ಗಂಗಾವತಿ: ವಿಶ್ವಾದ್ಯಂತ ಕೊರೊನಾ ವೈರಸ್ ಭೀತಿಯಿಂದ ಸ್ವಚ್ಚತೆಗೆ ಮೊದಲ ಆದ್ಯತೆ ನೀಡಲಾಗಿದೆ. ಆದರೆ ಗಂಗಾವತಿ ನಗರದ ಮಾಂಸ ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಅಶುದ್ಧತೆ ಎದ್ದು ಕಾಣುತ್ತಿದೆ. ಮಾಂಸ ಮಾರುಕಟ್ಟೆಯಲ್ಲಿ ಚರ್ಮ, ಕೊಂಬು, ರಕ್ತದಿಂದ ಇಲ್ಲಿಯ ಚರಂಡಿಗಳು ತುಂಬಿವೆ.
ಕೋಳಿ ಪುಕ್ಕಗಳು ಎಲ್ಲೆಂದರಲ್ಲಿ ಬಿದ್ದಿದ್ದು, ಇಡೀ ವಾತಾವರಣ ದುರ್ವಾಸನೆಯಿಂದ ಕೂಡಿದೆ. ಮಾಂಸದ ಮಾರುಕಟ್ಟೆಯಲ್ಲಿನ ನೊಣ ಮತ್ತು ಸೊಳ್ಳೆಗಳು ಪಕ್ಕದ ತರಕಾರಿ ಮಾರುಕಟ್ಟೆಯಲ್ಲಿನ ತರಕಾತಿ ಮೇಲೆ ಕುಳಿತು ಹೊಲಸು ಮಾಡುತ್ತಿವೆ. ಮಾಂಸ ಮತ್ತು ತರಕಾರಿ ಮಾರ್ಕೆಟ್ ಮಧ್ಯದ ಖಾಲಿ ಜಾಗದಲ್ಲಿ ಮಾಂಸದಂಗಡಿ ತ್ಯಾಜ್ಯ, ಕೋಳಿ ಪುಕ್ಕ, ಕೊಳೆತ ತರಕಾರಿ, ಹಣ್ಣುಗಳನ್ನು ವ್ಯಾಪಾರಿಗಳು ತಂದು ಹಾಕುತ್ತಿದ್ದಾರೆ. ಈ ಮಧ್ಯೆ ನಗರಸಭೆಯವರು ಇಲ್ಲಿ ಕಸ ಹಾಕುತ್ತಿರುವುದರಿಂದ ಪರಿಸರ ಇನ್ನಷ್ಟು ಹದಗೆಟ್ಟಿದೆ. ನಗರದ ಮಧ್ಯೆದಲ್ಲಿ ಹರಿಯುವ ದುರುಗಮ್ಮನಹಳ್ಳವನ್ನು ಸರ್ಕಾರಿ ಅನುದಾನ ಮತ್ತು ಸಾರ್ವಜನಿಕರ ವಂತಿಗೆ ಬಳಸಿ ಮೂರು ತಿಂಗಳ ಹಿಂದೆ ಸ್ವತ್ಛತೆ ಮಾಡಲಾಗಿತ್ತು.
ಈಗ ಪುನಃ ಅಕ್ಕಪಕ್ಕದವರು, ಮಾಂಸ, ತರಕಾರಿ ವ್ಯಾಪಾರಿಗಳು ತ್ಯಾಜ್ಯವನ್ನು ಹಳ್ಳಕ್ಕೆ ಸುರಿಯುತ್ತಿರುವುದರಿಂದ ಮಲೀನವಾಗಿದೆ. ಕೊರನಾ ವೈರಸ್ ಭೀತಿ ಮಧ್ಯೆ ಹಕ್ಕಿ ಜ್ವರ, ಡೆಂಘೀ ಜ್ವರ ಹರಡುತ್ತಿದ್ದು, ನಗರಸಭೆ ಸ್ವಚ್ಚತೆಗೆ ಆದ್ಯತೆ ಕೊಡುತ್ತಿಲ್ಲ. ನಗರದ ಬಹುತೇಕ ವಾರ್ಡ್, ರಸ್ತೆಗಳು ಧೂಳು ಮತ್ತು ಕಸದಿಂದ ಕೂಡಿವೆ. ಆರೋಗ್ಯ ದೃಷ್ಟಿಯಿಂದ ನಗರಸಭೆಯ ನಿರ್ಲಕ್ಷ್ಯ ಜನರಿಗೆ ಶಾಪವಾಗಿ ಪರಿಣಮಿಸಿದೆ.
ಪೌರಕಾರ್ಮಿಕರ ಕೊರತೆ ಮತ್ತು ಕೆಲಸದ ಒತ್ತಡದಿಂದ ರಸ್ತೆ ಮತ್ತು ಸ್ವಚ್ಛತಾ ಕಾರ್ಯ ವಿಳಂಬವಾ ಗುತ್ತಿದೆ. ಮಾಂಸ ಮತ್ತು ತರಕಾರಿ ಮಾರ್ಕೆಟ್‌ನಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಗಾಂಧಿ ವೃತ್ತದ ಬಳಿ ಹಾಕಿರುವ ಕಸವನ್ನು ಕೂಡಲೇ ಬೇರೆಡೆಗೆ ಸಾಗಿಸಲಾಗುತ್ತದೆ. ಸ್ವಚ್ಛತೆ ಕಾಪಾಡದ ವ್ಯಾಪಾರಿಗಳಿಗೆ ನೋಟಿಸ್ ನೀಡಿ ಪರವಾನಗಿ ರದ್ದುಪಡಿಸಲಾಗುತ್ತದೆ.
ಶೇಖರಪ್ಪ, ಪೌರಾಯುಕ್ತ
ಕೆ.ನಿಂಗಜ್ಜ