ಭೋಪಾಲ್: ಜೆಸಿಬಿ ಯಂತ್ರದ ಮೂಲಕ ಎಟಿಎಂ ಹಣ ದರೋಡೆ, ಎಟಿಎಂ ಒಡೆದು ಹಣ ದರೋಡೆ ಮಾಡಿದ್ದ ಘಟನೆ ಬಗ್ಗೆ ಓದಿದ್ದೀರಿ. ಆದರೆ ಹಣಕ್ಕಾಗಿ ಎಟಿಎಂ ಅನ್ನೇ ಸ್ಫೋಟಿಸಿದ ಘಟನೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಕಟ್ನಿಯ ಬಾಕಾಲ್ ಗ್ರಾಮದಲ್ಲಿರುವ ಎಟಿಎಂನೊಳಕ್ಕೆ ಮೂವರು ಕಿಡಿಗೇಡಿಗಳು ನುಗ್ಗಿದ್ದು, ಅಪರಿಚಿತ ಸ್ಫೋಟಕವನ್ನು ಉಪಯೋಗಿಸಿ ಸ್ಫೋಟಿಸಿದ್ದರು. ಆದರೆ ಅವರಿಗೆ ಸಿಕ್ಕ ನಗದು ಮಾತ್ರ ಕೇವಲ ಹತ್ತು ಸಾವಿರ ರೂಪಾಯಿ. ಕೊನೆಗೂ ಆ ಹಣವನ್ನೇ ದೋಚಿ ಪರಾರಿಯಾಗಿದ್ದಾರೆ ಎಂದು ವರದಿ ವಿವರಿಸಿದೆ.
ಹಾಡಹಗಲೇ ಈ ಘಟನೆ (ಮಧ್ಯಾಹ್ನ 2ಗಂಟೆ) ನಡೆದಿತ್ತು. ಸ್ಫೋಟದ ಶಬ್ದ ಕೇಳಿ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸಿಸಿಟಿವಿ ಫೂಟೇಜ್ ಅನ್ನು ಪರಿಶೀಲಿಸಿದ್ದು, ಕಳ್ಳರನ್ನು ಹಿಡಿಯಲು ವಿಶೇಷ ತಂಡ ರಚಿಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸ್ಫೋಟಕ ಬಳಸಿ ಎಟಿಎಂ ಯಂತ್ರ ಒಡೆಯುತ್ತಿರುವುದು ರಾಜ್ಯದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ರಾಜ್ಯದಲ್ಲಿ ನಡೆದ ಮೂರನೇ ಪ್ರಕರಣ ಇದಾಗಿದೆ. ಅಲ್ಲದೇ ಪೊಲೀಸರಿಗೂ ಕೂಡಾ ಇದೊಂದು ಸವಾಲಿನ ಕೆಲಸವಾಗಿದೆ. ಕಳೆದ ಜೂನ್ ತಿಂಗಳಿನಲ್ಲಿಯೂ ಎರಡು ಎಟಿಎಂ ಯಂತ್ರವನ್ನೇ ಸ್ಫೋಟಿಸಿ ಹಣ ದೋಚಿರುವುದಾಗಿ ವರದಿ ವಿವರಿಸಿದೆ.
ಜಬಲ್ ಪುರ್ ಪ್ರದೇಶದಲ್ಲಿ ನಡೆದ ಎರಡು ಎಟಿಎಂ ಸ್ಫೋಟ ಹಾಗೂ ಕಟ್ನಿ ಪ್ರದೇಶದಲ್ಲಿದ್ದ ಎಟಿಎಂನಲ್ಲಿ ಕಾವಲುಗಾರರು ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.