ಬೆಂಗಳೂರು: ಬಿಬಿಎಂಪಿ ಮೇಯರ್ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಬುಧವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ನಗರ ಶಾಸಕರು ಹಾಗೂ ಪಾಲಿಕೆ ಸದಸ್ಯರ ಸಭೆ ನಡೆಯಲಿದೆ. ಸಭೆಯಲ್ಲಿ ಮೇಯರ್ ಸ್ಥಾನದ ಆಕಾಂಕ್ಷಿಗಳ ಪೈಕಿ ಯಾರನ್ನು ಮೇಯರ್ ಅಭ್ಯರ್ಥಿ ಮಾಡಬೇಕು ಎಂಬುದು ತೀರ್ಮಾನವಾಗಲಿದೆ.
ಸದ್ಯದ ಮಾಹಿತಿಯಂತೆ ಜಯನಗರ ವಾರ್ಡ್‌ನ ಗಂಗಾಬಿಕೆ ಮಲ್ಲಿಕಾರ್ಜುನ್ ಮೇಯರ್ ಅಭ್ಯರ್ಥಿಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹಾಗೂ ನಗರದ ಪ್ರಭಾವಿ ಶಾಸಕ ರಾಮಲಿಂಗಾರೆಡ್ಡಿ ಅವರು ಗಂಗಾಬಿಕೆ ಅವರ ಹೆಸರನ್ನು ಮೇಯರ್ ಸ್ಥಾನಕ್ಕೆ ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಶಾಂತಿನಗರ ವಾರ್ಡ್‌ನ ಸೌಮ್ಯಾ ಶಿವಕುಮಾರ್ ಸಹ ಮೇಯರ್ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಕಳೆದ ಬಾರಿ ಪಕ್ಷದ ನಾಯಕರ ತೀರ್ಮಾನದಂತೆ ಮೇಯರ್ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ಈ ಬಾರಿಯಾದರೂ ಅವಕಾಶ ನೀಡುವಂತೆ ಪಕ್ಷದ ನಾಯಕರ ಮೇಲೆ ಪ್ರಭಾವ ತರುತ್ತಿದ್ದಾರೆ ಎನ್ನಲಾಗಿದ್ದು, ಸೌಮ್ಯಾ ಅವರನ್ನು ಮೇಯರ್ ಅಭ್ಯರ್ಥಿ ಮಾಡಲು ಶಾಂತಿನಗರ ಶಾಸಕ ಎನ್.ಎ.ಹ್ಯಾರೀಸ್ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಉಪಮೇಯರ್ ಆಕಾಂಕ್ಷಿಗಳು 12 ಮಂದಿ!: ಮೇಯರ್ ಸ್ಥಾನದಂತೆ ಉಪಮೇಯರ್ ಸ್ಥಾನಕ್ಕೆ ಜೆಡಿಎಸ್‌ನಲ್ಲಿ ಪೈಪೋಟಿ ಹೆಚ್ಚಾಗಿದ್ದು, ಉಪಮೇಯರ್ ಅಭ್ಯರ್ಥಿ ಆಯ್ಕೆಗೂ ಬುಧವಾರ ಅಥವಾ ಗುರುವಾರ ಸಭೆ ನಡೆಯಲಿದೆ. ಪಾಲಿಕೆಯ 15 ಜೆಡಿಎಸ್ ಸದಸ್ಯರ ಪೈಕಿ ಈಗಾಗಲೆ 3 ಸದಸ್ಯರು ಉಪಮೇಯರ್ ಹುದ್ದೆ ಪಡದಿದ್ದಾರೆ. ಇದೀಗ ಉಪಮೇಯರ್ ಹುದ್ದೆಗೆ ಮೀಸಲಾತಿ ಸಾಮಾನ್ಯವಾಗಿದ್ದು, 12 ಸದಸ್ಯರೂ ಈ ಬಾರಿ ತಮಗೆ ಉಪಮೇಯರ್ ಸ್ಥಾನ ಪಡೆಯಲು ಲಾಬಿ ನಡೆಸುತ್ತಿದ್ದಾರೆ.