ಗಂಗಾವತಿ: ನಗರದ ಕಬರಸ್ತಾನ್ ಹತ್ತಿರ ಇರುವ ರಾಜಕಾಲುವೆಯನ್ನು ಒತ್ತುವರಿ ಮಾಡಿ ನಿರ್ಮಿಸಲಾಗುತ್ತಿದ್ದ ಶಾಪಿಂಗ್ ಕಾಂಪ್ಲೆಕ್ಸ್ ನ್ನು ನಗರಸಭೆಯವರು ನೆಲಸಮ ಮಾಡಿದ್ದಾರೆ.
ಸಿಬಿಎಸ್ ಗಂಜ್ ಬನ್ನಿಗಿಡ ಕ್ಯಾಂಪ್ ಇಸ್ಲಾಂಪುರ ಭಾಗದಿಂದ ಹೋಗುತ್ತಿದ್ದ ರಾಜಕಾಲುವೆ ಮೇಲೆ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗುತ್ತಿತ್ತು. ಈ ಕುರಿತು ಸ್ಥಳೀಯರು ನಗರಸಭೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ನಿರ್ಮಾಣ ಹಂತದ ಅಕ್ರಮ ಕಾಮಗಾರಿಯನ್ನು ನಗರಸಭೆಯವರು ಜೆಸಿಬಿ ಬಳಕೆ ಮಾಡಿ ಪಿಲ್ಲರ್ ಹಾಗೂ ಸ್ಲ್ಯಾಬನ್ನು ಕೆಡವಿ ಹಾಕಿದ್ದಾರೆ.
ಈಗಾಗಲೇ ಇಲ್ಲಿಯ ರಾಜಕಾಲುವೆಯನ್ನು ಒತ್ತುವರಿ ಮಾಡಿ ಹಲವು ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ರಸ್ತೆಯ ಎಡಬಲದಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಅಕ್ರಮ ಕಟ್ಟಡಗಳು ಕಳೆದ ಹತ್ತು ವರ್ಷಗಳಿಂದ ರಾಜಕಾಲುವೆಯ ಮೇಲೆ ನಿರ್ಮಿಸಲಾಗಿದೆ.
ಇದನ್ನೂ ಓದಿ:ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಆಪ್ತ ಸೊಮು ನ್ಯಾಮಗೌಡ ಮತ್ತೆ ಸಿಬಿಐ ವಶಕ್ಕೆ
ಕಾಲುವೆ ಒತ್ತುವರಿಯಿಂದ ಮಳೆಗಾಲದಲ್ಲಿ ನೀರು ಬನ್ನಿಗಿಡ ಕ್ಯಾಂಪ್ ಮತ್ತು ಕಬರಸ್ಥಾನಕ್ಕೆ ನುಗ್ಗುವುದರಿಂದ ಹೆಚ್ಚಿನ ಅನಾಹುತ ಸಂಭವಿಸುತ್ತಿದೆ. ಈ ಮಧ್ಯೆ ಕಳೆದ ಹತ್ತು ವರ್ಷಗಳ ಹಿಂದೆ ರಸ್ತೆಯ ಎಡ ಬಲ ಭಾಗದಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಿದ್ದು ಇದುವರೆಗೂ ನಗರ ಸಭೆಯವರು ನಿರ್ಲಕ್ಷ್ಯ ತೋರಿದ್ದರು. ಈಗ ಸ್ಥಳೀಯರು ನೀಡಿದ ದೂರಿನ ಅನ್ವಯ ಖಬರಸ್ಥಾನದ ರಾಜಕಾಲುವೆಯ ಮೇಲಿನ ಅಕ್ರಮ ಮಳಿಗೆ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ನಗರದ 35 ವಾರ್ಡ್ ಗಳಲ್ಲಿ ಚರಂಡಿ ಮತ್ತು ಪ್ರಮುಖ ರಾಜಕಾಲುವೆಗಳ ಮೇಲೆ ಅಕ್ರಮ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಅಕ್ರಮ ಕಟ್ಟಡಗಳ ಪತ್ತೆ ಕಾರ್ಯ ಮಾಡಿ ನೆಲಸಮ ಮಾಡಲಾಗುತ್ತದೆ.
ಪ್ರಸ್ತುತ ಶೇ. 50 ರಷ್ಟು ಮಾತ್ರ ನೆಲಸಮ ಮಾಡಲಾಗಿದ್ದು ಉಳಿದ ಅಕ್ರಮ ಕಟ್ಟಡವನ್ನು ನಂತರ ನೆಲಸಮ ಮಾಡಲಾಗುತ್ತದೆ ಎಂದು ಪೌರಾಯುಕ್ತ ಅರವಿಂದ ಜಮಖಂಡಿ ಉದಯವಾಣಿಗೆ ತಿಳಿಸಿದ್ದಾರೆ