ಗಂಗಾವತಿ: ಮೂರು ತಾಸಿಗೂ ಹೆಚ್ಚು ಚಿಣಿಮಿಣಿ ಹಾವೊಂದು ಬೈಕ್ ಗಳಲ್ಲಿ ಹೊಕ್ಕ ಪರಿಣಾಮ ಬೈಕ್ ಮಾಲೀಕರು ಪರದಾಡಿದ ಘಟನೆ ನಗರದ ಜಗಜೀವನರಾಂ ವೃತ್ತದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ವಡ್ಡರಹಟ್ಟಿ ಗ್ರಾ.ಪಂ. ಸದಸ್ಯ ಪ್ರಭುರಾಜ ಎಂಬವರು ಕೆಲಸದ ನಿಮಿತ್ತ ಜಗಜೀವನರಾಂ ವೃತ್ತದಲ್ಲಿ ಹತ್ತಿರ ಜೆರಾಕ್ಸ್ ಅಂಗಡಿ ಬಳಿ ಬೈಕ್ ನಿಲ್ಲಿಸಿದ ಸಂದರ್ಭದಲ್ಲಿ ಗಿಡದ ಮೇಲಿಂದ ಚಿಣಿಮಿಣಿ ಹಾವು ಸೈನ್ ಬೈಕ್ ಮೇಲೆ ಬಿದ್ದಿದೆ.
ಹಾವನ್ನು ಓಡಿಸಲು ಅಲ್ಲಿದ್ದವರು ಶಬ್ದ ಮಾಡಿದ ತಕ್ಷಣ ಹಾವು ಬೈಕ್ ಸೀಟಿನೊಳಗೆ ಹೋಗಿ ಕುಳಿತುಕೊಂಡಿದ್ದರಿಂದ ಬೈಕ್ ಸೀಟ್ ತೆಗೆದು ಹುಡುಕಿದರೂ ಹಾವು ಕಂಡು ಬರಲಿಲ್ಲ.
ನಂತರ ಒಂದು ಬಕೇಟ್ ನೀರು ಬೈಕ್ ಮೇಲೆ ಸುರಿದ ತಕ್ಷಣ ಹೊರಗೆ ಬಂದ ಹಾವು ಮೆಹಮೂದ್ ಎಂಬ ಯುವಕನ ಬೈಕ್ ನೊಳಗೆ ಹೊಕ್ಕಿದೆ. ನಂತರ ಮಹೆಬೂಬ ಎನ್ನುವ ಉರಗತಜ್ಷ (ಹಾವು ಹಿಡಿಯುವ ವ್ಯಕ್ತಿ) ನನ್ನು ಕರೆಸಿ ಹಲವು ಪ್ರಯತ್ನದ ನಂತರ ಹಲವು ತಂತ್ರಗಳ ಮೂಲಕ ಹಾವನ್ನು ಹಿಡಿದು ನಂತರ ಬೆಟ್ಟ ಪ್ರದೇಶಕ್ಕೆ ಬಿಡಲಾಯಿತು.
ಹಾವುಗಳು ಪರಿಸರ ಸ್ನೇಹಿ: ಹಾವುಗಳು ಪರಿಸರ ಸ್ನೇಹಿಯಾಗಿದ್ದು ಬೇಸಿಗೆ ಬಿಸಿಲಿನ ತಾಪಕ್ಕೆ ಹೊರಗೆ ಬರುತ್ತವೆ. ಜನರು ಎಚ್ಚರಿಕೆಯಿಂದ ಇರಬೇಕು. ಯಾವುದೇ ಕಾರಣಕ್ಕೂ ಹಾವುಗಳನ್ನು ಹೊಡೆಯಬಾರದು. ಒಂದು ವೇಳೆ ಹಾವು ಬಂದರೂ ತಮ್ಮನ್ನು ಸಂಪರ್ಕಿಸಿ ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಲಾಗುತ್ತದೆ. ಈಗಾಗಲೇ 10 ಸಾವಿರ ಹಾವುಗಳನ್ನು ಉಚಿತವಾಗಿ ಹಿಡಿದು ಅರಣ್ಯ ಕ್ಕೆ ಬಿಡಲಾಗಿದೆ.
ಮನೆ ಮತ್ತು ಜನ ನಿಬಿಡ ಪ್ರದೇಶದಲ್ಲಿ ಹಾವು ಕಂಡು ಬಂದಲ್ಲಿ ಅವುಗಳನ್ನು ಕೊಲ್ಲದೇ ತಮ್ಮನ್ನು ಸಂಪರ್ಕಿಸುವಂತೆ ಮಹೆಬೂಬ ಪಂಪನಗರ ಮನವಿ ಮಾಡಿದ್ದಾರೆ. ಮೊ.ಸಂ. 9916582793 ಗೆ ಕರೆ ಮಾಡಿ ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.