ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸುವವರು ಪೊಲೀಸ್ ಇಲಾಖೆ ಹಾಗೂ ಬೆಸ್ಕಾಂನಿಂದ ಅನುಮತಿ ಪಡೆಯುವುದು ಕಡ್ಡಾಯ. ಗಣೇಶ ಪ್ರತಿಷ್ಠಾಪನೆ ಮಾಡುವ ಸ್ಥಳದ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಅನುಮತಿ ಹಾಗೂ ದೀಪಾಲಂಕಾರಕ್ಕಾಗಿ ಸ್ಥಳೀಯ ಬೆಸ್ಕಾಂನಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯುವುದು ಸೇರಿದಂತೆ ಪೊಲೀಸ್ ಹಾಗೂ ಬೆಸ್ಕಾಂನ ನಿಯಮ ಪಾಲನೆ ಮಾಡಬೇಕು.
ಸಾರ್ವಜನಿಕವಾಗಿ ಗೌರಿ- ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು ಮೊದಲಿಗೆ ಸಂಬಂಧಪಟ್ಟ ಪೊಲೀಸ್ ಠಾಣೆ ಅಧಿಕಾರಿಗಳನ್ನು ಸಂಪರ್ಕಿಸಿ ಅನುಮತಿ ಪಡೆಯಬೇಕು. ಆಚರಣೆಗೆ ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡಬೇಕಾದರೆ ಅದಕ್ಕೂ ಅನುಮತಿ ಪಡೆಯುವುದು ಕಡ್ಡಾಯ. ಗಣೇಶೋತ್ಸವ ನಡೆಯುವ ದಿನಾಂಕ, ಆಯೋಜನೆಯಾಗಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು.
ಧ್ವನಿವರ್ಧಕ ಬಳಕೆಗೆ ನಿಗದಿಪಡಿಸಿರುವ ಸಮಯ ಪಾಲನೆ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಬಾರದು, ಸ್ಥಳೀಯರಿಗೂ ಯಾವುದೇ ರೀತಿಯ ಕಿರಿಕಿರಿ ಉಂಟಾಗದಂತೆ ಎಚ್ಚರ ವಹಿಸುವುದು, ವಿಸರ್ಜನಾ ಮೆರವಣಿಗೆ ವೇಳೆಯೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂಬ ಷರತ್ತಿನೊಂದಿಗೆ ಪೊಲೀಸರ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಬೆಸ್ಕಾಂ ಅನುಮತಿ: ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳು, ರಸ್ತೆಬದಿ ಮೂರ್ತಿ ಪ್ರತಿಷ್ಠಾಪಿಸುವವರು ಅಧಿಕೃತವಾಗಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಬೇಕು ಎಂದು ಬೆಸ್ಕಾಂ ತಿಳಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಆಚರಣೆ ವೇಳೆ ವಿದ್ಯುತ್ ಕಂಬಗಳಿಂದ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯುವುದು ಸರಿಯಲ್ಲ. ಇದರಿಂದ ವಿದ್ಯುತ್ ಅವಘಡಗಳು ಸಂಭವಿಸುವ ಅಪಾಯವಿರುತ್ತದೆ.
ಹಾಗಾಗಿ ನಿಯಮಾನುಸಾರ ಸಂಬಂಧಪಟ್ಟ ಉಪವಿಭಾಗದವರನ್ನು ಭೇಟಿಯಾಗಿ ಸಂಪರ್ಕ ಪಡೆಯಬೇಕು. ಆ ಮೂಲಕ ವಿದ್ಯುತ್ ಅವಘಡಗಳು ಸಂಭವಿಸದಂತೆ ಸಹಕಾರ ನೀಡಬೇಕು ಎಂದು ಬೆಸ್ಕಾಂ ಹೇಳಿದೆ. ಪಿಓಪಿ ಗೌರಿ- ಗಣೇಶ ಮೂರ್ತಿಗಳ ಮಾರಾಟವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಷೇಧಿಸಿರುವುದರಿಂದ ಮಣ್ಣಿನ ಮೂರ್ತಿಗಳನ್ನೇ ಬಳಸುವ ಮೂಲಕ ಪರಿಸರ ಪ್ರೇಮ ಮೆರೆಯಬೇಕು. ಜತೆಗೆ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆದು ಸುರಕ್ಷಿತವಾಗಿ ಆಚರಣೆಗೆ ಮುಂದಾಗುವುದು ಸೂಕ್ತ.