ಗಂಗಾವತಿ: ನಗರದ ಜನರಿಗೆ ಪೂರೈಕೆಯಾಗುವ 24*7 ಯೋಜನೆಯ ಶುದ್ದ ಕುಡಿಯುವ ನೀರಿನ ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿ ಚರಂಡಿ ಪಾಲಾಗುತ್ತಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ 1 ನೇ ವಾರ್ಡ್ ಪಂಪಾನಗರ ಸಿದ್ದಿಕೇರಿ ಮುಖ್ಯ ರಸ್ತೆಯಲ್ಲಿ 1 ರಿಂದ 5 ವಾರ್ಡ್ ಗಳಿಗೆ ನೀರು ಪೂರೈಕೆ ಮಾಡಲು ಪೈಪ್ ಲೈನ್ ಹಾಕಲಾಗಿದೆ.
ನಗರಕ್ಕೆ 24*7 ಯೋಜನೆಯ 4 ನೇ ಹಂತ ಈಗಾಗಲೇ ಅನುಷ್ಠಾನವಾಗಿದ್ದು ತುಂಗಭದ್ರ ನದಿಯಿಂದ ನೀರನ್ನು ಶುದ್ಧೀಕರಿಸಿ ನಗರದ ಜನತೆಗೆ ಕುಡಿಯಲು ಪೂರೈಸಲಾಗುತ್ತಿದೆ.
ಈ ಮಧ್ಯೆ ಕಳೆದ ಒಂದು ವರ್ಷದ ಹಿಂದೆ ಈ ಯೋಜನೆಯನ್ನು ನಗರಸಭೆಗೆ ವಹಿಸಲಾಗಿದ್ದು ಅಲ್ಲಲ್ಲಿ ಪೈಪ್ ಲೈನ್ ಒಡೆಯುವ ಪ್ರಕರಣಗಳು ಕಂಡು ಬರುತ್ತಿದೆ.
ಶನಿವಾರ ಬೆಳಗ್ಗೆ ಶುದ್ಧ ನೀರಿನ ನೀರನ್ನು ಬಿಟ್ಟ ಸಂದರ್ಭದಲ್ಲಿ ಪಂಪಾನಗರ ಪ್ರವೇಶ ರಸ್ತೆಯಲ್ಲಿ ಬೃಹತ್ ಪೈಪ್ ಒಡೆದು ಅಪಾರ ಪ್ರಮಾಣದ ನೀರು ರಸ್ತೆಯ ಮೇಲೆ ಹರಿಯುವ ದೃಶ್ಯ ಕಂಡು ಬಂದಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಒಡೆದ ಪೈಪ್ ದುರಸ್ಥಿಗೊಳಿಸಿ ನೀರು ಪೋಲಾಗದಂತೆ ತಡೆಯುವಂತೆ ಒತ್ತಾಯಿಸಿದ್ದಾರೆ.