Advertisement

ಕಾಲಮಿತಿಯಲ್ಲಿ  ಗಂಗಾಶುದ್ಧೀಕರಣ :ಉಮಾಭಾರತಿ

03:45 AM Jul 10, 2017 | Team Udayavani |

ಉಡುಪಿ: ಗಂಗಾ ಶುದ್ಧೀಕರಣದ ಕೆಲಸ ಒಟ್ಟು 10 ವರ್ಷಗಳದ್ದು. ಕಾಲಮಿತಿಯಲ್ಲಿ ಕಾರ್ಯಗತಗೊಳಿಸಲು ಯೋಜಿಸಲಾಗಿದೆ. ಮೊದಲ ಹಂತದ ಫ‌ಲಿತಾಂಶ ಇದೇ ಬರುವ ಅಕ್ಟೋಬರ್‌ನಲ್ಲಿ ಕಂಡುಬರಲಿದೆ ಎಂದು ಕೇಂದ್ರ ಜಲಸಂಪನ್ಮೂಲ, ಗಂಗಾ ಶುದ್ಧೀಕರಣ ಯೋಜನಾ ಸಚಿವೆ ಉಮಾಶ್ರೀಭಾರತಿ ಹೇಳಿದರು.

Advertisement

ರಾಜಾಂಗಣದಲ್ಲಿ ಗುರುಪೂರ್ಣಿಮೆ ನಿಮಿತ್ತ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜರ್ಮನಿಯಲ್ಲಿ ರಾಯ್ನ, ಲಂಡನ್‌ನ ಥೇಮ್ಸ್‌ ನದಿ ಮಾಲಿನ್ಯಗೊಂಡಿತ್ತು. ಅವರಲ್ಲಿ ಹಣ ಮತ್ತು ತಂತ್ರಜ್ಞಾನವಿದ್ದರೂ ಸಾಧ್ಯವಾಗಲಿಲ್ಲ. ಗಂಗಾ ನದಿಯ ಶುದ್ಧೀಕರಣವೂ ಬಲು ಕಷ್ಟ. ಇದರ ಹೊಣೆಗಾರಿಕೆ ನನ್ನ ಮೇಲಿದೆ. ಮೊದಲ ಹಂತದ ಫ‌ಲಿತಾಂಶ 2017ರಲ್ಲಿ ತೋರುತ್ತದೆ. ಕೇಂದ್ರದಿಂದ ಬಂದ 20,000 ಕೋ.ರೂ. ಅನುದಾನವನ್ನು ಎರಡನೇ ಹಂತ 2019ರ ವರೆಗೆ ಬಳಸಲಾಗುವುದು. ಆಗ ಇನ್ನೊಂದು ಹಂತದ ಫ‌ಲಿತಾಂಶ ತೋರುತ್ತದೆ ಎಂದರು.

7,064 ಕೈಗಾರಿಕೆಗಳ ಮಾಲಿನ್ಯ
ಕೋಲ್ಕತಾ, ಅಲಹಾಬಾದ್‌ನಂತಹ ದೊಡ್ಡ ನಗರಗಳಲ್ಲಿ, ಹೃಷಿಕೇಶ, ಫಾರೂಖಾಬಾದ್‌, ಕಾನ್ಪುರ, ಪಟ್ನಾ
ಮೊದಲಾದೆಡೆ ಇರುವ 7,064 ಕೈಗಾರಿಕೆಗಳ ಮಾಲಿನ್ಯ ಗಂಗಾನದಿಗೆ ವಿಸರ್ಜನೆಯಾಗುತ್ತಿವೆ. ಸುಮಾರು 6,000 ಗ್ರಾ.ಪಂ. ವ್ಯಾಪ್ತಿಯ ಕೊಳಚೆ ನೀರೂ ಹರಿಯುತ್ತಿದೆ. ಇಷ್ಟೊಂದು ಕಷ್ಟದ ಯೋಜನೆಯನ್ನು ತ್ವರಿತಗತಿ ಮತ್ತು ಕಾಲಮಿತಿಯಲ್ಲಿ ಜಾರಿಗೊಳಿಸಲು ಕ್ರಿಯಾಪಡೆಯನ್ನು ರಚಿಸಲಾಗಿದೆ. ಶ್ರೀಕೃಷ್ಣ, ಮುಖ್ಯಪ್ರಾಣರು, ಗುರುಗಳ ಅನುಗ್ರಹದಿಂದ ಈ ಸವಾಲನ್ನು ನಿರ್ವಹಿಸುತ್ತೇನೆ ಎಂದರು.

ಉಮಾಭಾರತಿ-ಉಮಾಶ್ರೀಭಾರತಿ
ಭಗವಂತ ನನಗೆ ಬಹಳಷ್ಟು ಅವಕಾಶ ಗಳನ್ನು ನೀಡಿದ. ಮಧ್ಯಪ್ರದೇಶ ಬುಂದೇಲಖಂಡ ಜಿಲ್ಲೆಯ ಗ್ರಾಮ ವೊಂದರ ನನಗೆ ಗ್ವಾಲಿಯರ್‌ ರಾಜಮಾತೆ ವಿಜಯರಾಜೇ ಸಿಂಧಿಯಾ ಅವರ ಮೂಲಕ ಪೇಜಾವರ ಶ್ರೀಗಳ ಪರಿಚಯವಾಯಿತು. ಅದುವರೆಗೆ ನನ್ನ ಹೆಸರು ಉಮಾಭಾರತಿ ಎಂದಿತ್ತು. ದೀಕ್ಷೆ ನೀಡಿದ ಬಳಿಕ ಉಮಾಶ್ರೀ ಭಾರತಿ ಎಂದು ಗುರು ಗಳು ನಾಮ ಕರಣ ಮಾಡಿದರು. ಅವರ ಅನುಗ್ರಹ ದಿಂದಲೇ ಗಂಗಾಶುದ್ಧೀಕರಣದಂತಹ ಮಹತ್ವದ ಜವಾಬ್ದಾರಿ ದೊರಕಿದೆ ಎಂದು ಉಮಾಶ್ರೀಭಾರತಿ ಹೇಳಿದರು.

ಭಗವಂತ ತಂದೆ, ಗುರು ತಾಯಿ
ಶ್ರೀಕೃಷ್ಣ ಜಗದ್ಗುರು. ವೇದವ್ಯಾಸರು ಸಮಸ್ತ ಶಾಸ್ತ್ರಜ್ಞಾನವನ್ನು ನೀಡಿದ ಇನ್ನೊಬ್ಬ ಜಗದ್ಗುರು. ಇವರಿಬ್ಬರ ಸಂದೇಶವನ್ನು ನೀಡಿದವರು ಮಧ್ವಾ ಚಾರ್ಯರು. ತಂದೆತಾಯಿಗಳು ಒಂದು ಜನ್ಮಕ್ಕೆ ಸೀಮಿತವಾದರೆ ಗುರುಗಳು ಜನ್ಮಜನ್ಮಕ್ಕೂ ಪ್ರೇರಕರು. ಮೈ ಕೊಳಕಾಗಿದ್ದರೆ ತಂದೆ ದೂರ ಮಾಡುತ್ತಾನೆ, ತಾಯಿ ಸ್ನಾನ ಮಾಡಿಸಿ ದರೆ ತಂದೆ ಹತ್ತಿರ ಕರೆ ಯುತ್ತಾನೆ. ಅದೇ ರೀತಿ ಅಜ್ಞಾನ, ವಿಪರೀತ ಜ್ಞಾನದಿಂದ ಇದ್ದರೆ ತಾಯಿಯಂತಿರುವ ಗುರು ಗಳು ಜ್ಞಾನಜಲದಿಂದ ಸ್ನಾನ ಮಾಡಿಸಿ ಶುದ್ಧೀಕರಿಸುತ್ತಾರೆ. ಆಗ ತಂದೆ ಯಂತಿರುವ ಭಗವಂತ ಸ್ವೀಕರಿಸು ತ್ತಾನೆ. ಗಂಗೆಯನ್ನು ಭೂಮಿಗೆ ಹರಿಸಲು ಭಗೀರಥ ಪ್ರಯತ್ನಪಟ್ಟ ಕಷ್ಟದಂತೆ ಶುದ್ಧೀಕರಿಸುವುದೂ ಕಷ್ಟ. ಇಂತಹ ನಿಸ್ವಾರ್ಥ ಸೇವೆಗೆ ಉಮಾಶ್ರೀ ಭಾರತಿಯವರು ತೊಡಗಿದ್ದಾರೆ. ಅವರ ಪ್ರಯತ್ನ ಸಫ‌ಲವಾಗಲಿ ಎಂದು ಪರ್ಯಾಯ ಶ್ರೀ ಪೇಜಾವರ ಶ್ರೀಗಳು ಹಾರೈಸಿದರು. 

Advertisement

ಗುರುಗೌರವ, ಶಿಷ್ಯಾಭಿನಂದನೆ
ಉಮಾಶ್ರೀಭಾರತಿ ಅವರು ರವಿವಾರ ಗುರುಪೂರ್ಣಿಮೆಯಂದು ಶ್ರೀಕೃಷ್ಣ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದ ಬಳಿಕ ಗುರು ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಪಾದಪೂಜೆ ನಡೆಸಿ ಗೌರವ ಸಲ್ಲಿಸಿದರು. 
1992 ನವೆಂಬರ್‌ 17ರಂದು ಸನ್ಯಾಸ ದೀಕ್ಷೆಯನ್ನು ಗುರುಗಳಿಂದ ಸ್ವೀಕರಿಸಿದೆ. ಈಗ 25 ವರ್ಷಗಳಾಗಿವೆ. 2000ರಲ್ಲಿ ಇಲ್ಲಿಗೆ ಬಂದು ಗುರುಗೌರವ ಸಲ್ಲಿಸಿದ್ದೆ. 17 ವರ್ಷಗಳ ಬಳಿಕ ಗುರುಪೂರ್ಣಿಮೆ ದಿನ ಉಡುಪಿಗೆ ಬಂದು ಗುರುಗಳಿಗೆ ಗೌರವ ಸಲ್ಲಿಸುತ್ತಿದ್ದೇನೆ. ಕನಕದಾಸರಿಗೆ ಒಲಿದ ಶ್ರೀಕೃಷ್ಣ ಕ್ಷೇತ್ರವಿದು. ಗುರುಗಳು ದೊಡ್ಡ ಸಮಾಜಸುಧಾರಕರು. ಅವರಿಗೆ ಪಂಚಮ ಪರ್ಯಾಯದ ಸುಯೋಗ ಲಭಿಸಿದ್ದು ಈ ಅವಧಿಯಲ್ಲಿ ಅವರಿಗೆ ಗೌರವ ಸಲ್ಲಿಸುವುದು ಜೀವನದ ಭಾಗ್ಯ ಎಂದರು. ರಾಜಾಂಗಣದಲ್ಲಿ ನಡೆದ ಸಭೆಯಲ್ಲಿ ಪೇಜಾವರ ಶ್ರೀಗಳು ಶಿಷ್ಯೆಯನ್ನು ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next