Advertisement

ಪಪಂ ಚುನಾವಣೆಯಲ್ಲಿ ಅರ್ಹರಿಗೆ ಟಿಕೆಟ್: ಗಣೇಶ್‌

02:28 PM May 09, 2019 | Team Udayavani |

ಆಲೂರು: ಪಟ್ಟಣ ಪಂಚಾಯಿತಿಯ 11ವಾರ್ಡ್‌ ಗಳಲ್ಲಿ ಅರ್ಹ ವ್ಯಕ್ತಿಗಳಿಗೆ ಟಿಕೆಟ್ ನೀಡಿ ಪಟ್ಟಣ ಪಂಚಾಯಿತಿಯನ್ನು ವಶಕ್ಕೆ ಪಡೆಯುವ ಮೂಲಕ ಆಲೂರ‌ನ್ನು ಮಾದರಿ ಪಟ್ಟಣವನ್ನಾಗಿ ಮಾಡಲು ಶ್ರಮಿಸುವುದಾಗಿ ತಾಲೂಕು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಗಣೇಶ್‌ ಹೊನ್ನವಳ್ಳಿ ತಿಳಿದ್ದಾರೆ.

Advertisement

ಪಟ್ಟಣದ ಹೊನ್ನಮ್ಮ ಕಾಂಪ್ಲೆಕ್ಸ್‌ ನಲ್ಲಿರುವ ತಾಲೂಕು ಕಾಂಗ್ರೆಸ್‌ ಕಚೇರಿಯಲ್ಲಿ ಮೇ 29ರಂದು ನಡೆಯಲಿರುವ ಪಟ್ಟಣ ಪಂಚಾಯಿತಿ ಚುನಾವಣೆಯ ಕುರಿತು ಚರ್ಚಿಸಲು ಕರೆಯಲಾಗಿದ್ದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚುನಾವಣೆಗೆ ಸನ್ನದ್ಧರಾಗಿ: ತಾಲೂಕಿನಲ್ಲಿ ಈ ಹಿಂದೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೋಲನ್ನಪ್ಪಿದ್ದ ಹಿನ್ನೆಲೆಯಲ್ಲಿ ಪಕ್ಷವನ್ನು ಬಲಪಡಿಸುವ ಮೂಲಕ ಪಟ್ಟಣ ಪಂಚಾಯಿತಿಯನ್ನು ವಶಕ್ಕೆ ಪಡೆಯುವ ಉದ್ದೇಶದಿಂದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಈ ಬಾರಿಯ ಪಟ್ಟಣ ಪಂಚಾಯಿತಿ ಚುನಾವಣೆಗೆ ಕಳೆದ ಬಾರಿಗಿಂತ ಪೈಪೋಟಿ ಹೆಚ್ಚಾಗಿದ್ದು ಕಾರ್ಯಕರ್ತರು ಉದಾಸೀನ ಮನೋಭಾವನೆ ಬಿಟ್ಟು ದಕ್ಷತೆಯಿಂದ ಕಾರ್ಯನಿರ್ವಹಿಸುವಂತೆ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ತಿಳಿಸಿದರು.

ಮೂಲ ಸೌಕರ್ಯಕ್ಕೆ ಆದ್ಯತೆ: ಈ ಹಿಂದೆ ಪಟ್ಟಣ ಪಂಚಾಯಿತಿಯನ್ನು ವಶಕ್ಕೆ ಪಡೆದಿದ್ದ ಜೆಡಿಎಸ್‌ ಪಕ್ಷದ ಚುನಾಯಿತ ಪ್ರತಿನಿಧಿಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಮುಖ್ಯವಾಗಿ ವಾರ್ಡ್‌ಗಳಲ್ಲಿ ಕುಡಿಯುವ ನೀರು, ವಸತಿ, ವಿದ್ಯುತ್‌, ಸೂಕ್ತ ರಸ್ತೆ ಒಳಚರಂಡಿ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳಿಂದ ಪಟ್ಟಣದ ನಾಗರಿಕರು ವಂಚಿತರಾಗಿದ್ದಾರೆ. ಹಾಗಾಗಿ ಕಾಂಗ್ರೆಸ್‌ ಪಕ್ಷದಿಂದ ಆಲೂರು ಪಟ್ಟಣವನ್ನು ಮಾದರಿ ಪಟ್ಟಣವನ್ನಾಗಿಸುವ ಹಿತದೃಷ್ಟಿಯಿಂದ ಪಟ್ಟಣದ 11 ವಾರ್ಡ್‌ಗಳಲ್ಲಿಯು ಅರ್ಹ ವ್ಯಕ್ತಿಗಳಿಗೆ ಟಿಕೆಟ್ ನೀಡಲಾಗುವುದು ಎಂದರು.

ಮಾದರಿ ಪಪಂ: ಆಲೂರು ಪಟ್ಟಣದ ಮತದಾರರು ತಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗೆ ನೀಡಿ ಜಯಶೀಲರನ್ನಾಗಿ ಮಾಡಿದರೆ ಆಲೂರು ಪಟ್ಟಣ ಪಂಚಾಯಿತಿಯನ್ನು ಅಭಿವೃದ್ಧಿ ಪಡಿಸಿ ಮಾದರಿ ಪಟ್ಟಣವನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.

Advertisement

ಇದೇ ಸಂದರ್ಭದಲ್ಲಿ 11 ವಾರ್ಡ್‌ಗಳ ಪೈಕಿ ಆಶಾ ಬಡಾವಣೆ ಬಿಟ್ಟು ಪಟ್ಟಣದ 10 ವಾರ್ಡ್‌ ಗಳಿಂದ ಸುಮಾರು 15 ಚುನಾವಣಾ ಅಕಾಂಕ್ಷಿಗಳಾಗಿ ಅರ್ಜಿಗಳನ್ನು ಹಾಕಿದ್ದಾರೆ. ಹೊಸದಾಗಿ ಜೆಡಿಎಸ್‌ ನಿಂದ ಕಾಂಗ್ರೆಸ್‌ಗೆ ಸುಮಾರು 10 ಜನ ಮುಖಂಡರು ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಸದಸ್ಯ ಖಾಲಿದ್‌ ಪಾಷ, ನಾಮನಿರ್ದೇಶಕ ಸದಸ್ಯರಾದ ನಾರಾಯಣ್‌, ರಾಜ್‌ಶೇಖರ್‌, ಕಾಂಗ್ರೆಸ್‌ ಮುಖಂಡರಾದ ಪ್ರತಾಪ್‌, ವಸಂತ್‌, ಈಶ್ವರ್‌, ಸೇರಿದಂತೆ ಪಕ್ಷದ ಕಾರ್ಯಕರ್ತರು ಪಟ್ಟಣದ ನಿವಾಸಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next