Advertisement

ರಿಕ್ಷಾ ಚಾಲಕನನ್ನು ಕೊಂದು ಶವದೊಂದಿಗಿನ ಸೆಲ್ಫಿಯನ್ನು ವಾಟ್ಸಪ್ ನಲ್ಲಿ ಹಂಚಿದ ಆರೋಪಿಗಳ ಬಂಧನ!

12:19 PM Apr 29, 2022 | Team Udayavani |

ಚೆನ್ನೈ: ಆಟೋ ರಿಕ್ಷಾ ಚಾಲಕನ್ನು ಮದ್ಯದ ಬಾಟಲಿಯಿಂದ ಚುಚ್ಚಿ ಕೊಂದು ನಂತರ ಶವದೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ವಾಟ್ಸಾಪ್ ಗ್ರೂಪ್ ನಲ್ಲಿ ಫೋಟೊ ಕಳುಹಿಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚೆನ್ನೈನ ನ್ಯೂ ಮನಾಲಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

Advertisement

ಕೊಲೆಯಾದ ರಿಕ್ಷಾ ಚಾಲಕನನ್ನು ರವಿಚಂದ್ರನ್ (32 ವ) ಎಂದು ಗುರುತಿಸಲಾಗಿದೆ. ಹಳೇಯ ವೈಷಮ್ಯದ ಕಾರಣದಿಂದ ಈ ಕೊಲೆ ನಡೆದಿದೆ.

ಬುಧವಾರ ರಾತ್ರಿ ಈ ಕೊಲೆ ನಡೆದಿದ್ದು, ಗುರುವಾರ ಬೆಳಗ್ಗೆ ವಾಟ್ಸಾಪ್ ಗ್ರೂಪ್‌ ನಲ್ಲಿ ಪೋಸ್ಟ್ ಮಾಡಿದ ಫೋಟೋ ಆಧರಿಸಿ ನಾಲ್ವರನ್ನು ಬಂಧಿಸಲಾಗಿದೆ. ಮಧನ್ ಕುಮಾರ್ (31), ಧನುಷ್ (19), ಜಯಪ್ರಕಾಶ್ (18) ಮತ್ತು ಭರತ್ (19) ಎಂಬ ನಾಲ್ವರು ಆರೋಪಿಗಳನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ರವಿಚಂದ್ರನ್ ಕೆಲ ದಿನಗಳ ಹಿಂದೆ ಆರೋಪಿಗಳಲ್ಲಿ ಒಬ್ಬನಾದ ಮದನ್ ಎಂಬಾತನ ಜೊತೆ ಜಗಳ ಮಾಡಿಕೊಂಡಿದ್ದ. ರವಿಚಂದ್ರನ್ ಅವರನ್ನು ಬುಧವಾರ ನ್ಯೂ ಮನಾಲಿ ಪಟ್ಟಣದ ಆಟದ ಮೈದಾನದಲ್ಲಿ ಮದನ್ ಅವರು ಮದ್ಯದ ಪಾರ್ಟಿಗೆ ಆಹ್ವಾನಿಸಿದ್ದ. ಅವರು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಬಯಸಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ:ಬಂಟ್ವಾಳ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮಹಿಳೆ ಸಾವು

Advertisement

ರವಿಚಂದ್ರನ್ ಪತ್ನಿ ಕೀರ್ತನಾ ಗಂಡನನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ಕೀರ್ತನಾ ಮತ್ತು ಕೆಲವು ಸಂಬಂಧಿಕರು ಅವನನ್ನು ಹುಡುಕಾಡಿ ವೆಟ್ರಿ ನಗರದ ಎಂಆರ್ಎಫ್ ಆಟದ ಮೈದಾನಕ್ಕೆ ಹೋದಾಗ ಮೂಲೆಯಲ್ಲಿ ರವಿಚಂದ್ರನ್ ಶವವಾಗಿ ಬಿದ್ದಿರುವುದನ್ನು ಕಂಡಿದ್ದಾರೆ. ಇದೇ ವೇಳೆ ನಾಲ್ವರು ಆರೋಪಿಗಳು ಶವದ ಬಳಿ ತಮ್ಮ ಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದರು.

ಬಳಿ ಬಂದ ಕೀರ್ತನಾ ಮತ್ತು ಸಂಬಂಧಿಕರಿಗೆ ಗ್ಯಾಂಗ್ ಬೆದರಿಕೆ ಹಾಕಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಟಾನ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ. ಕೀರ್ತನಾ ಅವರ ದೂರಿನ ಆಧಾರದ ಮೇಲೆ, ಆವಡಿಯ ಪೊಲೀಸ್ ಕಮಿಷನರ್ ಸಂದೀಪ್ ರಾಥೋಡ್ ಅವರು ವಿಶೇಷ ತಂಡಗಳನ್ನು ರಚಿಸಿದ್ದರು.

ಘಟನೆ ನಡೆದ ಬಳಿಕ ಆರೋಪಿಗಳು ಶವದೊಂದಿಗೆ ತೆಗೆದ ಸೆಲ್ಫಿಯನ್ನು ವಾಟ್ಸಪ್ ಗ್ರೂಪ್ ನಲ್ಲಿ ಕಳುಹಿಸಿ ತಾವು ಕೊಲೆ ಮಾಡಿದ್ದಾಗಿ ಹೇಳಿಕೊಂಡಿದ್ದರು. ಈ ಫೋಟೊವನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next