Advertisement

ಗಣೇಶೋತ್ಸವ; ಪಾಲಿಕೆ ಮುನ್ನೆಚ್ಚರಿಕೆ ಕ್ರಮ

11:16 AM Sep 02, 2019 | Suhan S |

ಕಲಬುರಗಿ: ಗಣೇಶೋತ್ಸವಕ್ಕೆ ಜನತೆ ಮತ್ತು ಗಣೇಶ ಮಂಡಳಿಗಳು ಭರದ ಸಿದ್ಧತೆ ಮಾಡಿಕೊಂಡಿದ್ದು, ಗಣೇಶ ಪೆಂಡಾಲ್ಗಳಲ್ಲಿ ಮತ್ತು ವಿಸರ್ಜನೆ ಸಮಯದಲ್ಲಿ ಧ್ವನಿವರ್ಧಕ ಸದ್ದಿನ ಮಿತಿಗೆ ಕಡಿವಾಣ ಹಾಕುವುದು ಸೇರಿದಂತೆ ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ಮಹಾನಗರ ಪಾಲಿಕೆ ತೆಗೆದುಕೊಳ್ಳುತ್ತಿದೆ.

Advertisement

ನಗರದಲ್ಲಿ ಅನೇಕ ಸ್ಥಳಗಳಲ್ಲಿ ದೊಡ್ಡ-ದೊಡ್ಡ ಗಣೇಶ ಮೂರ್ತಿಗಳನ್ನು ಕೂಡಿಸಲು ಗಣೇಶ ಮಂಡಳಿಯವರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ಪಡೆಯಲು ಮಹಾನಗರ ಪಾಲಿಕೆ ಆವರಣದಲ್ಲಿ ವಿಶೇಷ ಕೌಂಟರ್‌ ತೆರೆಯಲಾಗಿದ್ದು, ಈಗಾಗಲೇ ಸುಮಾರು 30 ಮಂಡಳಿಯವರು ಗಣೇಶ ಕೂಡಿಸಲು ಅನುಮತಿ ಪಡೆದುಕೊಂಡಿದ್ದಾರೆ. ಅವಶ್ಯಕ ದಾಖಲೆ ಪಡೆದು ಒಂದೇ ಸ್ಥಳದಲ್ಲಿ ಪಾಲಿಕೆ, ಜೆಸ್ಕಾಂ, ಪೊಲೀಸ್‌, ಅಗ್ನಿಶಾಮಕ ದಳದಿಂದ ಅನುಮತಿ ನೀಡಲಾಗುತ್ತಿದೆ.

ಡಿಜೆ ಸದ್ದಿಗೆ ಮಿತಿ: ಗಣೇಶ ಕೂಡಿಸುವ ಪೆಂಡಾಲ್ಗಳು ಹಾಗೂ ಮೆರವಣಿಗೆ ವೇಳೆ ಡಿಜೆ ಬಳಕೆಯಿಂದ ಅತಿಯಾದ ಸದ್ದಿನ ಮಾಲಿನ್ಯ ಉಂಟಾಗುತ್ತದೆ. ಸಾರ್ವಜನಿಕರು ವಿನಾ ಕಾರಣ ಕಿರಿಕಿರಿ ಅನುಭವಿಸುವಂತೆ ಆಗುತ್ತದೆ. ಮೇಲಾಗಿ ಮಕ್ಕಳಿಗೆ, ವೃದ್ಧರಿಗೆ ಭಾರಿ ಸದ್ದು ಅಪಾಯಕಾರಿಯಾಗಿದೆ. ಹೀಗಾಗಿ ಧ್ವನಿ ವರ್ಧಕಗಳ ಹೊರ ಹೊಮ್ಮಿಸುವ ಶಬ್ದ ಕಂಪನದ ಮೇಲೆ ನಿಗಾ ವಹಿಸಲು ‘ಡೆಸಿ ಮೀಟರ್‌’ (ಸದ್ದು ಅಳೆಯುವ ಸಾಧನ) ಬಳಕೆ ಮಾಡಲಾಗುತ್ತಿದ್ದು, ಸದ್ದಿನ ಪ್ರಮಾಣದ 80 ಡೆಸಿಬೆಲ್ ಗಡಿ ಮೀರದಂತೆ ನೋಡಿಕೊಳ್ಳಲು ಪಾಲಿಕೆ ಮುಂದಾಗಿದೆ.

ಯಾವುದೇ ವಿಧದ ಅತಿಯಾದ ಸದ್ದು ಮನುಷ್ಯನ ಕಿವಿಗೆ ಸಮಸ್ಯೆ ತಂದೊಡ್ಡುತ್ತದೆ. ಆದರೂ, ಹಬ್ಬದ ಹಿನ್ನೆಲೆಯಲ್ಲಿ ಡಿಜೆ ಶಬ್ದವನ್ನು 80 ಡೆಸಿಬಲ್ವರೆಗೂ ಬಳಸಲು ಅವಕಾಶ ಕೊಡಲಾಗುತ್ತಿದೆ. ವಿಸರ್ಜನೆ ಸಮಯದಲ್ಲಿ ಡಿಜೆಗಳ ಕಂಪನದ ಸದ್ದನ್ನು ‘ಡೆಸಿ ಮೀಟರ್‌’ ಮೂಲಕ ಪಾಲಿಕೆ ಸಿಬ್ಬಂದಿ ಪರಿಶೀಲಿಸುತ್ತಾರೆ. 80 ಡೆಸಿಬಲ್ಗಿಂತ ಹೆಚ್ಚು ಶಬ್ದ ಹೊರ ಹೊಮ್ಮಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಪ್ರಭಾರಿ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ತಿಳಿಸಿದ್ದಾರೆ.

ವಿದ್ಯುತ್‌ ಅವಘಡ ತಡೆಗೆ ಕ್ರಮ: ನಗರದಲ್ಲಿ ವಿದ್ಯುತ್‌ ತಂತಿಗಳು ಎಲ್ಲೆಂದರಲ್ಲಿ ಜೋತು ಬಿದ್ದಿರುವುದರಿಂದ ಹಾಗೂ ವಾಹನಗಳಲ್ಲಿ ದೊಡ್ಡ ಗಣಪತಿ ಮೂರ್ತಿಗಳನ್ನು ಸಾಗಿಸುವಾಗ ಯಾವುದೇ ರೀತಿಯ ಅವಘಡಗಳನ್ನು ಸಂಭವಿಸದಂತೆ ನೋಡಿಕೊಳ್ಳಲು ಪಾಲಿಕೆ ಕ್ರಮಕೈಗೊಳ್ಳುತ್ತಿದೆ.

Advertisement

ಗಣೇಶ ಮೂರ್ತಿಗಳನ್ನು ಪೆಂಡಾಲ್ಗಳಿಗೆ ಕೊಂಡೊಯ್ಯುವ ಹಾಗೂ ವಿರ್ಸಜನೆಗೆಂದು ಮೆರವಣಿಗೆ ಸಾಗುವ ದಾರಿಯಲ್ಲಿ ವಿದ್ಯುತ್‌ ತಂತಿಗಳನ್ನು ಮೇಲೆತ್ತಲು ಕ್ರೇನ್‌ ಬಳಕೆ ಮಾಡಲಾಗುತ್ತದೆ. ಅಗತ್ಯವಿದ್ದಲ್ಲಿ ಗಣೇಶ ಸಾಗಿಸುವ ಮಾರ್ಗದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ, ಅನಾಹುತ ಆಗದಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ರಾಹುಲ್ ಪಾಂಡ್ವೆ ತಿಳಿಸಿದ್ದಾರೆ.

ಕಲ್ಯಾಣಿಯಲ್ಲಿ ಎಚ್ಚರಿಕೆ ಕ್ರಮ: ಈ ಹಿಂದೆ ನಗರದ ಎಲ್ಲ ಗಣೇಶ ಮೂರ್ತಿಗಳನ್ನು ಅಪ್ಪನ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತಿತ್ತು. ಮೂರು ವರ್ಷದ ಹಿಂದೆ ವಿಸರ್ಜನೆ ವೇಳೆ ವ್ಯಕ್ತಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರಿಂದ ಕೆರೆ ಪಕ್ಕದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆಂದೆ ಪ್ರತ್ಯೇಕವಾದ 20 ಅಡಿ ಆಳದ ಕಲ್ಯಾಣಿ ನಿರ್ಮಿಸಲಾಗಿದೆ.

ಭೀಮಾ ನದಿಯಿಂದ ಕಲ್ಯಾಣಿಗೆ ನೇರ ಸಂಪರ್ಕವಿದ್ದು, ರವಿವಾರ ನೀರು ಬಿಟ್ಟು ಕಲ್ಯಾಣಿಯನ್ನು ಭರ್ತಿ ಮಾಡಲಾಗಿದೆ. ಜತೆಗೆ ಪ್ರಭಾರಿ ಆಯುಕ್ತ ರಾಹುಲ್ ಪಾಂಡ್ವೆ ಅವರು ಕಲ್ಯಾಣಿಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ವಿಸರ್ಜನೆ ಸಮಯದಲ್ಲಿ ಕಲ್ಯಾಣಿ ಸಮೀಪಕ್ಕೆ ಯಾರನ್ನು ಬಿಡುವುದಿಲ್ಲ. ಪಾಲಿಕೆ ಸಿಬ್ಬಂದಿ, ಪೊಲೀಸರು, ಅಗ್ನಿ ಶಾಮಕದಳ ಹಾಗೂ ಈಜುಗಾರರನ್ನು ಸ್ಥಳದಲ್ಲಿ ನಿಯೋಜಿಸಲಾಗಿರುತ್ತದೆ. ಸಣ್ಣ ಗಣೇಶ ಮೂರ್ತಿಗಳಿಗೆ ಗೇಟ್ ಹೊರಗಡೆಯೇ ಪೂಜೆ ಸಲ್ಲಿಸಬೇಕು. ನಂತರದಲ್ಲಿ ಸಿಬ್ಬಂದಿ ಗಣೇಶ ಮೂರ್ತಿಯನ್ನು ಕಲ್ಯಾಣಿಯಲ್ಲಿ ಬಿಡುತ್ತಾರೆ.

ದೊಡ್ಡ ಗಣಪತಿಗಳಿದ್ದರೆ ವಾಹನವನ್ನು ಕಲ್ಯಾಣಿವರೆಗೆ ಬರಲು ಅವಕಾಶ ನೀಡಲಾಗುತ್ತದೆ. ಅದರೊಂದಿಗೆ ವಾಹನದ ಚಾಲಕ ಮತ್ತು ಗಣೇಶ ಮಂಡಳಿ ಒಬ್ಬ ಸದಸ್ಯರನ್ನು ಮಾತ್ರವೇ ಕಲ್ಯಾಣಿ ಸಮೀಪ ಬಿಡಲಾಗುವುದು. ಉಳಿದಂತೆ ಸಿಬ್ಬಂದಿಯೇ ಎಲ್ಲವನ್ನು ನೋಡಿಕೊಳ್ಳುತ್ತಾರೆ. ಎರಡು ಕ್ರೇನ್‌ಗಳು ಇರುತ್ತವೆ. ಪ್ರತಿ ದಿನ ಬೆಳಗ್ಗೆ ಕಲ್ಯಾಣಿ ಸ್ವಚ್ಛ ಮಾಡಲಾಗುವುದು ಎಂದು ರಾಹುಲ್ ಪಾಂಡ್ವೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next