Advertisement

Ganesha Idols: ಪಿಒಪಿ ಗಣೇಶ ತ್ಯಜಿಸಿ: ಮಣ್ಣಿನ ಮೂರ್ತಿ ಕೂರಿಸಿ

02:56 PM Sep 04, 2023 | Team Udayavani |

ಶ್ರೀರಂಗಪಟ್ಟಣ: ರಾರಸಾಯನಿಕ ಬಣ್ಣ ಲೇಪಿತ ಗಣೇಶನ ಮೂರ್ತಿ ತಯಾರಿಕೆ ಹಾಗೂ ಮಾರಾಟ ಮಾಡದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದ್ದರೂ ಸದ್ದಿಲ್ಲದಂತೆ ತಾಲೂಕಾದ್ಯಂತ ಪಿಒಪಿ ಮೂರ್ತಿಗಳ ಹಾವಳಿ ಹೆಚ್ಚಾಗಿದ್ದು ಮಣ್ಣಿನಿಂದ ತಯಾರಿಸುವ ಮೂರ್ತಿಗಳಿಗೆ ಬೇಡಿಕೆ ಕುಸಿಯುತ್ತಿದೆ.

Advertisement

ಪರಿಸರಕ್ಕೆ ಹಾನಿಯಾಗುವ ಪಿಒಪಿ ಮೂರ್ತಿಗಳಿಗೆ ಕಡಿವಾಣ ಹಾಕಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದ್ದರೂ ಸಹ ಹಬ್ಬದ ಹಿಂದಿನ ದಿನಗಳಲ್ಲಿ ಪಿಒಪಿ ಮೂರ್ತಿಗಳೇ ಹೆಚ್ಚು ಮಾರಾಟವಾಗುತ್ತವೆ. ಶ್ರೀರಂಗ ಪಟ್ಟಣದ ಹಲವು ಭಾಗಗಳಲ್ಲಿ ಮಣ್ಣಿನ ಮೂರ್ತಿಗಳ ತಯಾರಿಸುವ ತಯಾರಕರು ಸಿದ್ಧತೆ ಮಾಡಿಕೊಂಡಿ ದ್ದಾರೆ. ಇದೇ ತಿಂಗಳಿನಲ್ಲಿ ನಡೆಯುವ ಗೌರಿಗಣೇಶನ ಹಬ್ಬಕ್ಕೆಂದು ಕಳೆದ 8 ತಿಂಗಳಿಂದ ಮಣ್ಣಿನಿಂದ ತಯಾರಿಸಿದ ಗೌರಿಗಣೇಶನ ಮೂರ್ತಿಗಳನ್ನು ತಯಾರಿಸಿ ಅವುಗಳಿಗೆ ಬಣ್ಣ ಹಚ್ಚಿ ಸಿದ್ಧತೆಗೊಳಿಸಲಾಗುತ್ತಿದೆ.

ಮಣ್ಣಿನ ಮೂರ್ತಿಗಳ ಸಿದ್ಧತೆ: ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ವರಸ್ವಾಮಿ ಮತ್ತು ಅವರ ಮಗ ಶೇಖರ್‌ ಕಳೆದ 32 ವರ್ಷಗಳಿಂದ ಮಣ್ಣಿನಿಂದ ಗೌರಿ ಗಣೇಶ ಮೂರ್ತಿ ತಯಾರಿಸಿ ಮಾರಾಟ ಮಾಡಿಕೊಂಡು ಬಂದಿದ್ದಾರೆ. ತಾತನ ಕಾಲದಲ್ಲಿ ಮಣ್ಣಿನ ಮಡಿಕೆ ಹಾಗೂ ದೀಪಗಳ ತಯಾರಿಸಿ ಮಾಡಿ ಮಾರಾಟ ಜೀವನ ಸಾಗಿಸುತ್ತಿ ದ್ದರು. ವೃತ್ತಿಯನ್ನು ಮುಂದುವರಿಸಿ ಇದೀಗ ಗೌರಿ ಗಣೇಶ ಮೂರ್ತಿಗಳ ತಯಾರಿಸಿ ಮಾರಿ ಜೀವನ ನಡೆಸುತ್ತಿದ್ದಾರೆ. ಕುಲ ಕಸಬನ್ನು ಬಿಡದೆ ತಾತನ ಕಾಲ ದಿಂದಲೂ ಮುಂದುವರಿಸಿ ಇದೀಗ ಅವರ ಜೀವನ ಸುಧಾರಿಸಿಕೊಂಡಿದೆ. ವ್ಯವಸಾಯದ ಜೊತೆಗೆ ಮನೆ ಮಂದಿಯಲ್ಲ ಗೌರಿ ಗಣೇಶನ ಮೂರ್ತಿಗಳ ತಯಾರಿಸಲು ದುಡಿಯುತ್ತಿದ್ದಾರೆ. ಇದಲ್ಲದೆ ಕೂಲಿ ಕಾರ್ಮಿಕರನ್ನು ಸಹ ಕರೆದುಕೊಂಡು ಕೆಲಸ ಮಾಡುತ್ತಾರೆ.

ಬೇರೆ ಜಿಲ್ಲೆಯಿಂದಲೂ ಬರುವ ಗ್ರಾಹಕರು: ಬೆಳಗೊಳ ಹೋಬಳಿಯಲ್ಲಿರುವ ಗ್ರಾಮಗಳಷ್ಟೆ ಅಲ್ಲದೆ ಮೈಸೂರು, ಮಂಡ್ಯದಿಂದ ಜನರು ಬಂದು ಗೌರಿ ಗಣೇಶ ಮೂರ್ತಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ಕೆಲವು ಗ್ರಾಮಗಳ ಯುವಕರು ಮಣ್ಣಿನ ಮೂರ್ತಿಗಳನ್ನು ತೆಗೆದುಕೊಳ್ಳಲು ಬುಕ್ಕಿಂಗ್‌ ಮಾಡಿ ಗೌರಿ ಗಣೇಶನ ಮೂರ್ತಿಗಳನ್ನು ಅವರಿಗೆ ಇಷ್ಟವಾದ ರೀತಿಯಲ್ಲಿ ತಯಾರಿಸಲು ಮುಂಗಡವಾಗಿ ಹಣ ನೀಡಿ ಹೋಗುತ್ತಾರೆ. ಇದೀಗ ಮಣ್ಣಿನ ಮೂರ್ತಿಗಳ ಬೇಡಿಕೆಗೆ ಹೆಚ್ಚು ಒಲವು ಬರುತ್ತಿದೆ. ಮೂರ್ತಿಗಳ ಸಿದ್ಧತೆ ಕೂಡ ಆಗಿವೆ ಎಂದು ಮೂರ್ತಿಗಳ ತಯಾರಕ ಶೇಖರ್‌ ತಿಳಿಸಿದ್ದಾರೆ.

ಪಿಒಪಿ ಮೂರ್ತಿಬ್ಯಾನ್‌ ಮಾಡಬೇಕು: ಗೌರಿ ಗಣೇಶ ಹಬ್ಬ ಬಂತೆಂದರೆ ನಾಲೆಗಳು, ಬಾವಿಗಳು,ಕಿರು ಕಾಲುವೆಗಳ ನದಿ ಬಳಿ ಬಿಟ್ಟ ಪಿಒಪಿ ಗೌರಿ ಗಣೇಶ ಮೂರ್ತಿಗಳು ನೀರಿನಲ್ಲಿ ಕರಗದೆ ತೇಲುತ್ತಿರುತ್ತವೆ. ನಾಲೆಗಳ ನೀರು ನಿಂತ ಸಮಯದಲ್ಲಿ ಅಸ್ಥಿ ಪಂಜರದಂತೆ ಎಲ್ಲೆಂದರಲ್ಲಿ ಎದ್ದು ಕಾಣುತ್ತಿರುತ್ತವೆ. ಈಗಾಗಲೇ ಮೈಸೂರು ರಸ್ತೆ ಬಳಿ ಈ ಬಗ್ಗೆ ದೂರುಗಳು ಕೇಳಿ ಬಂದಿವೆ. ಮುಂಜಾಗ್ರತ ಕ್ರಮವಾಗಿ ಪಿಒಪಿ ಬದಲು ಮಣ್ಣಿನ ಮೂರ್ತಿ ಗಳನ್ನು ಕೂರಿಸಲು ತಹಶೀಲ್ದಾರ್‌ ಕಚೇರಿ ಅಥವಾ ಪಂಚಾಯಿತಿ ಪುರಸಭೆಗಳ ಮೂಲಕ ಸಾರ್ವಜನಿಕರಿಗೆ ತಿಳಿವಳಿಕೆ ಹೇಳಬೇಕು ಸರ್ಕಾರ ಪಿಒಪಿ ಮೂರ್ತಿಗಳಿಗೆ ಕಡಿವಾಣ ಹಾಕಬೇಕು ಎಂದು ರೈತ ಮುಖಂಡ ಸುನೀಲ್‌ ಬೆಳಗೊಳ ಒತ್ತಾಯಿಸಿದ್ದಾರೆ.

Advertisement

ಜಿಲ್ಲಾಧಿಕಾರಿಗಳು ಸೋಮವಾರ ಸಭೆಕರೆದಿದ್ದು, ಸಭೆಯಲ್ಲಿ ಪಿಒಪಿ ಮೂರ್ತಿಗಳ ನಿಷೇಧದ ಬಗ್ಗೆ ಚರ್ಚೆ ಮಾಡುತ್ತೇನೆ. ಪರಿಸರ ಹಾನಿ ತಡೆಯಲು ಈ ಬಾರಿ ಗೌರಿ-ಗಣೇಶ್‌ ಹಬ್ಬದ ಅಂಗವಾಗಿ ಪಿಒಪಿ ಮೂರ್ತಿಗಳ ಮಾರಾ ಟಕ್ಕೆ ಕಡಿವಾಣ ಹಾಕಲು ಹಾಗೂ ಮಾರಾಟ ಮಾಡಿದರೆ ಈ ಬಗ್ಗೆ ಮಾರಾಟಗಾರರಿಗೆ ನೋಟಿಸ್‌ ಜಾರಿ ಮಾಡಲಾ ಗುವುದು. ಪರಿಸರ ಸಂರಕ್ಷಣೆಗೆ ಮಣ್ಣಿನ ಮೂರ್ತಿಗಳ ಮಾರಾಟ ಮಾಡಲು ಸೂಚಿಸಲಾಗುವುದು. – ಕುಮಾರ್‌, ಹೆಚ್ಚುವರಿ ತಹಶೀಲ್ದಾರ್‌, ಶ್ರೀರಂಗಪಟ್ಟಣ

-ಗಂಜಾಂ ಮಂಜು

Advertisement

Udayavani is now on Telegram. Click here to join our channel and stay updated with the latest news.

Next