ಗಂಗಾವತಿ: ಲಘು ವಿಮಾನವೊಂದು ಜೂ. 10ರ ಶನಿವಾರ ಬೆಳಿಗ್ಗೆ ಗಂಗಾವತಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹಾರಾಟ ನಡೆಸಿದ್ದು, ಇದರಿಂದ ಗ್ರಾಮಸ್ಥರು ಗಾಬರಿಗೊಂಡು ತಾಲೂಕು ಆಡಳಿತ ಅಧಿಕಾರಿಗಳು ಸೇರಿದಂತೆ ಪೊಲೀಸ್ ಇಲಾಖೆಗೆ ಕರೆ ಮಾಡಿ ಮಾಹಿತಿ ಕೇಳುತ್ತಿದ್ದಾರೆ.
ಕಳೆದ 15 ದಿನಗಳಲ್ಲಿ ಇದು ಎರಡನೇ ಲಘು ವಿಮಾನ ಹಾರಾಟ ನಡೆಸಿರುವುದಾಗಿದ್ದು, ಪದೇ ಪದೇ ವಿಮಾನ ಹಾರಾಟ ನಡೆಸಿರುವುದು ಸಾರ್ವಜನಿಕರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಗ್ರಾಮದ ಜನರು ವಿಮಾನ ಹಾರಾಟದ ಕುರಿತು ತಾಲೂಕು ಆಡಳಿತದ ತಹಶೀಲ್ದಾರ್, ಡಿವೈಎಸ್ ಪಿ, ಸರ್ವೇ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಕೇಳುತ್ತಿರುವುದು ಕಂಡು ಬಂದಿದೆ.
ವಿಮಾನ ಹಾರಾಟದ ಕುರಿತು ಉದಯವಾಣಿ ಪ್ರತಿನಿಧಿ, ತಹಶೀಲ್ದಾರ್ ಮಂಜುನಾಥ ಸ್ವಾಮಿ ಅವರನ್ನು ಸಂಪರ್ಕಿಸಿದಾಗ, ರಾಜ್ಯ ಮತ್ತು ಕೇಂದ್ರ ಸರ್ವೇ ಇಲಾಖೆಯವರು ಇಡೀ ರಾಜ್ಯದಲ್ಲಿ ರಸ್ತೆಗಳನ್ನು ಲಘು ವಿಮಾನದ ಮೂಲಕ ಸರ್ವೇ ಮಾಡಿ ದಾಖಲಾತಿ ಸಿದ್ದಪಡಿಸುತ್ತಿದ್ದು, ನಂತರ ಗ್ರಾಮೀಣ ಮತ್ತು ನಗರದಲ್ಲಿ ಸಾರ್ವಜನಿಕರ ಸಭೆ ನಡೆಸಿ ರಸ್ತೆಯ ಗಡಿ ಗುರುತಿಸುವ ಕಾರ್ಯ ಮಾಡಲಾಗುತ್ತದೆ. ಸಾರ್ವಜನಿಕರು ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ. ಸರ್ವೇ ಕಾರ್ಯಕ್ಕಾಗಿ ಲಘುವಿಮಾನ ಹಾರಾಟ ನಡೆಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇಡೀ ಜಿಲ್ಲೆಯಲ್ಲಿ ಮಗಾಣಿ, ಗ್ರಾಮೀಣ, ತಾಲೂಕು, ಜಿಲ್ಲಾ, ರಾಷ್ಟ್ರೀಯ ಹೆದ್ದಾರಿ ರಸ್ತೆಗಳ ಒತ್ತುವರಿ ಹಾಗೂ ಗಡಿ ಗುರುತಿಸಲು ಸರ್ವೇ ಕಾರ್ಯವನ್ನು ಲಘು ವಿಮಾನದ ಮೂಲಕ ಮಾಡಲಾಗುತ್ತಿದೆ. ಈಗಾಗಲೇ ಶೇ.50 ರಷ್ಟು ಕಾರ್ಯ ಮುಗಿದಿದ್ದು, ಮೊದಲು ಡ್ರೋಣ್ ಕ್ಯಾಮರಾದ ಮೂಲಕ ಸರ್ವೇ ನಡೆಸಲಾಗಿದೆ. ಈಗ ಮತ್ತೇ ಲಘು ವಿಮಾನ ವಿಮಾನದ ಮೂಲಕ ಡಿಜಿಟಲ್ ನಕ್ಷೆ ತಯಾರಿಸುವ ಕಾರ್ಯ ನಡೆದಿದೆ. -ರಾಜಶೇಖರ, ಎಡಿಎಲ್ ಆರ್ ಗಂಗಾವತಿ