ಚಿಂತಾಮಣಿ: ಕೆಲ ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ 17 ಜನರು ಸಾವನ್ನಪ್ಪಿದ ದುರಂತ ಘಟನೆ ಮಾಸುವ ಮುನ್ನವೇ ಚಿಂತಾಮಣಿ ನಗರದ ನಾರಸಿಂಹಪೇಟೆಯ ಗಂಗಮ್ಮ ದೇವಾಲಯದಲ್ಲಿ ಶನಿವಾರ ವಿಷ ಪ್ರಸಾದ ಸೇವಿಸಿ 12 ಮಂದಿ ಅಸ್ವಸ್ಥರಾಗಿ, ಇಬ್ಬರು ಮಹಿಳೆಯರು ಮೃತಪಟ್ಟಿರುವ ಘಟನೆ ಜರುಗಿದೆ.
ಮೃತರನ್ನು ಚಿಂತಾಮಣಿಯ ಶ್ರೀರಾಮನಗರ ಬಡಾವಣೆಯ ನಿವಾಸಿ ಕವಿತಾ (28) ಹಾಗೂ ಸರಸ್ವತಮ್ಮ (56) ಎಂದು ಹೇಳಲಾಗಿದೆ. ಮೃತ ಕವಿತಾರ ಪತಿ ಗಂಗಾಧರ, ಅದೇ ಕುಟುಂಬದ ಗಾನವಿ, ಚರಣ್ ಮತ್ತು ಸಂಬಂಧಿಕರಾದ ರಾಜು, ರಾಧ ಸೇರಿ ಐವರು ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಂತಾಮಣಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಾರಾಯಣಮ್ಮ, ವೆಂಕಟರಮಣಪ್ಪ, ಚೇಳೂರು ಆಸ್ಪತ್ರೆಯಲ್ಲಿ ಶಿವಕುಮಾರ್ ಹಾಗೂ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಜಿಎನ್ ಬಡಾವಣೆಯ ಸುಧಾ, ಕೀರ್ತನಾ ಸಾಯಿ, ಚೇತನಾ ನಾಗಶ್ರೀ ಎಂಬುವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಗಿದ್ದೇನು?: ನಗರದ ನಾರಸಿಂಹಪೇಟೆಯ ಗಂಗಾಭವಾನಿ ದೇವಾಲಯದಲ್ಲಿ ಪ್ರತಿ ಶುಕ್ರವಾರ ದೇವಿಗೆ ವಿಶೇಷ ಪೂಜಾ ಕೈಂಕರ್ಯ ನಡೆಯುವ ಹಿನ್ನೆಲೆಯಲ್ಲಿ ನೂರಾರು ಮಂದಿ ಭಕ್ತರು ಆಗಮಿಸುತ್ತಾರೆ. ಕೆಲ ಭಕ್ತರು ಪ್ರಸಾದ ವಿತರಣೆ ಮಾಡುವುದು ವಾಡಿಕೆ.
ಶುಕ್ರವಾರ ರಾತ್ರಿ 8 ಗಂಟೆ ಸಮಯದಲ್ಲಿ ದೇವಸ್ಥಾನದ ಪಕ್ಕದ ಮನೆಯ ಲಕ್ಷ್ಮೀ ಎಂಬುವರ ಮನೆ ಕೆಲಸದಾಕೆ ಅಮರಾವತಿ ವಿತರಿಸಿದ ಕೇಸರಿಬಾತ್ ಪ್ರಸಾದ ಭಕ್ತರ ಪಾಲಿಗೆ ಕಹಿಯಾಗಿದೆ. ಶ್ರೀರಾಮ ನಗರದ ಒಂದೇ ಕುಟುಂಬದ 7 ಮಂದಿ ಮತ್ತು ಅದೇ ಬಡಾವಣೆಯ ಮತ್ತಿಬ್ಬರು ಅಸ್ವಸ್ಥರಾಗಿದ್ದಾರೆ. ಇವರಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದು ಉಳಿದ 12 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸಾದವನ್ನು ತಾವೇ ಸಿದ್ಧ ಮಾಡಿದ್ದಾಗಿ ಲಕ್ಷ್ಮೀ ಒಪ್ಪಿಕೊಂಡಿದ್ದಾರೆ ಆದರೆ ದುರ್ಘಟನೆ ಹೇಗೆ ಸಂಭವಿಸಿತು ಎಂಬುದು ತಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಮಹಿಳೆ ವಿಚಾರಣೆ: ಪ್ರಕರಣಕ್ಕೆ ಸಂಬಂಧಿಸಿದಂತೆ ಅಮರಾವತಿ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ದೇವಾಲಯದ ಪಕ್ಕದ ನಿವಾಸಿಯೊಬ್ಬರು ಪ್ರತಿವಾರದಂತೆ ಈ ವಾರವೂ ಪ್ರಸಾದ ಮಾಡಿ ಕೊಟ್ಟರು. ನಾನು ಹಂಚುತ್ತಿದ್ದೆ ಎಂದು ತಿಳಿಸಿದ್ದು, ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲವಾದ್ದರಿಂದ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ಪ್ರಸಾದದಲ್ಲಿ ಯಾವುದೇ ವಿಷ ಪದಾರ್ಥವಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಸ್ವಸ್ಥಗೊಂಡವರಿಗೆ ವಿಷ ಆಹಾರ ಸೇವನೆ ಚಿಕಿತ್ಸೆ ನೀಡುತ್ತಿಲ್ಲ. ಬದಲಿಗೆ ಫುಡ್ ಪಾಯಿಸನ್ ಆಗಿ ವಾಂತಿ ಬೇಧಿ ಆಗಿರುವುದರಿಂದ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
– ರಾಮಚಂದ್ರ ರೆಡ್ಡಿ, ತಾಲೂಕು ಆರೋಗ್ಯಾಧಿಕಾರಿ