ಗಂಗಾವತಿ: ರೈತರ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಆರಂಭವಾಗಿದ್ದು, ಅಚ್ಚುಕಟ್ಟು ಪ್ರದೇಶದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಮಳೆ ಕೊರತೆಯಿಂದ ಜಲಾಶಯಕ್ಕೆ ಸೋಮವಾರದವರೆಗೂ ಒಳಹರಿವು ಇರಲಿಲ್ಲ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ವಾರದಿಂದ ತುಂಗಭದ್ರಾ ನದಿಯಲ್ಲಿ ಒಳಹರಿವು ಆರಂಭವಾಗಿದೆ. ಬುಧವಾರ ಜಲಾಶಯಕ್ಕೆ 12,875 ಕ್ಯೂಸೆಕ್ ನೀರು ಹರಿದು ಬಂದಿದ್ದು, ಜಲಾಶಯದಲ್ಲಿ 4.91 ಟಿಎಂಸಿ ನೀರು ಸಂಗ್ರಹವಾಗಿದೆ. ಡೆಡ್ ಸ್ಟೋರೇಜ್ ಆಗಿದ್ದ ಜಲಾಶಯ ಇದೀಗ ಒಳಹರಿವಿನಿಂದ ಮೈತುಂಬಿಕೊಳ್ಳುವ ಲಕ್ಷಣವಿದ್ದು, ಇದೇ ಪ್ರಮಾಣದಲ್ಲಿ ಒಳಹರಿವು ಇದ್ದರೆ ಜುಲೈ ಅಂತ್ಯದವರೆಗೂ ಬಹುತೇಕ ಜಲಾಶಯ ಭರ್ತಿಯಾಗಲಿದೆ.
ಕಳೆದ ವರ್ಷ ಇದೇ ದಿನದಂದು 42.09 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಒಳಹರಿವು 35 ಸಾವಿರ ಕ್ಯೂಸೆಕ್ ಇತ್ತು. ಮುಂಗಾರು ಈ ಬಾರಿ ತಡವಾಗಿ ಆರಂಭವಾಗಿದ್ದರಿಂದ ಶೃಂಗೇರಿ, ಶಿವಮೊಗ್ಗ, ಭದ್ರಾವತಿ ಸೇರಿ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಈಗಾಗಲೇ ತುಂಗಾ ಡ್ಯಾಂ ಭರ್ತಿಯಾಗಿದ್ದು, ನದಿಗೆ ನೀರು ಹರಿಬಿಡಲಾಗಿದೆ. ತುಂಗಭದ್ರಾ ಡ್ಯಾಂ ಮೇಲ್ಭಾಗದಲ್ಲಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ 2.5 ಟಿಎಂಸಿ ಅಡಿ ನೀರು ಸಂಗ್ರಹಿಸಲಾಗಿದೆ. ಇಲ್ಲಿ ಹೆಚ್ಚಾದ ನೀರು ಜಲಾಶಯಕ್ಕೆ ಹರಿದುಬರುತ್ತಿದೆ. ಮಲೆನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯದ ಒಳಹರಿವು ಹೆಚ್ಚಾಗುವ ಸಾಧ್ಯತೆ ಇದೆ.
ಕುಡಿಯುವ ನೀರಿಗಾಗಿ ಮಾತ್ರ ಎಂದು ರೂಪಿಸಲಾಗಿದ್ದ ಸಿಂಗಟಾಲೂರು ಏತ ನೀರಾವರಿ ಯೋಜನೆ ಅನುಷ್ಠಾನ ಸಂದರ್ಭದಲ್ಲಿ ಕೃಷಿಗೆ ಬಳಕೆ ಮಾಡಲು ನಿಯಮದಲ್ಲಿ ಮಾರ್ಪಾಡು ಮಾಡಿ ಮುಂಡರಗಿ, ಗದಗ ಮತ್ತು ಹೂವಿನಹಡಗಲಿ ತಾಲೂಕಿನ ಭೂಮಿಗೆ ನೀರಾವರಿ ಕಲ್ಪಿಸಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ಮಾತ್ರ ನೀರು ಬಳಕೆ ಮಾಡಿಕೊಂಡು ಒಳಹರಿವು ಕಡಿಮೆಯಾದ ಕೂಡಲೇ ತುಂಗಭದ್ರಾ ಜಲಾಶಯಕ್ಕೆ ನೀರು ಹರಿಸಬೇಕು ಎಂಬ ನಿಯಮವಿದೆ. ಆದರೆ ನಾಲ್ಕೈದು ವರ್ಷಗಳಿಂದ ರಾಜಕೀಯ ಮುಖಂಡ ಒತ್ತಡದ ಹಿನ್ನೆಲೆ ಸೆಪ್ಟೆಂಬರ್ ವೇಳೆಗೆ ಜಲಾಶಯಕ್ಕೆ ನೀರು ಹರಿದು ಬರದಂತೆ ಸಿಂಗಟಾಲೂರು ಯೋಜನೆ ಗೇಟ್ ಬಂದ್ ಮಾಡಲಾಗುತ್ತಿದೆ. ಇದರಿಂದಾಗಿ ತುಂಗಭದ್ರಾ ಜಲಾಶಯ ಕಳೆದ ವರ್ಷ ಹೊರತುಪಡಿಸಿ ಉಳಿದ ವರ್ಷಗಳಲ್ಲಿ ಪೂರ್ಣಪ್ರಮಾಣದಲ್ಲಿ ಭರ್ತಿಯಾಗಿಲ್ಲ.
ಇದೀಗ ಮುಂಗಾರು ಮಳೆ ಆರಂಭವಾಗಿದ್ದು, ಈ ಬಾರಿಯಾದರೂ ಜಲಾಶಯಕ್ಕೆ ಪೂರ್ಣ ಪ್ರಮಾಣದ ನೀರು ಬಂದು ಅಚ್ಚುಕಟ್ಟು ಪ್ರದೇಶದ ರೈತರು ಎರಡು ಬೆಳೆ ಬೆಳೆಯುವಂತಾಗಲಿ.
ತುಂಗಭದ್ರಾ ಜಲಾಶಯದಲ್ಲಿರುವ ಹೂಳಿನಿಂದಾಗಿ ನಾಲ್ಕೈದು ವರ್ಷಗಳಿಂದ ಡ್ಯಾಂ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿಲ್ಲ. ಕಳೆದ ವರ್ಷ ಉತ್ತಮ ಮಳೆಯಾದರೂ ನೀರು ಸಂಗ್ರಹಿಸಲು ಜಾಗವಿಲ್ಲದ ಕಾರಣ ಸುಮಾರು 275 ಟಿಎಂಸಿ ಅಡಿಯಷ್ಟು ನೀರು ನದಿ ಮೂಲಕ ಆಂಧ್ರಪ್ರದೇಶದ ಡ್ಯಾಂ ಮತ್ತು ಸಮುದ್ರ ಸೇರುವಂತಾಗಿದೆ. ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ ನಿಯಮ ಮೀರಿ ನೀರು ಸಂಗ್ರಹಿಸಲಾಗುತ್ತಿದೆ. ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದ್ದು, ಬೇಸಿಗೆ ಬೆಳೆಗೆ ಪ್ರತಿ ವರ್ಷ ನೀರು ಇಲ್ಲದಂತಾಗುತ್ತಿದೆ. ಸರಕಾರ ಕೂಡಲೇ ಎಚ್ಚೆತ್ತು ಡ್ಯಾಂನ ನೀರಿನ ಜಲಸಂಪನ್ಮೂಲ ಹೆಚ್ಚು ಮಾಡಬೇಕಿದೆ. •
ತಿಪ್ಪೇರುದ್ರಸ್ವಾಮಿ ರೈತ ಹೋರಾಟಗಾರರು