ಹುಬ್ಬಳ್ಳಿ: ಹಳೆಯ ವೈಷಮ್ಯದ ಹಿನ್ನೆಲೆ ರೌಡಿ ಗ್ಯಾಂಗ್ ಒಂದು ಇನ್ನೋರ್ವ ರೌಡಿ ಮೇಲೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ರವಿವಾರ ರಾತ್ರಿ ಬೆಂಡಿಗೇರಿ ಠಾಣೆ ವ್ಯಾಪ್ತಿಯ ಮಂಟೂರ ರಸ್ತೆಯಲ್ಲಿ ನಡೆದಿದೆ.
ರೌಡಿ ಶೀಟರ್ ಡೇವಿಡ್ ಯಮಾರ್ಥಿ ಹಲ್ಲೆಗೊಳಗಾಗಿದ್ದು, ದಾವೂದ್ ಗ್ಯಾಂಗ್ ಹಲ್ಲೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ನಗರದ ಉಪ ಕಾರಾಗೃಹದಲ್ಲಿದ್ದ ತಂಡಗಳ ಸದಸ್ಯರು ಒಬ್ಬರಿಗೊಬ್ಬರು ಜಗಳ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದೇ ಸೇಡು ಇಟ್ಟುಕೊಂಡು ರವಿವಾರ ರಾತ್ರಿ 8-10 ಜನ ಗುಂಪು ಡೇವಿಡ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಡೇವಿಡ್ ತಲೆಗೆ ಗಂಭೀರವಾದ ಗಾಯವಾಗಿದೆ.
ಗಲಾಟೆ ವಿಷಯ ತಿಳಿದು ಬೆಂಡಿಗೇರಿ ಪೊಲೀಸರು ಸ್ಥಳಕ್ಕೆ ತೆರಳಿ ತಿಳಿಗೊಳಿಸಿ ಗಾಯಗೊಂಡಿದ್ದ ಡೇವಿಡ್‌ನನ್ನು ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಮುಂದಾದಾಗ, ಚಿಕಿತ್ಸೆ ಪಡೆಯಲ್ಲವೆಂದು ಅವರೊಂದಿಗೆ ರಂಪಾಟ ನಡೆಸಿದ್ದಾನೆ. ಅಲ್ಲದೇ ಆಸ್ಪತ್ರೆಯ ಸಿಬ್ಬಂದಿ ಜೊತೆ ಕಿರಿಕ್ ಮಾಡಿ ಗಾಜು, ಪೀಠೋಪಕರಣ ಧ್ವಂಸ ಮಾಡಿದ್ದಾನೆ. ಪೊಲೀಸರು ಅವನನ್ನು ತಡೆಯಲು ಮುಂದಾದಾಗ ಅವರಿಗೆ ಆವಾಜ್ ಹಾಕಿದ್ದಾನೆ. ಈ ಪುಡಿ ರೌಡಿಯ ಪುಂಡಾಟ ಕಂಡು ನಂತರ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹ ಸಚಿವರು ಇಂದು ನಗರಕ್ಕೆ ಆಗಮಿಸುತ್ತಿರುವ ಸಂದರ್ಭದಲ್ಲೇ ಹಾಗೂ ಕಾನೂನು-ಸುವ್ಯವಸ್ಥೆ ವಿಭಾಗದ ಎಡಿಜಿಪಿ ನಗರದಲ್ಲೇ ಇರುವ ಸಂದರ್ಭದಲ್ಲಿ ಈ ಪುಡಿ ರೌಡಿಗಳ ಹೊಡೆದಾಟ ನಡೆದಿದೆ.