Advertisement

ಕಿರಿದಾಗುತ್ತಿದೆ ಜ್ಯೂನಿಯರ್‌ ಕಾಲೇಜು ಮೈದಾನ

03:45 PM Dec 17, 2018 | Team Udayavani |

ಗಂಗಾವತಿ: ನಗರದ ಹಳೆಯ ವಿದ್ಯಾಸಂಸ್ಥೆಗಳಲ್ಲಿ ಸರಕಾರಿ ಜ್ಯೂನಿಯರ್‌ ಕಾಲೇಜು ಸಹ ಒಂದು. 1950ರಲ್ಲಿ ತಾಲೂಕಿನಲ್ಲಿದ್ದ ಏಕೈಕ ಸರಕಾರಿ ಪ್ರೌಢಶಾಲೆ ಎಂಬ ಹೆಗ್ಗಳಿಕೆ ಕೂಡ ಇದಕ್ಕಿದೆ. ನಂತರ ಸರಕಾರ ಪ್ರೌಢಶಾಲೆಯನ್ನು ಪಪೂ ಕಾಲೇಜನ್ನಾಗಿ ಪರಿವರ್ತಿಸಿತು.

Advertisement

ಅಖಂಡ ರಾಯಚೂರು ಜಿಲ್ಲೆ, ಕೊಪ್ಪಳ ಜಿಲ್ಲೆಗಳಲ್ಲಿಯೇ ಗಂಗಾವತಿ ಜೂನಿಯರ್‌ ಕಾಲೇಜು ಅತ್ಯುತ್ತಮ ಫಲಿತಾಂಶಕ್ಕೆ ಪ್ರಸಿದ್ಧಿಯಾಗಿತ್ತು. ಶಾಲೆಯ ಆರಂಭದಲ್ಲಿ ಸರಕಾರ ಇಲ್ಲಿಯ ಒಟ್ಟು 13 ಎಕರೆ ಪ್ರದೇಶವನ್ನು ಜೂನಿಯರ್‌ ಕಾಲೇಜಿಗಾಗಿ ಮೀಸಲಿಟ್ಟಿತ್ತು. ನಗರಕ್ಕೆ ಕೆಇಬಿ ಮಂಜೂರಿಯಾದ ನಂತರ ಅದಕ್ಕೆ 6 ಎಕರೆ ಭೂಮಿಯನ್ನು ಬಿಟ್ಟು ಕೊಡಲಾಯಿತು. ಲೋಕೋಪಯೋಗಿ ಇಲಾಖೆ ಸಿಬ್ಬಂದಿ ವಸತಿ ಗೃಹಗಳು, ಪಿಎಲ್‌ಡಿ ಬ್ಯಾಂಕ್‌, ಎಂಎನ್‌ಎಂ ಬಾಲಕಿಯರ ಪದವಿಪೂರ್ವ ಕಾಲೇಜು ಮತ್ತು ಕ್ಷೇತ್ರ ಶಿಕ್ಷಣ ಇಲಾಖೆ ಕಟ್ಟಡ, ಉರ್ದು ಶಾಲೆ ನಿರ್ಮಿಸಲು ಸ್ಥಳೀಯವಾಗಿ ಕಚೇರಿಗಳಿಗೆ ಭೂಮಿ ಹಂಚಿಕೆ ಮಾಡಲಾಯಿತು. ಹಲವು ಕಟ್ಟಡಗಳಿಗೆ ಜೂನಿಯರ್‌ ಕಾಲೇಜಿನ ಜಾಗವನ್ನು ಹಂಚಿಕೆ ಮಾಡಿದ್ದರಿಂದ ಈಗ 4.28 ಎಕರೆ ಮಾತ್ರ ಉಳಿದಿದೆ.

ಈಗ ಗೃಹ ರಕ್ಷಕರ ಕಟ್ಟಡ ಮತ್ತು ಆದರ್ಶ ನವೋದಯ ವಸತಿ ಶಾಲೆ ನಿರ್ಮಾಣಕ್ಕೆ ನಿವೇಶನ ಹಂಚಿಕೆ ಮಾಡಲಾಗಿದ್ದು, ಮೈದಾನ ಇನ್ನಷ್ಟು ಕಿರಿದಾಗುತ್ತಿದೆ. ಶಾಲೆಯ ಮತ್ತು ನಗರದ ಮಕ್ಕಳಿಗೆ ಆಟವಾಡಲು ಮೈದಾನವೇ ಇಲ್ಲದಂತಾಗುತ್ತಿದೆ.

ನಗರದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮಗಳಿಗೂ ಜೂನಿಯರ್‌ ಕಾಲೇಜು ಮೈದಾನ ಸೂಕ್ತವಾಗಿದ್ದು, ಇಲ್ಲಿ ಏರ್ಪಡಿಸುವ ಕಾರ್ಯಕ್ರಮಕ್ಕೆ ಇಡೀ ನಗರದ ಜನತೆಗೆ ಅನುಕೂಲವಾಗುತ್ತದೆ. ಆದ್ದರಿಂದ ಸಂಘಟಕರು ಇಲ್ಲಿ ಕಾರ್ಯಕ್ರಮ ಆಯೋಜಿಸಲು ಆಸಕ್ತಿ ತೋರುತ್ತಾರೆ. ಈಗಾಗಲೇ ಹಲವು ಕಟ್ಟಡಗಳ ನಿರ್ಮಾಣದಿಂದ ಚಿಕ್ಕದಾಗಿರುವ ಮೈದಾನದಲ್ಲಿ ಈ ಹಿಂದೆ ವಿವಿಧ ಸಮಾಜಗಳಿಗೆ ಗುಡ್ಡದ ಪಕ್ಕದಲ್ಲಿ ನಿವೇಶನ ಮಂಜೂರು ಮಾಡಿದ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘಟನೆಗಳು ಹಾಗೂ ಸಂಘ ಸಂಸ್ಥೆಯವರು ವಿರೋಧಿಸಿದ್ದರಿಂದ ನಿವೇಶನ ಮಂಜೂರು ಮಾಡಿದ್ದನ್ನು ರದ್ದು ಮಾಡಲಾಗಿತ್ತು.

ಪ್ರಸ್ತುತ ಬಯಲು ರಂಗ ಮಂದಿರದಲ್ಲಿ ಕಾರ್ಯನಿರ್ವಹಿಸುತ್ತಿರುವ ಗೃಹರಕ್ಷಕ ಘಟಕ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸರಕಾರ 13 ಲಕ್ಷ ರೂ. ಮಂಜೂರು ಮಾಡಿದೆ. ನಿವೇಶನ ಇಲ್ಲದ ಕಾರಣ ಕಾಮಗಾರಿ ವಿಳಂಬವಾಗಿತ್ತು. ಇದೀಗ ಜೂನಿಯರ್‌ ಕಾಲೇಜು ಮೈದಾನದಲ್ಲಿ ಕಟ್ಟಡ ನಿರ್ಮಾಣಕ್ಕೆ ನಗರಸಭೆ ಅಭಿಯಂತರರು ಸ್ಥಳ ಗುರುತು ಮಾಡಿದ್ದು, ಮೈದಾನದಲ್ಲಿ ಮತ್ತೊಂದು  ಕಟ್ಟಡ ತಲೆ ಎತ್ತಲಿದೆ. ಉರ್ದು ಶಾಲೆಯ ಮುಂದಿರುವ ಜಾಗದಲ್ಲಿ ಆದರ್ಶ ನವೋದಯ ಕಟ್ಟಡ ನಿರ್ಮಿಸಲು ಸ್ಥಳ ನಿಗದಿ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ದೊರೆಯಲಿದೆ.

Advertisement

ಕ್ರೀಡಾ ಚಟುವಟಿಕೆಗೆ ಜಾಗವಿಲ್ಲದಂತಾಗಿದೆ
ನಗರಕ್ಕೆ ಸಾರ್ವಜನಿಕ ಮೈದಾನ ಪ್ರಮುಖವಾಗಿ ಬೇಕಾಗಿದ್ದು, ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಹಲವು ಸರಕಾರಿ ಕಟ್ಟಡ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಅವಕಾಶ ಕಲ್ಪಿಸುವ ಮೂಲಕ ಕ್ರೀಡಾ ಚಟುವಟಿಕೆಗಳಿಗೆ ಜಾಗವಿಲ್ಲದಂತೆ ಮಾಡಲಾಗುತ್ತಿದೆ. ಇದಕ್ಕೆ ಪರೋಕ್ಷವಾಗಿ ಜಿಲ್ಲಾಡಳಿತ ಬೆಂಬಲ ನೀಡುತ್ತಿದೆ. ಆನೆಗೊಂದಿ ರಸ್ತೆಯ ಸರ್ವೇ ನಂ. 53ರಲ್ಲಿ  ಕಷ್ಟು ಸರಕಾರಿ ಜಾಗವಿದ್ದರೂ ಅಲ್ಲಿ ಸರಕಾರಿ ಕಟ್ಟಡ ನಿರ್ಮಿಸದೇ ಇರುವ ಒಂದು ಮೈದಾನದಲ್ಲಿ ಕಟ್ಟಡಗಳನ್ನು ನಿರ್ಮಿಸುವ ಮೂಲಕ ಕಾಂಕ್ರೀಟ್‌ ಕಾಡು ನಿರ್ಮಿಸಲಾಗುತ್ತಿದೆ.

ಸರಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಸರಕಾರಿ ಕಟ್ಟಡ ನಿರ್ಮಿಸಲು ಹೊರಟಿರುವ ಜನಪ್ರತಿನಿಧಿಗಳ ಕ್ರಮ ಖಂಡನೀಯ. ಆಟವಾಡಲು ಮೈದಾನದ ಅವಶ್ಯವಿದ್ದು, ಕನಕಗಿರಿ ರಸ್ತೆಯಲ್ಲಿರುವ ತಾಲೂಕು ಕ್ರೀಡಾಂಗಣ ಮಕ್ಕಳಿಗೆ ದೂರವಾಗುತ್ತದೆ. ಆದ್ದರಿಂದ ಜಿಲ್ಲಾಡಳಿತ ಜೂನಿಯರ್‌ ಕಾಲೇಜು ಮೈದಾನದಲ್ಲಿ ಯಾವುದೇ ಕಟ್ಟಡ ನಿರ್ಮಿಸಲು ಅವಕಾಶ ನೀಡಬಾರದು. ಒಂದು ವೇಳೆ ಕಟ್ಟಡ ನಿರ್ಮಿಸಲು ಮುಂದಾದರೆ ವಿದ್ಯಾರ್ಥಿಗಳು ಮತ್ತು ಕ್ರೀಡಾಪಟುಗಳ ಜತೆ ಸೇರಿ ಎಸ್‌ಎಫ್‌ಐ ಹೋರಾಟ ನಡೆಸಲಿದೆ.
ಅಮರೇಶ ಕಡಗದ, ಎಸ್‌ಎಫ್‌ಐ ಮುಖಂಡ 

„ಕೆ. ನಿಂಗಜ್ಜ 

Advertisement

Udayavani is now on Telegram. Click here to join our channel and stay updated with the latest news.

Next