ಬೆಳಗಾವಿ: ಗಣೇಶೋತ್ಸವ ಹಬ್ಬಕ್ಕೆ ಇನ್ನೇನು ಒಂದೇ ದಿನ ಬಾಕಿ ಇರುವಾಗಲೇ ಇಲ್ಲಿಯ ಭಾಗ್ಯ ನಗರ ಮಾರ್ಗದಿಂದ ಸಾರ್ವಜನಿಕ ಗಣಪತಿ ಮೂರ್ತಿ ತೆಗೆದು ಕೊಂಡು ಹೋಗುವಾಗ ವಿದ್ಯುತ್ ತಂತಿ ತಗುಲಿ ಬೆಂಕಿ ಹತ್ತಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.
ಬೆಳಗಾವಿ ನಗರದಿಂದ ಬೇರೆ ಊರಿಗೆ ರವಿವಾರ ಬೆಳಿಗ್ಗೆ ಅತೀ ಎತ್ತರದ ಗಣಪತಿ ಮೂರ್ತಿ ತೆಗೆದುಕೊಂಡು ಹೋಗಲಾಗುತ್ತಿತ್ತು. ಮೂರ್ತಿ ಹೆಚ್ಚು ಎತ್ತರದಲ್ಲಿ ಇದ್ದಿದ್ದರಿಂದ ವಿದ್ಯುತ್ ತಂತಿಗೆ ಮೂರ್ತಿಯ ತಲೆಯ ಭಾಗ ತಗುಲಿದೆ. ಟ್ರ್ಯಾಕ್ಟರ್ ನಲ್ಲಿ ಸಾಗಿಸುತ್ತಿದ್ದ ಮೂರ್ತಿಗೆ ಪ್ಲಾಸ್ಟಿಕ್ ಹಾಕಿದ್ದರಿಂದ ಬೆಂಕಿ ಹೊತ್ತುಕೊಂಡಿದೆ. ಕೂಡಲೇ ಸ್ಥಳೀಯರು ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಗಣಪತಿ ಮೂರ್ತಿ ಸಾಗಿಸುತ್ತಿರುವ ಬಗ್ಗೆ ಗಣಪತಿ ಮಹಾ ಮಂಡಳದವರು ಹೆಸ್ಕಾಂನವರಿಗೆ ಯಾವುದೇ ಮಾಹಿತಿ ನೀಡಿಲ್ಲ. ಗಣಪತಿ ಮೂರ್ತಿ ಅತೀ ಎತ್ತರವಾಗಿರುವುದರಿಂದ ತಂತಿ ತಗಲುವ ಮುನ್ಸೂಚನೆ ಇದ್ದರೂ ಭಂಡ ಧೈರ್ಯ ಮಾಡಿ ಮೂರ್ತಿ ಸಾಗಿಸುವಾಗ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.
ಗಣಪತಿ ಮೂರ್ತಿಗಳನ್ನು ತೆಗೆದುಕೊಂಡು ಹೋಗುವಾಗ ಮೊದಲು ಹೆಸ್ಕಾಂಗೆ ಮಾಹಿತಿ ನೀಡಬೇಕು. ಅತೀ ಎತ್ತರದ ಮೂರ್ತಿಗಳು ಇದ್ದಾಗ ಆ ಮಾರ್ಗದಲ್ಲಿ ವಿದ್ಯುತ್ ಕಡಿತಗೊಳಿಸಲಾಗುವುದು. ಪ್ರತಿಯೊಂದು ಮಂಡಳದವರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಅವಘಡ ಸಂಭವಿಸದಂತೆ ಎಚ್ಚರಿಕೆ ವಹಿಸಲು ಹೆಸ್ಕಾಂನೊಂದಿಗೆ ಕೈ ಜೋಡಿಸುವಂತೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಅರವಿಂದ ಗದಗಕರ ಮನವಿ ಮಾಡಿದ್ದಾರೆ.