Advertisement
ಸರಕಾರದ ಉದ್ದೇಶಕ್ಕೆ ವಿರುದ್ಧವಾಗಿ ಸ್ಥಳೀಯ ಕೊಲ್ಲಿನಾಗೇಶ್ವರರಾವ್ ಸರಕಾರಿ ಮಹಾವಿದ್ಯಾಲಯದ ಕೆಲ ಪ್ರಾಧ್ಯಾಪಕರು ಪ್ರಭಾರಿ ಪ್ರಾಚಾರ್ಯರ ಹುದ್ದೆ ಪಡೆಯಲು ಮಸಲತ್ತು ನಡೆಸಿ ಕಾಲೇಜಿನ ಶೈಕ್ಷಣಿಕ ವಾತಾವರಣ ಕೆಡಲು ಕಾರಣವಾಗುತ್ತಿದ್ದು, ವಿದ್ಯಾರ್ಥಿಗಳ, ಪಾಲಕರ ಮತ್ತು ವಿದ್ಯಾರ್ಥಿ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದೆ.
Related Articles
Advertisement
ಪ್ರಭಾರದ ಗೊಂದಲ: ಎಲ್ಲಿ ಖಾಯಂ ಪ್ರಾಚಾರ್ಯರು ಇರುವುದಿಲ್ಲವೋ ಅಲ್ಲಿ ಸ್ಥಳೀಯರ ಶಾಸಕರು ಹೇಳುವ ಅರ್ಹ ಪ್ರಾಧ್ಯಾಪಕರು ಪ್ರಭಾರಿ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸುತ್ತಾರೆ.
ಇಲ್ಲಿಗೆ ವರ್ಗಾವಾಗಿ ಬೆಂಗಳೂರು ಭಾಗದ ಪ್ರಾಚಾರ್ಯರು ಆಗಮಿಸಿ ಎರಡು ಮೂರು ತಿಂಗಳಲ್ಲಿ ವಾಪಸ್ ಹೋಗುವುದರಿಂದ ಪ್ರಾಚಾರ್ಯರ ಹುದ್ದೆ ಖಾಲಿ ಇರುತ್ತದೆ. ಕಾಲೇಜಿನಲ್ಲಿ ಅಭಿವೃದ್ಧಿ ಕಾರ್ಯಗಳು ಸೇರಿ ಪೂರಕ ಶೈಕ್ಷಣಿಕ ವಾತಾವರಣ ನಿರ್ಮಾಣಕ್ಕೆ ಸರಕಾರ ಸ್ಥಳೀಯ ಶಾಸಕರನ್ನೊಳಗೊಂಡ ಕಾಲೇಜು ಅಭಿವೃದ್ಧಿ ಸಮಿತಿ(ಸಿಡಿಸಿ) ರಚನೆ ಮಾಡುತ್ತದೆ.
ಸರಕಾರದ ನಿಯಮಗಳಂತೆ ಪಠ್ಯ ಪ್ರವಚನಗಳು ನಡೆಯುತ್ತವೆ. ಸಿಡಿಸಿ ಸೂಚನೆಯಂತೆ ಸರಕಾರದ ನಿಯಮಗಳಿಗೆ ಅನುಗುಣವಾಗಿ ಕಾಲೇಜಿನಲ್ಲಿ ಮೂಲಸೌಕರ್ಯಗಳು, ವಿದ್ಯಾರ್ಥಿಗಳ ಬೇಕು ಬೇಡಿಕೆಗಳಿಗೆ ಸ್ಪಂದಿಸಲಾಗುತ್ತದೆ.
ಕಳೆದ 20 ವರ್ಷಗಳಿಂದ ಈ ಕಾಲೇಜಿನಲ್ಲಿ ಖಾಯಂ ಪ್ರಾಚಾರ್ಯರು ಇಲ್ಲದಿರುವುದರಿಂದ ಪ್ರಾಧ್ಯಾಪಕರಲ್ಲಿ ಹಲವು ಗುಂಪುಗಳಾಗಿ ಇಡೀ ಕಾಲೇಜಿನ ಶೈಕ್ಷಣಿಕ ವಾತಾವರಣ ಕೆಟ್ಟುಹೋಗಿದೆ ಎಂಬ ಆರೋಪ ವ್ಯಾಪಕವಾಗಿದೆ.
ಸದ್ಯ ಹಿರಿಯ ಪ್ರಾಧ್ಯಾಪಕರಾಗಿದ್ದ ಜಗದೇವಿ ಕಲಶೆಟ್ಟಿ ಆರೋಗ್ಯ ಮತ್ತಿತರ ಕಾರಣ ನೀಡಿ ಡಾ.ಜಾಜಿ ದೇವೆಂದ್ರಪ್ಪ ಎನ್ನುವ ಕನ್ನಡ ಪ್ರಾಧ್ಯಾಪಕರಿಗೆ ಪ್ರಾಚಾರ್ಯರ ಪ್ರಭಾರಿ ನೀಡಿದ್ದು, ಗೊಂದಲಕ್ಕೆ ಕಾರಣವಾಗಿದೆ.
ಸರಕಾರದ ನಿಯಮ ಹಾಗೂ ಪ್ರೋಟೋಕಾಲ್ ಉಲ್ಲಂಘನೆಯಾಗಿದ್ದು, ಶಾಸಕರು ಮಧ್ಯೆ ಪ್ರವೇಶ ಮಾಡುವಂತೆ ಕೆಲ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ. ಖಾಯಂ ಪ್ರಾಚಾರ್ಯರು ಇಲ್ಲದ ಸಂದರ್ಭದಲ್ಲಿ ನಿಯಮದಂತೆ ಸ್ಥಳೀಯ ಶಾಸಕರು ಕಾಲೇಜಿನ ಅಧ್ಯಕ್ಷರಾಗಿದ್ದು ಅರ್ಹರಿಗೆ ನಿಯಮದಂತೆ ಪ್ರಾಚಾರ್ಯರ ಹುದ್ದೆ ಪ್ರಭಾರ ವಹಿಸಬೇಕು.
ಪ್ರೋಟೋಕಾಲ್ ಮತ್ತು ಇಲಾಖೆ ನಿಯಮಗಳನ್ನು ಗಾಳಿಗೆ ತೂರಿ ಪ್ರಾಚಾರ್ಯರ ಹುದ್ದೆ ಪ್ರಭಾರವನ್ನು ವಹಿಸಲಾಗಿದೆ. ತಾವು ಬೆಂಗಳೂರು ಪ್ರವಾಸದಲ್ಲಿದ್ದು ಗಂಗಾವತಿಗೆ ಆಗಮಿಸಿದ ತಕ್ಷಣ ಕಾಲೇಜಿನಲ್ಲಿ ಸಭೆ ನಡೆಸಿ ಅರ್ಹರಿಗೆ ಪ್ರಭಾರ ವಹಿಸಲಾಗುತ್ತದೆ ಎಂದು ದೂರವಾಣಿ ಕರೆಯ ಮೂಲಕ ಹೇಳಿದರೂ ಈ ಹಿಂದೆ ಇದ್ದ ಪ್ರಭಾರ ಪ್ರಾಚಾರ್ಯರು ನಿರ್ಲಕ್ಷಿಸಿ ಡಾ.ಜಾಜಿ ದೇವೆಂದ್ರಪ್ಪ ಎನ್ನುವವರಿಗೆ ಪ್ರಾಚಾರ್ಯರ ಹುದ್ದೆ ಪ್ರಭಾರ ವಹಿಸಲಾಗಿದ್ದು, ಅವಸರದಲ್ಲಿ ಖಜಾನೆ ಮತ್ತು ಬ್ಯಾಂಕುಗಳಲ್ಲಿ ಸಹಿ ಬದಲಾವಣೆಯೂ ಆಗಿದ್ದು ಇದು ಶಾಸಕರ ಆದೇಶ ಉಲ್ಲಂಘನೆ ಮತ್ತು ಅಧಿಕಾರದ ಹಕ್ಕು ಚ್ಯುತಿಯಾಗಿದ್ದು, ಈ ಕುರಿತು ಸರಕಾರಕ್ಕೆ ಪತ್ರ ಬರೆಯಲಾಗುತ್ತದೆ. ಪುನಃ ಸಭೆ ನಡೆಸಿ ಕಾಲೇಜು ಶೈಕ್ಷಣಿಕ ವಾತಾವರಣ ಕೆಡದಂತೆ ಕ್ರಮ ವಹಿಸಲಾಗುತ್ತದೆ. ಕಾಲೇಜಿಗೆ ಕೋಟ್ಯಾಂತರ ರೂ.ಗಳ ಅನುದಾನ ಬರುತ್ತಿದ್ದು ಎಲ್ಲರ ವಿಶ್ವಾಸದೊಂದಿಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಕಾಲೇಜಿನಲ್ಲಿ ನಡೆದಿರುವ ಘಟನೆಗಳ ಕುರಿತು ಉನ್ನತ ಶಿಕ್ಷಣ ಸಚಿವರು ಹಾಗೂ ಸರಕಾರ ಗಮನಕ್ಕೆ ತರಲಾಗುತ್ತದೆ. -ಗಾಲಿ ಜನಾರ್ದನರೆಡ್ಡಿ ಶಾಸಕರು ಹಾಗೂ ಅಧ್ಯಕ್ಷರು ಕಾಲೇಜು ಅಭಿವೃದ್ಧಿ ಸಮಿತಿ
ಕೆ.ನಿಂಗಜ್ಜ