ಗಂಗಾವತಿ: ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಮೇ 25ರಂದು ನಿಗದಿಯಾಗಿದ್ದು, ಅಧ್ಯಕ್ಷರ ಹುದ್ದೆಗೆ ಅವಿರೋಧ ಆಯ್ಕೆ ನಡೆಸಲು ಸಹಕಾರಿ ಮುಖಂಡರು ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ.
ಮೂರು ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಂದ 12 ಜನ ಹಾಗೂ ಬೆಂಗಳೂರು ಕೆಎಂಎಫ್‌ನ ಎಂಡಿ, ಸಹಕಾರಿ ಇಲಾಖೆಯ ಜಂಟಿ ನಿರ್ದೇಶಕರು ಮತ್ತು ಪಶುಸಂಗೋಪನಾ ಇಲಾಖೆಯ ಒಬ್ಬ ಅಧಿಕಾರಿ ಸೇರಿ ಒಟ್ಟು 15 ಜನ ನಿರ್ದೇಶಕರು ಅಧ್ಯಕ್ಷ -ಉಪಾಧ್ಯಕ್ಷರ ಚುನಾವಣೆಯಲ್ಲಿ ಮತ ಚಲಾವಣೆಯ ಅಧಿಕಾರ ಪಡೆದಿರುತ್ತಾರೆ. ಈ ಭಾರಿಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಲು ಸಹಕಾರಿ ಧುರೀಣರು ಮೂರು ಜಿಲ್ಲೆಯ ಜನಪ್ರತಿನಿಧಿಗಳು ಬಹುತೇಕ ನಿರ್ಧಾರ ಮಾಡಿದ್ದು, ಪ್ರತಿ ಜಿಲ್ಲೆಗೆ 20 ತಿಂಗಳ ಅವಧಿಯಂತೆ ಹಂಚಿಕೆ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಹಗರಿಬೊಮ್ಮನಹಳ್ಳಿ ಶಾಸಕ ಎಂ. ಭೀಮಾನಾಯ್ಕ ಅವರನ್ನು ಕೆಎಂಎಫ್ ರಾಜ್ಯ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡಲು ತೀರ್ಮಾನವಾಗಿದೆ.
ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತುತ ಕೊಪ್ಪಳ ಜಿಲ್ಲೆಯಿಂದ ಮರಿವಾಡ ಸತ್ಯನಾರಾಯಣ, ವೆಂಕನಗೌಡ ಹಿರೇಗೌಡರ್, ರಾಯಚೂರಿನಿಂದ ಜಿ. ಸತ್ಯನಾರಾಯಣ, ಬಳ್ಳಾರಿ ಜಿಲ್ಲೆಯಿಂದ ಮರುಳುಸಿದ್ಧನಗೌಡ ಅವರ ಹೆಸರು ಕೇಳಿ ಬರುತ್ತಿದೆ. ಮೊದಲ ಅವಧಿಯಲ್ಲಿ ತಾವೇ ಅಧ್ಯಕ್ಷರಾಗಬೇಕೆಂದು ಬಹುತೇಕರು ಪಟ್ಟುಹಿಡಿದಿದ್ದಾರೆ. ಮೂರು ಜಿಲ್ಲೆಯ ಶಾಸಕರು, ಸಂಸದರು ಮತ್ತು ಸಚಿವರು ಆಯಾ ಜಿಲ್ಲೆಗೆ ಅಧ್ಯಕ್ಷ ಸ್ಥಾನ ಸಿಗಲಿ ಎಂಬ ಲಾಭಿ ನಡೆಸುತ್ತಿದ್ದಾರೆ.
ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಹಾಲು ಉತ್ಪಾದಕ ಒಕ್ಕೂಟ ವ್ಯಾಪ್ತಿಯ ಪ್ರತಿ ಸಹಕಾರಿ ಸಂಘಗಳಿಗೂ ತಮ್ಮ 2012ರ ಅವಧಿಯಲ್ಲಿ ಅತ್ಯುತ್ತಮ ಕೆಲಸ ಮಾಡಲಾಗಿದೆ. ರೈತರ ಕಲ್ಯಾಣ ನಿಧಿ ಸ್ಥಾಪನೆ ಮಾಡಿ ಹಾಲು ಉತ್ಪಾದಕರ ಸಂಘದ ಸದಸ್ಯರು ಆಕಸ್ಮಿಕ ಮರಣ ಹೊಂದಿದರೆ 10 ಸಾವಿರ ಕಾರ್ಯದರ್ಶಿ ಆಕಸ್ಮಿಕ ಮರಣ ಹೊಂದಿದರೆ 1 ಲಕ್ಷ ರೂ. ಪರಿಹಾರ. ಸಂಘದ ಸದಸ್ಯರ ಮಕ್ಕಳು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದರೆ 10 ಮತ್ತು 15 ಸಾವಿರ ಪ್ರೋತ್ಸಾಹ ಧನ ನೀಡುವ ಯೋಜನೆ ಆರಂಭಿಸಲಾಗಿದೆ. ಬೂದಗುಂಪಾ ಹತ್ತಿರ 40 ಕೋಟಿ ರೂ. ವೆಚ್ಚದಲ್ಲಿ ಹಾಲನ್ನು ಪ್ಯಾಕ್ ಮಾಡುವ ಡೈರಿ ಘಟಕ ಸ್ಥಾಪನೆ ಮಾಡಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಕ್ಷೇತ್ರಾಭಿವೃದ್ಧಿ ಯೋಜನೆಯಲ್ಲಿ 30 ಲಕ್ಷ ಸಾಲ ಪಡೆದು ಹಾಲು ಉತ್ಪಾದಕರ ಸಂಘಗಳ ತೂಕದ ಯಂತ್ರ ಮತ್ತು ಕಟ್ಟಡ ದುರಸ್ತಿ ಮಾಡಲಾಗಿದೆ. ಮತ್ತೂಮ್ಮೆ ತಮಗೆ ಅಧ್ಯಕ್ಷ ಸ್ಥಾನ ಲಭಿಸಿದರೆ ಇನ್ನಷ್ಟು ಯೋಜನೆ ಅನುಷ್ಠಾನ ಮಾಡಿ ರಾಜ್ಯದಲ್ಲೇ ಬಳ್ಳಾರಿ ಒಕ್ಕೂಟವನ್ನು ಮಾದರಿ ಮತ್ತು ಲಾಭದಾಯಕ ಮಾಡಲಾಗುತ್ತದೆ.
•
ಮರಿವಾಡ ಸತ್ಯನಾರಾಯಣ,
ಮಾಜಿ ಅಧ್ಯಕ್ಷರು ರಾಬಕೊ ಹಾಲು ಒಕ್ಕೂಟ
ಕೆ. ನಿಂಗಜ್ಜ