ಗಂಗಾವತಿ: ಆನೆಗೊಂದಿಯ ಯುವಕನನ್ನು ಬಲಿ ಪಡೆದ ಮತ್ತು ವಿವಿಧ ಗ್ರಾಮಗಳ ಹಲವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಚಿರತೆ ಹಾಗೂ ಕರಡಿಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕ್ರಮಕೈಗೊಂಡಿದ್ದು ಸ್ಥಳಕ್ಕೆ ಅರಣ್ಯ ಇಲಾಖೆಯ ಪ್ರಾದೇಶಿಕ ಬಳ್ಳಾರಿ ವಲಯ ಅಧಿಕಾರಿ ಲಿಂಗರಾಜ ನೇತೃತ್ವದಲ್ಲಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ.
ಆನೆಗೊಂದಿ ಅಂಜನಾದ್ರಿ ಮಲ್ಲಾಪೂರ ಸಾಣಾಪೂರ ಜಂಗ್ಲಿ ರಂಗಾಪೂರ ಭಾಗದ ಬೆಟ್ಟ ಪ್ರದೇಶಗಳ ಆಯ್ದ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಡ್ರೋಣ್ ಕ್ಯಾಮರಾ ಮೂಲಕ ಗುಡ್ಡದ ಗವಿಯಲ್ಲಿ ಅಡಗಿ ಕುಳಿತಿರುವ ಚಿರತೆ ಕರಡಿಗಳನ್ನು ಪತ್ತೆ ಮಾಡಲಾಗುತ್ತಿದೆ.
ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ಗಸ್ತುಕಾರ್ಯ ಮಾಡಲಾಗುತ್ತಿದೆ. ಆದಿಶಕ್ತಿ ದೇಗುಲ ಪಂಪಾಸರೋವರ ಅಂಜನಾದ್ರಿ ಬೆಟ್ಟ ಸೇರಿ ಕಾಡುಪ್ರಾಣಿಗಳ ಉಪಟಳ ಇರುವ ಸ್ಥಳದಲ್ಲಿ ಬೋನುಗಳನ್ನು ಇರಿಸಲಾಗಿದೆ. ರಾತ್ರಿ ವೇಳೆ ಸಂಚಾರ ಮಾಡದಂತೆ ಆನೆಗೊಂದಿ ಹಳೆಯಮಂಡಲದ ಗ್ರಾಮಗಳ ಜನರಿಗೆ ಸೂಚನೆ ನೀಡಲಾಗಿದೆ.
ಮತ್ತೆ ಚಿರತೆ ಪ್ರತ್ಯಕ್ಷ: ಆನೆಗೊಂದಿ ಆದಿಶಕ್ತಿ ದೇಗುಲದ ಹಿಂಭಾಗದಲ್ಲಿ ಗುರುವಾರ ಯುವಕನೊರ್ವನನ್ನು ಚಿರತೆ ಕೊಂದು ಹಾಕಿದ ಬಳಿಕ ಪಂಪಾಸರೋವರ ಜಂಗ್ಲಿ ರಂಗಾಪೂರ, ಹನುಮನಹಳ್ಳಿ ಬೆಟ್ಟದಲ್ಲಿ ಗುರುವಾರ ಸಂಜೆ ಕರಡಿ ಹಾಗೂ ಚಿರತೆಗಳು ಪ್ರತ್ಯಕ್ಷವಾಗಿದ್ದು ಜನರಲ್ಲಿ ಭಯವುಂಟು ಮಾಡಿದೆ.