಿಗೆ ವಿಧಿಸಿದ್ದನ್ನು ಪ್ರತಿಭಟಿಸಿ ತುಂಗಭದ್ರಾ ನದಿ ಪಾತ್ರದ ಚಿಕ್ಕಜಂತಗಲ್, ಢಣಾಪೂರ, ಆಯೋಧ್ಯೆ, ಆನೆಗೊಂದಿ ಹಾಗೂ ನದಿ ಪಕ್ಕದ ಗ್ರಾಮದ ಕೃಷಿಕರು ಬಳ್ಳಾರಿ ಜಿಲ್ಲೆಗೆ ತೆರಳಿ ತಾವು ಬೆಳೆದ ಕಾಳು ಕಡಿಗಳನ್ನು ಮಾರಾಟ ಮಾಡಿ ಬರುತ್ತಿದ್ದರು. ಇದನ್ನು ಗಮನಿಸಿದ ರಜಾಕಾರರು ರೈತರ ಬಂಡಿಗಳನ್ನು ಸುಟ್ಟು ಹಾಕಿದರು. ನಂತರ ಕೇಂದ್ರ ಸರಕಾರ ಪೊಲೀಸ್ ಕಾರ್ಯಾಚರಣೆ ಮೂಲಕ ನಿಜಾಮ ಆಡಳಿತಕ್ಕೆ ಕೊನೆ ಹಾಡಿತು. ತಲೆ ಮರೆಸಿಕೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರರು 1948 ಸೆ.17 ರಂದು ಚಿಕ್ಕಜಂತಗಲ್, ಆಯೋಧ್ಯೆ, ಗಂಗಾವತಿಯ ದುರುಗಮ್ಮನ ಗುಡಿ, ಆನೆಗೊಂದಿ, ನವಲಿ, ಕನಕಗಿರಿ ಭಾಗದಲ್ಲಿ ಸ್ವಾತಂತ್ರ್ಯ ರಾಷ್ಟçಧ್ವಜಾರೋಹಣ ಮಾಡಿ ಗಂಗಾವತಿಯಲ್ಲಿ ಬೃಹತ್ ಸ್ವಾತಂತ್ರ್ಯೋತ್ಸವದ ಮೆರವಣಿಗೆ ನಡೆಸಿದರು.

ನಿಜಾಮ ಆಡಳಿತಕ್ಕೆ ಸೆಡ್ಡು ಹೊಡೆದು ಮಾಕಣ್ಣ ಕಂಬ್ಳಿ: ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನರು ತಮ್ಮ ಆಸ್ತಿ ಪಾಸ್ತಿ ಪ್ರಾಣವನ್ನು ಲೆಕ್ಕಿಸದೇ ಹೋರಾಟ ನಡೆಸಿದ್ದಾರೆ. ಇಡೀ ದೇಶಕ್ಕೆ ಆ.15 ,1947 ರಲ್ಲಿ ಸ್ವಾತಂತ್ರ್ಯ ಲಭಿಸಿದರೂ ಕಲ್ಯಾಣ(ಹೈದ್ರಾಬಾದ್)ಕರ್ನಾಟಕದ 6 ಜಿಲ್ಲೆಗಳು ಒಂದು ವರ್ಷ ತಡವಾಗಿ ಸ್ವತಂತ್ರಗೊಂಡವು ಹೈದ್ರಾಬಾದ್ ನಿಜಾಮನ ಆಡಳಿತಕ್ಕೆ ಒಳಪಟ್ಟಿದ್ದ ರಾಯಚೂರು (ಈಗ ಕೊಪ್ಪಳ)ಜಿಲ್ಲೆಯ ನವಲಿ ಗ್ರಾಮದಲ್ಲಿ ನಿಜಾಮ ಆಡಳಿತಕ್ಕೆ ಕೃಷಿ ತೆರಿಗೆ ನಿರಾಕರಣೆ ಮಾಡಿ ನವಲಿ ಹಾಗೂ ಸುತ್ತಲಿನ ಗ್ರಾಮಗಳ ಸಾವಿರಾರು ಜನ ಸ್ವಾತಂತ್ರ್ಯ ಹೋರಾಟಗಾರರು ಪ್ರತಿಭಟನೆ ನಡೆಸಿದರು., ನಿಜಾಮರ ಸೈನಿಕರು ಲಾಠಿಚಾರ್ಜ್ ಮಾಡಿದರೂ ಪ್ರತಿಭಟನಾಕಾರರು ನಿಜಾಮ ಆಡಳಿತದ ವಿರುದ್ಧ ಘೋಷಣೆ ಕೂಗುತ್ತ ಮುಂದೆ ನಡೆದರು. ಈ ಸಂದರ್ಭದಲ್ಲಿ ನಿಜಾಮ ಸೈನಿಕರು ಗುಂಡು ಹಾರಿಸಿದಾಗ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಮಾಕಣ್ಣ ಕಂಬ್ಳಿ ಎಂಬ ಸ್ವಾತಂತ್ರ್ಯ ಹೋರಾಟಗಾರನ ಎದೆಗೆ ಗುಂಡು ತಾಗಿ ಸ್ಥಳದಲ್ಲಿ ಸಾವನ್ನಪ್ಪಿ ಹುತಾತ್ಮರಾದವರು. ನವಲಿ ಗ್ರಾಮದ ಗ್ರಾ.ಪಂ.ಕಚೇರಿ ಎದುರು ಮಾಕಣ್ಣ ಕಂಬ್ಳಿ ಮೃತಪಟ್ಟ ಸ್ಥಳದಲ್ಲಿ ಗ್ರಾಮಸ್ಥರು ಚಿಕ್ಕ ಕಟ್ಟೆ ನಿರ್ಮಿಸಿ ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ಗಣರಾಜ್ಯೋತ್ಸವ ಹಾಗೂ ಕಲ್ಯಾಣ ಕರ್ನಾಟಕ ವಿಜಯೋತ್ಸವದ ಸಂದರ್ಭದಲ್ಲಿ ಮಾಕಣ್ಣ ಕಂಬ್ಳಿ ಅವರಿಗೆ ನಮನ ಸಲ್ಲಿಸುತ್ತಾರೆ. ಸರಕಾರಕ್ಕೆ ಅನೇಕ ಭಾರಿ ಮನವಿ ಮಾಡಿದರು. ನವಲಿ ಗ್ರಾಮದಲ್ಲಿ ಮಾಕಣ್ಣ ಕಂಬ್ಳಿ ಸ್ಮಾರಕ ನಿರ್ಮಾಣ ಮಾಡಿಲ್ಲ.

– ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next