ಉಪ್ಪಿನಂಗಡಿ: ದಲಿತೆಯ ಹೆಸರಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಮಂಜೂರಾದ ಕೊಳವೆ ಬಾವಿಯನ್ನು ಹಾಗೂ ಸಾಲವನ್ನು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡಿರುವುದಲ್ಲದೆ, ಸಾಲದ ಮೊತ್ತವನ್ನು ಮರುಪಾವತಿ ಮಾಡದೆ ವಂಚಿಸಿದ್ದಾರೆನ್ನಲಾದ 34ನೇ ನೆಕ್ಕಿಲಾಡಿಯ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಸತ್ಯವತಿ ರೈ ಮತ್ತು ಆಕೆಯ ಪತಿ ಹರೀಶ್ ಪೂಂಜ ಅವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.
34ನೇ ನೆಕ್ಕಿಲಾಡಿ ಗ್ರಾಮದ ಅಲಿಮಾರ ಮನೆ ನಿವಾಸಿ ಲೀಲಾ ಕೋಂ ಅಣ್ಣು ಆದಿದ್ರಾವಿಡ ಅವರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳಾದ ಸತ್ಯವತಿ ರೈ ಮತ್ತು ಆಕೆಯ ಪತಿ ಹರೀಶ್ ಪೂಂಜ ಮಾಡಿರುವ ವಂಚನೆಯ ಬಗ್ಗೆ ನ್ಯಾಯ ಬಯಸಿ ಪೊಲೀಸ್ ಹಾಗೂ ಕಂದಾಯ ಇಲಾಖೆಗೆ ದೂರು ಸಲ್ಲಿಸಿದ್ದೇವೆ. ಈ ಬಗ್ಗೆ ವಿಚಾರಣೆ ನಡೆದಿರುತ್ತದೆ. ಇದರಿಂದ ಆಕ್ರೋಶಿತರಾದ ಆರೋಪಿಗಳು ನನ್ನ ಮನೆಗೆ ಬಂದು ನನ್ನ ಜಾತಿಯನ್ನುದ್ದೇಶಿಸಿ ಜಾತಿ ನಿಂದನೆ ಮಾಡಿರುವುದಲ್ಲದೆ. ಜೀವ ಬೆದರಿಕೆಯೊಡ್ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.