ಗಂಗಾವತಿ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿಯ ಪೂಜಾ-ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ಧಾರವಾಡ ಹೈಕೋರ್ಟ್ ತಮಗೆ ಅವಕಾಶ ಕಲ್ಪಿಸಿ ಆದೇಶ ಮಾಡಿದರೂ ಅಂಜನಾದ್ರಿ ದೇಗುಲದ ಧಾರ್ಮಿಕ ವಿಧಾನ ನೆರವೇರಿಸಲು ತಮಗೆ ಪೊಲೀಸ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಅವಕಾಶ ಕಲ್ಪಿಸದೇ ಪದೇ ಪದೇ ಅವಮಾನಕರವಾಗಿ ವರ್ತಿಸಿ ಹೈಕೋರ್ಟ್ ಆದೇಶ ಉಲ್ಲಂಘಿಸಿದ್ದಾರೆ. ಇದನ್ನು ಪ್ರಶ್ನಿಸಿ ಶೀಘ್ರವೇ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುವುದಾಗಿ ಕಿಷ್ಕಿಂದಾ ಅಂಜನಾದ್ರಿಯ ಅರ್ಚಕ ಮಹಾಂತ ವಿದ್ಯಾದಾಸ್ ಬಾಬಾ ತಿಳಿಸಿದ್ದಾರೆ.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗ್ಹೇಲೋಟ್ ಇತ್ತೀಚಿಗೆ ಅಂಜನಾದ್ರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಟ್ಟದ ಕೆಳಗಿನ ಪಾದಗಟ್ಟೆ ಆಂಜನೇಯಸ್ವಾಮಿ ಮೂರ್ತಿ ಹತ್ತಿರ ಪೂಜೆ-ಧಾರ್ಮಿಕ ವಿಧಾನ ಕೈಗೊಳ್ಳಲು ತಾವು ಮುಂದಾದ ಸಂದರ್ಭದಲ್ಲಿ ಎಸಿ, ಗ್ರಾಮೀಣ ಸಿಪಿಐ, ತಹಸೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರು ಅಡ್ಡಿಪಡಿಸಿ ಪೊಲೀಸರ ನೆರವಿನಲ್ಲಿ ಎತ್ತಿಕೊಂಡು ಹೋಗಿ ಹೊರಗೆ ಕಳುಹಿಸಿದ್ದಾರೆ. ನಂತರ ಅನ್ಯ ಪುರೋಹಿತರನ್ನು ಕರೆಸಿ ಪೂಜೆ-ಧಾರ್ಮಿಕ ಕಾರ್ಯ ಮಾಡಿದ್ದು ನ್ಯಾಯಾಂಗ ನಿಂದನೆಯಾಗಿದೆ. ಅಧಿಕಾರಿಗಳು ಮತ್ತು ಕೆಲ ಅವರ ಸಂಬಧಿಕರು ಅಭಿವೃದ್ಧಿ ಹೆಸರಿನಲ್ಲಿ ಹಣ ಮಾಡುತ್ತಿದ್ದಾರೆ. ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ ನ್ಯಾಯಾಲಯದ ಆದೇಶ ಪಾಲಿಸುತ್ತಿಲ್ಲ. ದೇವಸ್ಥಾನದ ಮಾಲೀಕತ್ವದ ವ್ಯಾಜ್ಯ ನ್ಯಾಯಾಲಯದಲ್ಲಿದ್ದು ಟ್ರಸ್ಟ್ ನೊಂದಾಯಿಸಿ ಸೂಕ್ತ ಮೇಲ್ವಿಚಾರಣೆ ನಡೆಸಬೇಕಾಗಿದೆ ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಭಕ್ತರೊಂದಿಗೆ ಮಾತನಾಡಲು ಬಿಡಲ್ಲ. ವೇದ ಸಂಸ್ಕೃತ ಪಾಠ ಶಾಲೆ ಸಂಪೂರ್ಣ ಬಂದ್ ಮಾಡಲಾಗಿದೆ.
ಹೈಕೋರ್ಟ್ ಆದೇಶದಂತೆ ಸರಿಯಾಗಿ ದೇವಸ್ಥಾನ ತೆರೆಯುತ್ತಿಲ್ಲ. ಭಕ್ತಿ ಪ್ರಧಾನವಾಗಿರಬೇಕಾದ ದೇವಸ್ಥಾನದಲ್ಲಿ ಬರೀ ಅಧಿಕಾರಿಗಳ ದರ್ಬಾರ್ ನಡೆಯುತ್ತಿದೆ. ನ್ಯಾಯಾಲಯಕ್ಕೆ ನಕಲಿ ದಾಖಲಾತಿ ತೋರಿಸುವ ಮೂಲಕ ಹಿಂದಿನ ಜಿಲ್ಲಾಧಿಕಾರಿ ಕ್ಷೆಮಾಪಣೆ ಕೋರಿದ್ದರು. ಇನ್ನೂ ಕೂಡಾ ಸರಿಯಾಗಿ ದಾಖಲೆ ನೀಡದೆ ಜಿಲ್ಲಾಡಳಿತ ನುಣಿಚಿಕೊಳ್ಳುತ್ತಿದ್ದು ಕೋರ್ಟ್ ಆದೇಶ ಉಲ್ಲಂಘಿಸಿದ್ದನ್ನು ಪ್ರಶ್ನಿಸಿ ಕೇಸ್ ಹಾಕಲಾಗುತ್ತದೆ. ಕೂಡಲೇ ಸರಕಾರ ತಮ್ಮನ್ನು ಮತ್ತು ಸ್ಥಳೀಯರನ್ನೊಳಗೊಂಡು ಟ್ರಸ್ಟ್ ರಚಿಸಿ ಅಧಿಕಾರಿಗಳ ದರ್ಪ ತಡೆಯುವಂತೆ ಮುಖ್ಯಮಂತ್ರಿ ಮತ್ತು ರಾಜ್ಯಪಾಲರನ್ನು ಕೋರಲಾಗುತ್ತದೆ ಎಂದರು.
ಇದನ್ನೂ ಓದಿ: ಆಶಿಶ್ ಮಿಶ್ರಾ ಅವರನ್ನು ಎಷ್ಟು ದಿನ ಕಸ್ಟಡಿಯಲ್ಲಿ ಇಡಬಹುದು : ಸುಪ್ರೀಂ ಪ್ರಶ್ನೆ