Advertisement

ಸರಳ ಗಣೇಶೋತ್ಸವಕ್ಕೆ ಗೋಮಯ ಗಣಪತಿ ಆಕರ್ಷಣೆ

05:33 PM Aug 29, 2021 | Team Udayavani |

ಚಿಕ್ಕನಾಯಕನಹಳ್ಳಿ: ಗಣೇಶ ಚತುರ್ಥಿ ಹಿಂದೂ ಸಂಸ್ಕೃತಿಯಲ್ಲಿ ಅತ್ಯಂತ ಶ್ರೇಷ್ಠ ಹಬ್ಬಗಳಲ್ಲಿ ಒಂದಾಗಿದೆ. ಸಣ್ಣ ಮಕ್ಕಳಿಂದ ಹಿಡಿದು
ಹಿರಿಯರಿಗೂ ಈ ಹಬ್ಬ ಅಚ್ಚು ಮೆಚ್ಚು. ಇತ್ತೀಚಿನ ದಿನಗಳಲ್ಲಿ ಪರಿಸರ ಸ್ನೇಹಿ ಗಣಪತಿ ಕೂಗು ಬಹಳ ಜೋರಾಗಿದ್ದು, ಕೋವಿಡ್ ಅರ್ಭಟದ ನಡುವೆ ಸರಳ ಗಣೇಶೋತ್ಸವಕ್ಕೆ ತಾಲೂಕಿನ ಸಿದ್ದನಕಟ್ಟೆಯ ವಿಶ್ವಮಾತಾ ಗೋಶಾಲೆಯಲ್ಲಿ ಸಿದ್ಧಗೊಂಡಿದೆ ಗೋಮಯ ಗಣಪತಿ.

Advertisement

ದೇಶದಲ್ಲಿ ಸತತ ಎರಡು ವರ್ಷಗಳಿಂದ ಕೋವಿಡ್ ದಿಂದ ಸಭೆ, ಸಮಾರಂಭ ಹಾಗೂ ಹಬ್ಬ, ಜಾತ್ರೆಗಳ ಸಡಗರವನ್ನು ಮೊಟಕುಗೊಳಿಸಿತ್ತು. ಈ ವರ್ಷದ ಗಣೇಶೋತ್ಸವವನ್ನು ಆತ್ಯಂತ ಸರಳವಾಗಿ ಆಚರಣೆ ಮಾಡಲು ಸರ್ಕಾರ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು, ಇದರ ನಡುವೆ ಗಣೇಶ
ಹಬ್ಬವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ಹಾಗೂ ಹಬ್ಬದ ಸಡಗರವನ್ನು ಹೆಚ್ಚಿಸಲು ತಾಲೂಕಿನ ಸಿದ್ದನಕಟ್ಟೆಯ ವಿಶ್ವಮಾತಾ ಗೋಶಾಲೆಯ ವ್ಯವಸ್ಥಾಪಕ ಶ್ರೀಹರಿ ಅವರು ದೇಸಿ ತಳಿಯ ಹಸುಗಳ ಗೋಮಯ(ಸಗಣಿ)ದಿಂದ ಗಣಪತಿ ಮೂರ್ತಿಯನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ಸಂಪ್ರದಾಯದ ಪ್ರತೀಕ: ಹಿಂದೂ ಸಂಸ್ಕೃತಿಯಲ್ಲಿ ಯಾವುದೇ ಪೂಜೆ ಆರಂಭಕ್ಕೂ ಮುನ್ನ ಮೊದಲ ಸಗಣಿಯಿಂದ ಪಿಳ್ಳಾರಿ ಗಣಪತಿ ಪೂಜೆ
ಮಾಡುವ ಸಂಪ್ರದಾಯವಿದೆ. ಮೊದಲ ಪೂಜೆ ಅಧಿಪತಿ ಗಣಪತಿಯಾಗಿದ್ದು, ಹಸುವಿನ ಸಗಣಿಯಿಂದ ಮಾಡಿದ ಸಣ್ಣ ಹುಂಡೆಗೆ ಗರಿಕೆ ಇಟ್ಟು ಪೂಜಿಸಲಾಗುತ್ತದೆ. ಆದರೆ, ಗೋಶಾಲೆಯಲ್ಲಿ ತಯಾರಿಸಿರುವ ಗಣಪತಿ ಪೂರ್ತಿ ಸಂಪೂರ್ಣ ಸಗಣಿಯಿಂದ ಮಾಡಿದ ಗಣಪತಿಯಾಗಿದೆ ಇದು ಪೂಜೆ ಶ್ರೇಷ್ಠ ಎಂಬ ನಂಬಿಕೆ ಇದೆ.

ಇದನ್ನೂ ಓದಿ:ಆರ್ ಸಿಬಿ ಪರ ಆಡಲು ಹಸರಂಗ ಮತ್ತು ಚಮೀರಾಗೆ ಗ್ರೀನ್ ಸಿಗ್ನಲ್ ನೀಡಿದ ಲಂಕಾ ಕ್ರಿಕೆಟ್

ಗೋಮಯ ಗಣಪತಿ ಅನುಕೂಲ: ದೇಸಿ ಹಸುಗಳ ಸಗಣಿಯಿಂದ ತಯಾರಾಗಿರುವ ಗೋಮಯ ಗಣಪತಿ ಅತ್ಯಂತ ಹಗುರವಾಗಿದ್ದು, ವಿಕಿರಣ ವಿರೋಧಿ, ಗಾಳಿಯನ್ನು ಶುದ್ಧೀಕರಿಸುವ ಶಕ್ತಿ ಹೊಂದಿದೆ. ಇದು ಪರಿಸರ ಸ್ನೇಹಿ ಗಣಪತಿಯಾಗಿದ್ದು, ಪೂಜೆಯ ನಂತರ ವಿಸರ್ಜನೆ ಮಾಡಿದ ಎರಡು ದಿನಗಳ ನಂತರ ವಿಗ್ರಹ ಗಿಡಗಳಿಗೆ ಗೊಬ್ಬರವಾಗಿ ರೂಪಗೊಳ್ಳುತ್ತದೆ. ಗಣಪತಿ ತಯಾರಕೆ ಒಂದು ಗುಡಿ ಕೈಗಾರಿಕೆಗೆ ಪ್ರೋತ್ಸಹ ಸಿಕ್ಕಿದಂತಾಗುತ್ತದೆ. ಹಾಗೂ ಗೋ ಶಾಲೆಯಿಂದ ತಯಾರಾದ ಗಣಪತಿ ಕೊಂಡುಕೊಳ್ಳುವ ಮೂಲಕ ಗೋವು ಪೋಷಣೆಗೆ ಸಹಾಯ ಮಾಡಿದಂತಾಗುತ್ತದೆ.

Advertisement

ರೈತರಗೆ ವರದಾನ: ಬಹುತೇಕ ರೈತರು ಇತ್ತೀಚಿನ ದಿನಗಳಲ್ಲಿ ದೇಸಿ ಹಸುಗಳ ಸಾಕಾಣಿಕೆಯನ್ನುಕಡಿಮೆ ಮಾಡಿದ್ದು, ಆದರೆ, ದೇಶಿ ಹಸುಗಳ ಸಗಣಿಯಿಂದ ಮಾಡಿದ ಗಣಪತಿಗೆ ಬೇಡಿಕೆ ಹೆಚ್ಚಾಗಿದೆ. 6 ಇಂಚಿನ ಈ ಗಣಪತಿಗೆ 400 ರೂ. ಗಳಿದ್ದು, ರೈತರು ಹಸುಗಳ ಹಾಲಿನಲ್ಲಿ ಲಾಭ ಮಾಡುವ ಜೊತೆಗೆ ಗಣಪತಿ ತಯಾರಿಕೆಯಿಂದ ಸಹ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಗೋಶಾಲೆಯ ನಿರ್ವಹಣೆಗೆ ಪ್ರಯೋಗಿಕವಾಗಿ ಈ ವರ್ಷ ಗೋಮಯ ಗಣಪತಿಯನ್ನು ತಯಾರು ಮಾಡಲಾಗಿದೆ. ಗೋಮಯ ಗಣಪತಿ ಪೂಜೆಗೆ ಶ್ರೇಷ್ಠವಾಗಿದ್ದು, ಹಾಗೂ ಪರಿಸರ ಸ್ನೇಹಿಯಾಗಿದೆ. ವಿಸರ್ಜನೆಯ ನಂತರ ಇದು ಮರ ಗಿಡಗಳಿಗೆ ಗೊಬ್ಬರವಾಗಿ ಪರಿವರ್ತನೆ ಯಾಗುತ್ತದೆ. ರೈತರು ಗೋಮಯ ಗಣಪತಿ ತಯಾರಿಸಲು ಆಸಕ್ತಿ ಹೊಂದಿದ್ದರೆ ನಮ್ಮ ಗೋಶಾಲೆಯಲ್ಲಿ ಉಚಿತವಾಗಿ ತರಬೇತಿ ನೀಡಲಾಗುತ್ತದೆ.
-ಶ್ರೀಹರಿ, ಗೋಶಾಲೆ ವ್ಯವಸ್ಥಾಪಕ

ಪರಿಸರ ಸಂರಕ್ಷಣೆ ನಮ್ಮಕರ್ತವ್ಯವಾಗಿದೆ. ದೇಸಿ ಹಸುಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮದು. ಈ ಹಿನ್ನೆಲೆ ತಾಲೂಕಿನಲ್ಲಿ ಮೊದಲ ಬಾರಿಗೆ ಪರಿಸರ ಸ್ನೇಹಿ ಗಣಪತಿ ಸಿದ್ಧಗೊಳಿಸಿದ್ದು, ಆಸಕ್ತರು ಸಿದ್ದನಕಟ್ಟೆ ವಿಶ್ವಮಾತ ಗೋಶಾಲೆಯನ್ನು ಸಂಪರ್ಕ ಮಾಡಬಹುದು.
-ಗಂಗಾಧರ್‌, ನಾಟಿ ವೈದ್ಯರು ವಿಶ್ವಮಾತ ಗೋಶಾಲೆ

-ಚೇತನ್‌

Advertisement

Udayavani is now on Telegram. Click here to join our channel and stay updated with the latest news.

Next